ಬೆಂಗಳೂರು,(www.thenewzmirror.com) ;
ಯಾದಗಿರಿಯಲ್ಲಿ ನಿಗೂಡವಾಗಿ ಮೃತಪಟ್ಟ ಪಿಎಸ್ಐ ಪರಶುರಾಮ ಅವರ ನಿವಾಸಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಬುಧವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರಲ್ಲದೇ, ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು. ಸರ್ಕಾರದಿಂದ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರವನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಕಾರಟಗಿಯ ಸೋಮನಾಳ ಗ್ರಾಮದಲ್ಲಿರುವ ನಿವಾಸದಲ್ಲಿ ಒಂದು ತಾಸಿಗು ಹೆಚ್ಚು ಪರಶುರಾಮ ಅವರ ಕುಟುಂಬದವರೊಂದಿಗೆ ಚರ್ಚಿಸಿದ ಬಳಿಕ ಮಾತನಾಡಿದ ಅವರು, ಪ್ರಾಮಾಣಿಕ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದಾರೆ. ತನಿಖೆ ನಡೆಯುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿಗೆ ನಿರೀಕ್ಷೆ ಮಾಡಲಾಗುತ್ತಿದೆ. ಎಫ್‌ಎಸ್‌ಎಲ್‌ನವರು ಪರಿಶೀಲನೆ ನಡೆಸಿ, ಸ್ಯಾಂಪಲ್ಸ್ ಸಂಗ್ರಹಿಸಿದ್ದಾರೆ. ಇಲಾಖೆಯ ಪ್ರಾಮಾಣಿಕ ಅಧಿಕಾರಿಯನ್ನು ಕಳೆದುಕೊಂಡಿದ್ದಕ್ಕೆ ನೋವಾಗುತ್ತಿದೆ ಎಂದು ಮರುಕ ವ್ಯಕ್ತಪಡಿಸಿದರು.
ಪರಶುರಾಮ ಅವರ ಕುಟುಂಬಕ್ಕೆ ಸಾಂತ್ವಾನ ಹೇಳುವುದು ನಮ್ಮ ಧರ್ಮ, ಕರ್ತವ್ಯ. ಪರಶುರಾಮ ತನ್ನ ಕುಟುಂಬದವರಿಗೆ ಎಲ್ಲವೂ ಆಗಿದ್ದ. ಕುಟುಂಬ ಸಂಕಷ್ಟವಲ್ಲದೆ, ಬೀದಿಗೆ ತಳ್ಳಿದಂತಾಗಿದೆ. ಕಠಿಣ ಪರಿಶ್ರಮದಿಂದ ಎಂಟು ಪರೀಕ್ಷೆಗಳನ್ನು ಪಾಸ್ ಮಾಡಿ, ಪಿಎಸ್ಐ ಉದ್ಯೋಗವನ್ನು ಆಯ್ಕೆ ಮಾಡಿಕೊಂಡಿದ್ದ. ಇಂತಹ ಅಧಿಕಾರಿಯನ್ನು ಕಳೆದುಕೊಂಡಿರುವುದು ನಮಗೂ ನಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪರಶುರಾಮ ಅವರ ಪತ್ನಿ ಬಿಇ ವ್ಯಾಸಂಗ ಮಾಡಿದ್ದು, ಇಲಾಖೆಯಲ್ಲಿ ಸೂಕ್ತವಾದ ಉದ್ಯೋಗವನ್ನು ನೀಡುತ್ತೇವೆ. ರಾಯಚೂರು ಕೃಷಿ ವಿಶ್ವವಿದ್ಯಾಲಯ ಅಥವಾ ಜೆಸ್ಕಾಂನಲ್ಲಿ ವ್ಯಾಸಂಗಕ್ಕೆ ಸೂಕ್ತವಾದ ಉದ್ಯೋಗ ಕಲ್ಪಿಸುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಬೇರೆ ಇಲಾಖೆಯಲ್ಲಿ ಉದ್ಯೋಗ ಕೋರಿರುವುದರಿಂದ ಮುಖ್ಯಮಂತ್ರಿಯವರು ನಿರ್ಧಾರ ತೆಗೆದುಕೊಳ್ಳಬೇಕು. ಈ ವಿಚಾರವನ್ನು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುವುದಾಗಿ ಹೇಳಿದರು.
ಅಲ್ಲಿನ ಶಾಸಕ ಮತ್ತು ಪುತ್ರ ಪರಶುರಾಮ ಅವರ ಬಳಿ ಹಣಕ್ಕೆ ಒತ್ತಾಯಿಸಿದ್ದರು ಎಂದು ಕುಟುಂಬಸ್ಥರು ಆಪಾದನೆ ಮಾಡಿದ್ದಾರೆ. ಈ ಕುರಿತು ಘಟನೆಯಾದ ದಿನವೇ ಪ್ರಕರಣ ದಾಖಲಿಸಿ, ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ನ್ಯಾಯ ಸಿಗುತ್ತದೆಯೋ ಇಲ್ಲವೋ ಎಂಬ ಅನುಮಾನ ವ್ಯಕ್ತವಾಗಬಾರದು ಎಂಬ ನಿಟ್ಟಿನಲ್ಲಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇಲಾಖೆಯಲ್ಲಿ ಹಣ ಪಡೆದು ವರ್ಗಾವಣೆ ಮಾಡುವುದಿಲ್ಲ.ನಮ್ಮ ಹಂತದಲ್ಲಿ ಈ ರೀತಿ ನಡೆಯುವುದಿಲ್ಲ. ಈ ರೀತಿಯ ಆರೋಪಗಳಿರುವುದರಿಂದ ಪ್ರತಿ ವರ್ಷ ವರ್ಗಾವಣೆಯಾಗದಂತೆ ತಡೆಯಲು, ಪಿಎಸ್ಐ ಹುದ್ದೆಯಿಂದ ಎಸ್‌ಪಿ ಹುದ್ದೆವರೆಗು ವರ್ಗಾವಣೆ ಅವಧಿಯನ್ನು ಎರಡು ವರ್ಷಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.