ಬೆಂಗಳೂರು, (www.thenewzmirror.com) :
ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ. ಮತ್ತೊಂದ್ಕಡೆ ಬಿಜೆಪಿ ಮೋದಿ ಹೆಸರು ಹೇಳಿಕೊಂಡು ಚುನಾವಣೆ ಗೆಲ್ಲಬೇಕು ಎನ್ನುವ ಲೆಕ್ಕಚಾರದಲ್ಲಿದೆ. ಪ್ರಧಾನಿ ಮೋದಿ ಸತತ ಮೂರನೇ ಬಾರಿ ದೇಶದ ಚುಕ್ಕಾಣಿ ಹಿಡಿಯುತ್ತಾರೆ ಎನ್ನುವ ಸಮೀಪಕ್ಷೆಗಳು ಆಗಾಗೆ ಬರುತ್ತಿವೆ. ಒಂದು ವೇಳೆ ಈಗಲೇ ಚುನಾವಣೆ ನಡೆದರೆ ಬಿಜೆಪಿ ಹೆಚ್ಚಿನ ಸ್ಥಾನಗಳನ್ನ ಗೆಲ್ಲಲಿದೆ ಎಂದೂ ಹೇಳಲಾಗುತ್ತಿದೆ.
ಇದಕ್ಕೆ ರಾಮಮಂದಿರ ಉದ್ಘಾಟನೆ ಒಂದು ಕಾರಣವಾದರೆ ಮತ್ತೊಂದು ಹಿಂದುತ್ವದ ಪರ ನಿಂತಿರುವ ಬಿಜೆಪಿ ನಿಲುವು ಭರ್ಜರಿ ಗೆಲುವಿಗೆ ಕಾರಣ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಇದೆಲ್ಲದರ ನಡುವೆ ಪ್ರಧಾನಿ ಮೋದಿ ಹವಾದಲ್ಲಿ ನಾವು ಇನ್ನಷ್ಟು ಹೆಚ್ಚಿನ ಸ್ಥಾನವನ್ನ ಗೆದ್ದೇ ಗೆಲ್ಲುತ್ತೀವಿ ಎನ್ನುವ ಆಸೆಯನ್ನ ಬಿಜೆಪಿ ನಾಯಕರು ಇಟ್ಟುಕೊಂಡಿದ್ದಾರೆ. ಹೀಗಿರುವಾಗ್ಲೇ ಬಿಜೆಪಿಯ ಫೈರ್ ಬ್ರಾಂಡ್ ಹಾಗೂ ಪಕ್ಷದ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಕೊಟ್ಟ ಹೇಳಿಕೆ ಸ್ವತಃ ಮೋದಿಗೆ ಶಾಕ್ ತರಿಸಿದೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನವನ್ನ ಗೆಲ್ಲುವುದರದಲ್ಲಿ ಯಾವುದೇ ಅನುಮಾನವಿಲ್ಲ ಆದರೆ ಇದಕ್ಕೆ ಹಿಂದೂತ್ವ ಕಾರಣವೇ ಹೊರತೆ ಪ್ರಧಾನಿ ಮೋದಿಯಲ್ಲ. ಲೋಕ ಸಮರದಲ್ಲಿ ಮೋದಿ ಮ್ಯಾಜಿಕ್ ಹೆಚ್ಚು ವರ್ಕೌಟ್ ಆಗುವುದಿಲ್ಲ ಎಂದೂ ಭವಿಷ್ಯ ನುಡಿದಿದ್ದಾರೆ.
ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮೂಲ ಆರ್‌ಎಸ್‌ಎಸ್‌ನಲ್ಲಿ ವ್ಯಕ್ತಿಗಳಿಗಿಂತ ‘ಸಂಗತನ್’ ಅಂದರೆ ಸಂಘಟನೆ ಮತ್ತು ‘ಸಿದ್ಧಾಂತ ಅಂದರೆ ತತ್ವಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇಲ್ಲಿ ವ್ಯಕ್ತಿಗೆ ಮನ್ನಣೆ ನೀಡುವುದಿಲ್ಲ ಬದಲಾಗಿ ಪಕ್ಷಕ್ಕೆ ಮನ್ನಣೆ ನೀಡಲಾಗಿದೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಬಿಜೆಪಿ ಈ ಹಿಂದಿನ ಎರಡು ಲೋಕ ಸಮರದಲ್ಲಿ ಗೆಲ್ಲೋಕೆ ಸಂಘಟನೆ ಹಾಗೂ ಹಿಂದುತ್ವದ ಸಿದ್ಧಂತಗಳೇ ಕಾರಣ ಅಂತಾನೂ ಅಭಿಪ್ರಾಯ ಪಟ್ಟಿರುವ ಸುಬ್ರಮಣಿಯನ್ ಸ್ವಾಮಿ, ಇದೇ ಮೊದಲ ಬಾರಿಗೆ ಹಿಂದೂಗಳು ತಮ್ಮ ಗುರುತಿನ ಬಗ್ಗೆ ಹೆಮ್ಮೆಪಡುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ನೆಹರೂ ಕಾಲದಲ್ಲಿ ಹಿಂದುಗಳು ಹೆಚ್ಚು ನೆಮ್ಮದಿಯಾಗಿ ಇರಲಿಲ್ಲ ಎಂಬ ಅರ್ಥ ಬರುವ ರೀತಿಯಲ್ಲಿ ಮಾತನಾಡಿರುವ ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಪಕ್ಷವು 370 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ಎನ್‌ಡಿಎ 400 ಸ್ಥಾನಗಳನ್ನ ದಾಟಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಈ ಹಿಂದೆ ಕೇಂದ್ರದಲ್ಲಿ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿದ್ದವರು ಈ ಬಾರಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲೋದಿಕ್ಕೆ ನಾವೇ ಕಾರಣ ಅಂತ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಆದರೆ ಇದೊಂದೇ ಕಾರಣ ಅಲ್ಲ ಅಂತ ಅಭಿಪ್ರಾಯ ಪಟ್ಟಿರುವ ಸುಬ್ರಮಣಿಯನ್ ಸ್ವಾಮಿ, ಅಂತಹ ವಿಷಯಗಳಿಗೆ ಪ್ರಾಮುಖ್ಯತೆ ನೀಡಬೇಕಾಗಿಲ್ಲ ಎಂದು ಹೇಳಿದಿದ್ದಾರೆ.
ಹಾಗಂದ ಮಾತ್ರಕ್ಕೆ ಮೋದಿ ಮ್ಯಾಜಿಕ್ ಈ ಬಾರಿ ಬಿಜೆಪಿ ಭರ್ಜರಿ ಗೆಲುವಿಗೆ ಕಾರಣವಾಗುತ್ತಾ ಎನ್ನುವ ಪ್ರಶ್ನೆಗೆ ಮೋದಿ ಮ್ಯಾಜಿಕ್ ಅಂತ ಏನೂ ಹೇಳೋದಿಕ್ಕೆ ಆಗೋದಿಲ್ಲ. ಬಿಜೆಪಿ-ಆರ್‌ಎಸ್‌ಎಸ್‌ನಲ್ಲಿ ವ್ಯಕ್ತಿಗಳನ್ನು ಪೀಠಕ್ಕೆ ಹಾಕಿಲ್ಲ. ಅದು ಕಾಂಗ್ರೆಸ್ ಸಂಸ್ಕೃತಿ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿ ಕೂಟ ಅಧಿಕಾರದ ಗದ್ದುಗೆ ಹಿಡಿಯುವುದು ಕಟ್ಟಿಟ್ಟ ಬುತ್ತಿ ಎನ್ನುವುದನ್ನ ಒತ್ತಿ ಒತ್ತಿ ಹೇಳಿರುವ ಸುಬ್ರಮಣಿಯನ್ ಸ್ವಾಮಿ, ಕಾಂಗ್ರೆಸ್ ಸಂಸ್ಕೃತಿ ಹಾಗೂ ಅಲ್ಲಿರೋ ಆಂತರಿಕ ಕಿತ್ತಾಟವೂ ನಮಗೆ ಪ್ಲಸ್ ಆಗಲಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಎರಡು ಬಾರಿ ಪ್ರಧಾನಿಯಾಗಿ ದೇಶದವನ್ನ ಮುನ್ನಡೆಸಿರುವ ಮೋದಿಯ ಹವಾ ಕಡಿಮೆಯಾಯ್ತಾ..? ಎನ್ನುವ ಪ್ರಶ್ನೆ ಇದೀಗ ಕಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಬಿಜೆಪಿ ಹಿರಿಯ ಮುಖಂಡ ಕೊಟ್ಟಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಉಂಟು ಮಾಡಿದೆ. ನಿಜವಾಗ್ಲೂ ಮೋದಿ ಹವಾ ಕಡಿಮೆಯಾಗಿದ್ಯಾ..? ಇಲ್ಲ ಮೋದಿ ಒಂದೇ ಬಿಜೆಪಿ ಗೆಲುವಿಗೆ ಬ್ರಹ್ಮಾಸ್ರ್ತನಾ ಎನ್ನುವುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.