ಬೆಂಗಳೂರು, (www.thenewzmirror.com) :
ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಉಲ್ಬಣವಾಗಿರೋದ್ರಿಂದ ಬೇಸಿಗೆ ಮುಹಿಯುವ ವರೆಗೂ ಈಜುಕೊಳ ಬಂದ್ ಮಾಡಲು ಬೆಂಗಳೂರು ಜಲಮಂಡಳಿ ತೀರ್ಮಾನ ಮಾಡಿದೆ. ನಿಯಮ ಮೀರಿ ಸಮ್ಮರ್ ಕ್ಯಾಂಪ್ ನಡೆಸುವುದು ಹಾಗೂ ಓಪನ್ ಮಾಡಿದ್ದು ಕಂಡು ಬಂದರೆ ಅಂಥವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನ ನೀಡಿದೆ.
ಬೇಸಿಗೆ ಆರಂಭದಲ್ಲೇ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಉದ್ಭವವಾಗಿದೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ಕೊಟ್ಟಿರುವ ಜಲಮಂಡಳಿ, ಇದಕ್ಕೆ ತೊಂದರೆ ಆಗದಂತೆ ಕ್ರಮಕ್ಕೆ ಮುಂದಾಗುತ್ತಿದೆ.
ಮೇಲ್ನೋಟಕ್ಕೆ ನೀರಿನ ಸಮಸ್ಯೆ ಆಗುತ್ತಿಲ್ಲ ಎಂದು ಹೇಳುತ್ತಿದ್ದರೂ ಜಲಮಂಡಳಿಯ ಕೆಲ ನಿರ್ಧಾರಗಳು ಇದಕ್ಕೆ ಇಂಬು ನೀಡುತ್ತಿದೆ. ಜಲಮಂಡಳಿ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ತೀರ್ಮಾನ ಹಲವು ಆತಂಕಕ್ಕೆ ಕಾರಣವಾಗಿದೆ.
ಈಜುಕೊಳ ಬಂದ ಮಾಡಲಿ ಸೂಚಿಸಿರುವುದಲ್ಲದೆ, ಬೆಂಗಳೂರು ಜಲಮಂಡಳಿಯ ವತಿಯಿಂದ ದೊಡ್ಡಗಾತ್ರದ ನೀರಿನ ಸಂಪರ್ಕ ಪಡೆದಿರುವ ಪ್ರಮುಖ ಗ್ರಾಹಕರುಗಳೊಂದಿಗೆ ಇತ್ತೀಚೆಗೆ ನಡೆಸಲಾಗಿತ್ತು. ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ.
ದೊಡ್ಡಗಾತ್ರದ ಪ್ರಮುಖ ಗ್ರಾಹಕರ ನೀರಿನ ಪೂರೈಕೆಯಲ್ಲಿ ಶೇ.20ರಷ್ಟು ನೀರನ್ನು ಕಡಿತಗೊಳಿಸಲು ನಿರ್ಧರಿಸಲಾಯ್ತು. ಮಾ.15ರಿಂದ ಹಂತಹಂತವಾಗಿ ಮಂಡಳಿಯಿಂದ ಪೂರೈಸಲಾಗುತ್ತಿರುವ ಕಾವೇರಿ ನೀರನ್ನು ಕಡಿತಗೊಳಿಸಲಾಗುವುದು ಎಂದು ತೀರ್ಮಾನಿಸಲಾಗಿದೆ.
ಮಾರ್ಚ್ 15 ರಿಂದ ಏ.1ರವರೆಗೆ ಶೇ.10ರಷ್ಟು ಹಾಗೂ ಏ.1ರಿಂದ ಏ.15ರವರೆಗೆ ಶೇ.10ರಷ್ಟು ಸೇರಿದಂತೆ ಶೇ.20ರಷ್ಟು ಮಂಡಳಿಯಿಂದ ಪೂರೈಸಲಾಗುತ್ತಿರುವ ಕಾವೇರಿ ನೀರು ಕಡಿತಗೊಳಿಸಲಾಗುವುದು ಎಂದು ಜಲಮಂಡಳಿ ಮಾಹಿತಿ ನೀಡಿದೆ.
ಬೆಂಗಳೂರು ನಗರದಲ್ಲಿ ಒಟ್ಟು 38 ದೊಡ್ಡ ಗಾತ್ರದ ನೀರಿನ ಸಂಪರ್ಕ ಪಡೆದ ಪ್ರಮುಖ ಗ್ರಾಹಕರಿದ್ದು,ಅದರಲ್ಲಿ ನಿಮ್ಹಾನ್ಸ್, ಏರ್ ಫೋರ್ಸ್ ಕಮಾಂಡಿಂಗ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿರುವ ನೀರಿನಲ್ಲಿ ಯಾವುದೇ ರೀತಿಯಲ್ಲಿ ಕಡಿತಗೊಳಿಸದೇ ಉಳಿದ 35 ದೊಡ್ಡ ಗಾತ್ರದ ನೀರಿನ ಸಂಪರ್ಕ ಪಡೆದ ಪ್ರಮುಖ ಗ್ರಾಹಕರಿಗೆ ಕಾವೇರಿ ನೀರು ಕಡಿತಗೊಳಿಸಲು ನಿರ್ಧರಿಸಲಾಗಿದೆ.
ದೊಡ್ಡಗಾತ್ರದ ನೀರಿನ ಸಂಪರ್ಕ ಪಡೆದಿರುವವರಿಗೆ ಮಂಡಳಿ ವತಿಯಿಂದ ಇದುವರೆಗೆ ಶೇ.95ರಿಂದ ಶೇ.100ರಷ್ಟು ಪೂರೈಸಲಾಗುತ್ತಿದ್ದು, ಇದರಲ್ಲಿ ಇನ್ಮುಂದೆ ಶೇ.20ರಷ್ಟು ನೀರು ಪೂರೈಕೆ ಕಡಿತಗೊಳಿಸಲಾಗುವುದು. ರೈಲ್ವೆ, ಎಚ್ಎಎಲ್,ಏರ್ ಪೋರ್ಸ್, ಡಿಫೆನ್ಸ್, ಸಿ.ಆರ್.ಪಿ.ಎಫ್,ಬಯೋಕಾನ್,ನಿಮ್ಹಾನ್ಸ್, ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ದೊಡ್ಡಗಾತ್ರದ ನೀರಿನ ಸಂಪರ್ಕ ಪಡೆದಿರುವ ಅನೇಕ ಸಂಸ್ಥೆಗಳು ತಮ್ಮ ಕ್ಯಾಂಪಸ್ ನಲ್ಲಿ ನೀರಿನ ಪ್ರಾಮುಖ್ಯತೆ, ನೀರಿನ ಉಳಿತಾಯ ಕುರಿತು ಅರಿವು ಮೂಡಿಸಬೇಕು ಎಂದು ಜಲಮಂಡಳಿ ಸೂಚನೆ ನೀಡಿದೆ.
ಸದ್ಯ ಬೆಂಗಳೂರಿಗೆ ನೀರಿನ ಸಮಸ್ಯೆ ಎದುರಾಗಿದೆ. ಬೆಂಗಳೂರಿನಲ್ಲಿ 1.40ಕೋಟಿ ಜನಸಂಖ್ಯೆ ಇದ್ದು,ಈ ಸಂದರ್ಭದಲ್ಲಿ ನೀರು ಒದಗಿಸುವುದು ಸವಾಲಾಗಿದೆ;ಮಂಡಳಿ ಬೆಂಗಳೂರಿಗರಿಗೆ ಅಗತ್ಯ ನೀರು ಒದಗಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.