ಬೆಂಗಳೂರು, (www.thenewzmirror.com) :
ನಮ್ಮ ಮೆಟ್ರೋ ಮತ್ತೊಂದು ಮೈಲಿಗಲ್ಲನ್ನು ಯಶಸ್ವಿಯಾಗಿ ಮುಟ್ಟಿದೆ. ಚಾಲಕ ರಹಿತ ಮೆಟ್ರೋ ಟ್ರಯಲ್ ರನ್ ಯಶಸ್ವಿಯಾಗಿದೆ. ಹಳದಿ ಮಾರ್ಗದ ಲೋಕೋ ಪೈಲಟ್ ಲೆಸ್ ಮೆಟ್ರೋ ರೈಲು ಬೊಮ್ಮಸಂದ್ರ ಹಾಗೂ ಬೊಮ್ಮನಹಳ್ಳಿ ನಡುವೆ ಯಶಸ್ವಿಯಾಗಿ ಟ್ರಯಲ್ ರನ್ ಮಾಡಿದೆ.
ಇತ್ತೀಚೆಗಷ್ಟೇ ಹಳದಿ ಮಾರ್ಗದಲ್ಲಿ ಟ್ರ್ಯಾಕ್ ಜೋಡನೆಯಾಗಿರುವ ನೂತನ ಮೆಟ್ರೋ ರೈಲು ಇದಾಗಿದೆ. ಇದೇ ಮೊದಲ ಬಾರಿಗೆ ನಗರದಲ್ಲಿ ಹಳದಿ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ರೈಲು ಸಂಚಾರ ಮಾಡಿದೆ.
ಚೀನಾದಿಂದ ಬಂದಿರುವ 6 ಬೋಗಿಗಳ ಚಾಲಕ ರಹಿತ ಟ್ರೈನ್ ಬೊಮ್ಮಸಂದ್ರವರೆಗೆ ಹಳದಿ ಮಾರ್ಗದಲ್ಲಿ ಸಂಚರಿಸಿದೆ. ಹಲವು ಹಂತದಲ್ಲಿ ಎರಡೂವರೆ ತಿಂಗಳು ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಇದು ಚೀನಾ-ಮಾಲೀಕತ್ವದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕಂ. ಲಿಮಿಟೆಡ್‌ನಿಂದ ತಯಾರಿಸಲ್ಪಟ್ಟ ಮೆಟ್ರೋ ರೈಲಾಗಿದೆ.
ನಮ್ಮ ಮೆಟ್ರೋ ಹಳದಿ ಮಾರ್ಗದ ಚಾಲಕರಹಿತ ಮೆಟ್ರೋ ರೈಲು ಜೋಡಣೆ ಪೂರ್ಣಗೊಂಡಿದೆ. ಮುಂದಿನ 4 ತಿಂಗಳ ಅವಧಿಯಲ್ಲಿ 37 ಪರೀಕ್ಷೆಗಳನ್ನು ಎದುರಿಸಲಿದೆ. ಪರೀಕ್ಷಾ ಸಂಚಾರವೂ ನಡೆಯಲಿದೆ. ಅದಾದ ಬಳಿಕವಷ್ಟೇ ಹಳದಿ ಮಾರ್ಗದ ಮೆಟ್ರೋ ರೈಲು ಸಂಚಾರ ಸಾಕಾರವಾಗಲಿದೆ.
ಹೊಸ ಮೆಟ್ರೋ ಮಾರ್ಗಗಳಲ್ಲಿ ನಿಯೋಜಿಸಲಾಗುವ ಎಲ್ಲಾ ರೈಲುಗಳು ಚಾಲಕ ರಹಿತ ತಂತ್ರಜ್ಞಾನವನ್ನು ಹೊಂದಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಚಾಲಕರಹಿತ ರೈಲುಗಳು ಡಿಕ್ಕಿಯಾಗುವುದಿಲ್ಲ, ಯಾವುದೇ ಅವಘಡ ಸಂಭವಿಸುವುದಿಲ್ಲ ಎಂಬ ವಿಶ್ವಾಸವನ್ನು ನಮ್ಮ ಮೆಟ್ರೋ ಹೊಂದಿದೆ.