ಬೆಂಗಳೂರು, (www.thenewzmirror.com) ;
ಮೇಘಾಲಯ ರಾಜ್ಯಕ್ಕೆ ನೂತನ ರಾಜ್ಯಪಾಲರಾಗಿ ಕರ್ನಾಟಕದ ಮಾಜಿ ಸಂಸದ ಮಾಜಿ ಸಚಿವ ಸಿ.ಹೆಚ್. ವಿಜಯ್ ಶಂಕರ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನೇಮಕ ಮಾಡಿದ್ದಾರೆ.
ಮಹಾರಾಷ್ಟ್ರ, ಮೇಘಾಲಯ ಸೇರಿದಂತೆ 10 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಲಾಗಿದ್ದು, ಅಚ್ಚರಿ ಎನ್ನುವಂತೆ ರಾಜ್ಯದ ಮಾಜಿ ಸಂಸದ ವಿಜಯ್ ಶಂಕರ್ ಅವರಿಗೆ ಅದೃಷ್ಟ ಒಲಿದಿದೆ.
ಶನಿವಾರ ತಡರಾತ್ರಿ ರಾಷ್ಟ್ರಪತಿ ದ್ರೌಪದಿ ಮುರ್ಮು ನೇಮಕ ಮಾಡಿದ್ದಾರೆ. ಮೇಘಾಲಯ, ಮಹಾರಾಷ್ಟ್ರ, ಅಸ್ಸಾಂ, ಮಣಿಪುರ, ಪಂಜಾಬ್ ಸೇರಿದಂತೆ ಹತ್ತು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕವಾಗಿದೆ.
ರಾಣೆಬೆನ್ನೂರು ಮೂಲದವರಾದ ವಿಜಯ್ ಶಂಕರ್ 1994 ರಿಂದ 98 ರವರೆಗೆ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 1998, 2004ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದರು. 2010 ರಿಂದ 16 ರವರೆಗೆ ವಿಧಾನಪರಿಷತ್ ಸದಸ್ಯರಾಗಿದ್ದರು. 2010ರಲ್ಲಿ ಕರ್ನಾಟಕ ಕ್ಯಾಬಿನೆಟ್ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಅವರಿಗೆ ರಾಜ್ಯಪಾಲರ ಹುದ್ದೆ ಒಲಿದು ಬಂದಿದೆ.