ಅಂತಾರಾಜ್ಯ ಜಲ ವಿವಾದ ಬಗೆ ಹರಿಸಲು ಹಾಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಒಂದೇ ನ್ಯಾಯ ಮಂಡಳಿ ಸ್ಥಾಪಿಸಿ:ಬೊಮ್ಮಾಯಿ

RELATED POSTS

ದೆಹಲಿ(thenewzmirror.com): ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳ ಮಾಡಲು ಕರ್ನಾಟಕಕ್ಕೆ ಅವಕಾಶ ಮಾಡಿಕೊಡಲು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ,  ಸುಪ್ರೀಂ ಕೋರ್ಟ್ ಗೆ ಅಂತರಾಜ್ಯ ಜಲ ವಿವಾದದ ಕಾನೂನಿನ ಬಗ್ಗೆ ಸ್ಪಷ್ಟವಾಗಿ ತಿಳಿಸಿ ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಸಂಸತ್ತಿನಲ್ಲಿ ಜಲಶಕ್ತಿ ಇಲಾಖೆಯ ಬೇಡಿಕೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕದ ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆ ನ್ಯಾಯ ಮಂಡಳಿ ಆದೇಶವಾಗಿ 15 ವರ್ಷ ಕಳೆದಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣಾ ರಾಜ್ಯಗಳ ನಡುವಿನ ನೀರಿನ ಹಂಚಿಕೆ ಗೊಂದಲದಿಂದ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದ್ದು, ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿ, ಸುಪ್ರೀಂ ಕೋರ್ಟ್ ಗೆ ಅಂತರಾಜ್ಯ ಜಲ ವಿವಾದದ ಕಾನೂನಿನ ಬಗ್ಗೆ ಸ್ಪಷ್ಟವಾಗಿ ತಿಳಿಸಿ ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆ ಅವಕಾಶ ಕಲ್ಪಿಸಿಕೊಡಬೇಕು ಆಗ್ರಹಿಸಿದರು.

ಈ ಯೋಜನೆಯಲ್ಲಿ  ಕರ್ನಾಟಕ ಮಧ್ಯಂತರ ರಾಜ್ಯವಾಗಿದ್ದು, ಮಹಾರಾಷ್ಟ್ರದವರು ನೀರು ಕೊಡುವುದಿಲ್ಲ. ಆಂಧ್ರ ಹಾಗೂ ತೆಲಂಗಾಣಾದವರು ನೀರು ಬೇಡುತ್ತಾರೆ. ನಮ್ಮ ಪರಿಸ್ಥಿತಿ ಏನು ಮಾಡಬೇಕು. 2010 ರಲ್ಲಿ ಕೃಷ್ಣಾ ನ್ಯಾಯಮಂಡಳಿ ಆದೇಶ ನೀಡಲಾಗಿದೆ. ಈಗ 2025 ಕ್ಕೆ ಬಂದಿದ್ದೇವೆ. ಈಗಲ್ಲೂ ನೋಟಿಫಿಕೇಶನ್ ಆಗಿಲ್ಲ. ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರ್ ಗೆ ಹೆಚ್ಚಳ ಮಾಡುವುದು ನಮ್ಮ ಪ್ರಸ್ತಾವನೆ ಅಲ್ಲ, ಅದು ನಮ್ಮ ಹಕ್ಕು. ಅದು ನ್ಯಾಯಮಂಡಳಿ ತೀರ್ಮಾನವಾಗಿದೆ. ಇದರಿಂದ ಮಹಾರಾಷ್ಟ್ರದಲ್ಲಿ ಪ್ರವಾಹ ಉಂಟಾಗುವುದಿಲ್ಲ. ಆಲಮಟ್ಟಿ ಜಲಾಶಯದ ಎತ್ತರ  ಹೆಚ್ಚಳದಿಂದ ತೆಲಂಗಾಣಾ, ಆಂಧ್ರ ಪ್ರದೇಶಕ್ಕೂ ಅನುಕೂಲವಾಗಲಿದೆ. ಆಂಧ್ರ ಹಾಗೂ ತೆಲಂಗಾಣ ನಡುವೆ ನೀರು ಹಂಚಿಕೆಯ ಸಮಸ್ಯೆ ಉದ್ಭವವಾಗಿದೆ. ಅದನ್ನು ಅವರು ಬಗೆ ಹರಿಸಿಕೊಳ್ಳಬೇಕು ಎಂದು ಹೇಳಿದರು. 

ಮಹದಾಯಿ ಅನುಮತಿ ಕೊಡಿ:

ಇನ್ನು ಮೇಕೆದಾಟು ನಮ್ಮ ಹಕ್ಕು. ಸುಮಾರು ಆರು ವರ್ಷದಿಂದ ಯಾವುದೇ ತೀರ್ಮಾನ ಆಗಿಲ್ಲ.  ಈ ಬಗ್ಗೆ ಕೇಂದ್ರ ಸರ್ಕಾರ ಮುಂದಾಳತ್ವ ತೆಗೆದುಕೊಂಡು ಸಮಸ್ಯೆ ಬಗೆ ಹರಿಸಲು ಸಿಡಬ್ಲ್ಯುಸಿಗೆ ಮತ್ರು ಸಿಡಬ್ಲ್ಯು ಎಂಎ ಗೆ  ನಿರ್ದೇಶನ ನೀಡಬೇಕು. ಅದೇ ರೀತಿ ಮಹಾದಾಯಿ ನ್ಯಾಯಂಮಡಳಿ ಆದೇಶ ಆಗಿದೆ. ಆದರೆ, ಪರಿಸರ ಇಲಾಖೆಯ ಅನುಮತಿ ನೀಡುತ್ತಿಲ್ಲ. ಇದರಿಂದ ಕರ್ನಾಟಕ ರಾಜ್ಯ ಸಮಸ್ಯೆ ಎದುರಿಸುವಂತಾಗಿದೆ. ಗೋದಾವರಿ, ಮಹಾನದಿ ಕೃಷ್ಣಾ ಕಾವೇರಿ  ಜೋಡಣೆಯ ಯೋಜನೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಈ ವಿಚಾರದಲ್ಲಿ  ಎನ್ ಡಬ್ಲುಡಿಎಗೆ ಸೂಕ್ತ ನಿರ್ದೇಶನ ನೀಡಿ ಕರ್ನಾಟಕದ ನೀರಿನ ಹಕ್ಕನ್ನು ರಕ್ಷಿಸಬೇಕು‌ ಎಂದು ಆಗ್ರಹಿಸಿದರು. 

ಬೆಡ್ತಿ ವರದಾ ಜೋಡಿಣೆ ಆರಂಭಿಸಿ:

ಬೆಡ್ತಿ ವರದಾ ಮೊದಲ ನದಿ ಜೋಡಣೆ ಯೋಜನೆ ಆಗಿದ್ದು, ಇದುವರೆಗೂ ಕೈಗೆತ್ತಿಕೊಂಡಿಲ್ಲ ಕೂಡಲೇ ಜೋಡಣಾ ಕಾರ್ಯವನ್ನು ಪ್ರಾರಂಭಿಸಬೇಕು.  ಬೆಡ್ತಿ ವರದಾ ನದಿ ಜೋಡಣೆ ನನ್ನ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಬರುತ್ತದೆ. ಈ ನದಿಗಳ ಜೋಡಣೆ ಯೋಜನೆ ಕೈಗೆತ್ತಿಕೊಳ್ಳಬೇಕು. ಪ್ರಧಾನಿ ಮೋದಿಯವರು ಕುಡಿಯುವ ನೀರಿಗೆ ಹೊಸ ಯೋಜನೆ ನೀಡುವ ಮೂಲಕ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಅಂತಾರಾಜ್ಯ ಜಲ ವಿವಾದಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊ ಬೇಕೆಂದು ಮನವಿ ಮಾಡಿದರು.

ಒಂದೇ ನ್ಯಾಯ ಮಂಡಳಿ ರಚಿಸಿ:

ಅಂತಾರಾಜ್ಯ ಜಲ ವಿವಾದಗಳನ್ನು ಬಗೆ ಹರಿಸಲು ಸುಪ್ರೀಂ ಕೋರ್ಟ್ ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ದೇಶಾದ್ಯಂತ ಒಂದೇ ನ್ಯಾಯ ಮಂಡಳಿ ಸ್ಥಾಪನೆ ಮಾಡಿ, ಆರು ತಿಂಗಳಲ್ಲಿ ವಿವಾದ  ಇತ್ಯರ್ಥ ಪಡಿಸಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. 

ಇಡೀ ದೇಶ ಅಂತಾರಾಜ್ಯ ಜಲ ವಿವಾದ ಕಾಯ್ದೆ ಕಾರಣದಿಂದ ಆರ್ಥಿಕವಾಗಿ ಹಾಗೂ ಜೀವನ ಕ್ರಮದಲ್ಲಿಯೂ ಸಾಕಷ್ಟು ನಷ್ಟ ಅನುಭವಿಸುತ್ತಿದ್ದೇವೆ. ಈ ಕಾಯ್ದೆಯ ಸೆಕ್ಷನ್ 3 ರ ಪ್ರಕಾರ ಯಾವುದಾದರೂ ರಾಜ್ಯ ಜಲ ವ್ಯಾಜ್ಯ ತೆಗೆದುಕೊಂಡು ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಿದರೆ, ನ್ಯಾಯಮಂಡಳಿ ರಚನೆ ಮಾಡಬೇಕಾಗುತ್ತದೆ. ಅಂತಾರಾಜ್ಯ ಜಲವ್ಯಾಜ್ಯಗಳಿಂದ ನಾವು ಅನೇಕ ಸಮಸ್ಯೆ ಎದುರಿಸುತ್ತಿದ್ದೇವೆ. ಒಮ್ಮೆ ಜಲ ವಿವಾದ ಆರಂಭವಾದರೆ ನ್ಯಾಯಮಂಡಳಿ ಸ್ಥಾಪನೆ ಆಗುತ್ತದೆ. ಕಳೆದ ಐವತ್ತು ವರ್ಷಗಳಿಂದ ತೆಲಂಗಾಣ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಉತ್ತರದಲ್ಲಿ ಗುಜರಾತ್, ಪಂಜಾಬ್, ಮಧ್ಯಪ್ರದೇಶದಲ್ಲಿ ನ್ಯಾಯಮಂಡಳಿಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ, ಯಾವುದೇ ಪರಿಹಾರ ದೊರೆತಿಲ್ಲ. ಇದರಿಂದ ರಾಜ್ಯಗಳು ಸಮಸ್ಯೆ ಎದುರಿಸುತ್ತಿವೆ. 20 ಕೋಟಿ ರೂ. ಯೋಜನೆ ಈಗ 20 ಸಾವಿರ ಕೋಟಿ ರೂ. ಆಗಿವೆ. ಕೆಲವು ನ್ಯಾಯಾಧೀಶರು ಇಪ್ಪತ್ತು ಮೂವತ್ತು ವರ್ಷಗಳಿಂದ ಕುಳಿತಿದ್ದಾರೆ. ಇದರಿಂದ ಸಾಕಷ್ಟು ಆರ್ಥಿಕ ಹೊರೆಯಾಗುತ್ತಿದೆ. ಇದು ನ್ಯಾಯ ವಿಳಂಬವಲ್ಲ. ನ್ಯಾಯದ ತಿರಸ್ಕಾರ. ಅಂತಾರಾಜ್ಯ ಜಲ ವಿವಾದಗಳನ್ನು ಬಗೆ ಹರಿಸಲು ಹಾಲಿ ಸುಪ್ರೀಂ ಕೊರ್ಟ್ ನ್ಯಾಯಾಧೀಶರ ಮೂಲಕ ಒಂದೇ ನ್ಯಾಯ ಮಂಡಳಿ ಮಾಡಿ ಜಲ ವ್ಯಾಜ್ಯಗಳನ್ನು ಪರಿಹರಿಸುವ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.

ಕೇಂದ್ರ ಸರ್ಕಾರಕ್ಕೆ ಅಭಿನಂದನೆ:

ದೇಶ್ಯಾದ್ಯಂತ ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನಗೊಳಿಸುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಲ ಶಕ್ತಿ ಸಚಿವರಾದ ಸಿ.ಆರ್ .ಪಾಟೀಲ್ ಅವರನ್ನು ಅಭಿನಂದಿಸುತ್ತೇನೆ. ನೀರಿನ ವಿಷಯ ಸಮವರ್ತಿ ಪಟ್ಟಿಯಲ್ಲಿ ಇದ್ದರೂ, ಕೇಂದ್ರ ಸರ್ಕಾರ 2017 ರಿಂದ ವಿಶೇಷ ಜವಾಬ್ದಾರಿ ತೆಗೆದುಕೊಂಡಿದೆ. ಸ್ವಾತಂತ್ರ್ಯ ಬಂದು ಎಪತೈದು ವರ್ಷವಾದರೂ ಜನರಿಗೆ ಶುದ್ಧವಾದ ಕುಡಿಯುವ ನೀರು ಕೊಡುವ ಕೆಲಸ ಆಗಿರಲಿಲ್ಲ. ನೀರು ಇಡೀ ಜಗತ್ತಿನ ಜೀವಜಲ. ನೀರು ಪ್ರತಿಯೊಬ್ಬ ವ್ಯಕ್ತಿಗೆ ಸೇರಿದ್ಧಾ, ಸಂಸ್ಥೆಗೆ ಸೇರಿದ್ದಾ, ಸರ್ಕಾರಕ್ಕೆ ಸೇರಿದ್ದಾ ಎಂಬ ಚರ್ಚೆ ನಿರಂತರವಾಗಿ ನಡೆಯುತ್ತಿದೆ. ಹೀಗಾಗಿ ರಾಜ್ಯ ರಾಜ್ಯಗಳ ನಡುವೆ ನೀರಿಗಾಗಿ ಚರ್ಚೆ ನಡೆಯುತ್ತಿದೆ. ನೀರಿನ ಸಮಸ್ಯೆ ಜಗತ್ತಿನ ಸಮಸ್ಯೆಯಾಗಿದೆ. 30 ವರ್ಷಗಳ ಹಿಂದೆ ಭಾರತ ಹಸಿರು ವಲಯದಲ್ಲಿ ಬರುತ್ತಿತ್ತು. ಈಗ ಭಾರತ ಹಳದಿ ವಲಯದಲ್ಲಿ ಬಂದಿದೆ. ನೈಸರ್ಗಿಕ ಸಂಪನ್ಮೂಲಗಳು ರಾಷ್ಟ್ರೀಯ ಸಂಪತ್ತಾಗಿ ಬದಲಾಗಬೇಕು ಎಂದು ಹೇಳಿದರು.

ನೀರಿನ ಸಂರಕ್ಷಣೆ ಹಾಗೂ ನೀರಿನ ಬಳಕೆಯನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ನಾವು ದೊಡ್ಡ ಡ್ಯಾಮ್‌ಗಳನ್ನು ಕಟ್ಟುವ ಮೂಲಕ ಕೇವಲ ನೀರನ್ನು ಸಂಗ್ರಹಣೆ ಮಾಡುವುದರ ಬಗ್ಗೆ ವಿಚಾರ ಮಾಡುತ್ತಿದ್ದೇವೆ. ನೀರನ್ನು ಹೇಗೆ ಬಳಕೆ ಮಾಡಬೇಕು ಎನ್ನುವ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ. ಈಗಾಗಲೇ ತಡವಾಗಿದೆ. ಈಗ ನೀರಿನ ಬಳಕೆ ಮತ್ತು ನಿರ್ವಹಣೆಯ ಬಗ್ಗೆ ಗಮನ ಹರಿಸುವ ಸಮಯ ಬಂದಿದೆ. ಕೆಲವರು ನೀರು ಅನಗತ್ಯವಾಗಿ ಸಮುದ್ರಕ್ಕೆ ಹೋಗುತ್ತದೆ ಎಂದು ಹೇಳುತ್ತಾರೆ. ಆದರೆ, ನೈಸರ್ಗಿಕವಾಗಿ ಶೇ 30 ರಷ್ಟು ಸಿಹಿ ನೀರು ಸಮುದ್ರಕ್ಕೆ ಹೋಗಲೇಬೇಕು. ಆಗ ಮಾತ್ರ ನೀರು ಆವಿಯಾಗಿ ಮಳೆ ನೀರು ಬರುತ್ತದೆ. ಕೇವಲ ಉಪ್ಪು ನೀರು ಆವಿಯಾಗಿ ಮೋಡ ಕಟ್ಟಲು ಆಗುವುದಿಲ್ಲ ಎಂದು ಹೇಳಿದರು.

ನಾನು ಈ ಕೇಂದ್ರ ಸರ್ಕಾರವನ್ನು ಅಭಿನಂದಿಸುತ್ತೇನೆ. ಇದುವರೆಗೆ ಕುಡಿಯುವ ನೀರು ಆದ್ಯತೆಯ ವಿಷಯವಾಗಿರಲಿಲ್ಲ. ನಮ್ಮ ಪ್ರಧಾನಿಯವರು ಕೆಂಪುಕೋಟೆ ಮೇಲೆ ನಿಂತು ಜಲಜೀವನ್ ಮಿಷನ್ ಯೋಜನೆಯನ್ನು ಘೋಷಣೆ ಮಾಡಿದ್ದರು. ಈ ವರ್ಷ ಬಜೆಟ್ ನಲ್ಲಿ 99,503 ಕೋಟಿ ರೂ. ಮೀಸಲಿಟ್ಟ ಹಣದಲ್ಲಿ 74 ಸಾವಿರ ಕೋಟಿ ರೂ. ಕುಡಿಯುವ ನೀರಿಗೆ ಮೀಸಲಿಡಲಾಗಿದೆ. ಅದರಲ್ಲಿ ಜೆಜೆಎಂ ಯೋಜನೆಗೆ 67 ಕೋಟಿ ನೀಡಲಾಗಿದೆ. ಜೆಜೆಎಂ ಬರುವ ಮೊದಲು ಹಳ್ಳಿಗಳು ಹಾಗೂ ನಗರ ಪ್ರದೇಶಗಳ ಕುಡಿಯುವ ನೀರಿನ ಬಳಕೆಯಲ್ಲಿ ಸಾಕಷ್ಟು ಅಂತರವಿತ್ತು. ಸ್ವಾತಂತ್ರ್ಯ ದ ನಂತರ ದೇಶದಲ್ಲಿ 19 ಕೋಟಿ ಮನೆಗಳಿಗೆ ನಲ್ಲಿ ನೀರು ಸಿಗುತ್ತಿತ್ತು. ಈ ಯೋಜನೆ ಜಾರಿಯಾದ ನಂತರ 2025 ರ ಜನೇವರಿವರೆಗೆ 15 ಕೋಟಿ ಮನೆಗಳಿಗೆ ನಲ್ಲಿ ನೀರು ಬರುತ್ತದೆ. ಇದು ಅತ್ಯಂತ ದೊಡ್ಡ ಸಾಧನೆ ಎಂದು ಹೇಳಿದರು.

 

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist