Political News | ಸರ್ಕಾರ ಬೀಳಿಸುವ ಕೆಲ್ಸ ಬಿಜೆಪಿ ಮಾಡುತ್ತಿಲ್ಲ, ಕಾಂಗ್ರೆಸ್ ನದ್ದು ಬರೀ ಹಿಟ್ ಆಂಡ್ ರನ್ ; ವಿಪಕ್ಷ ನಾಯಕ ಆರ್. ಅಶೋಕ ವಾಗ್ದಾಳಿ

ಬೆಂಗಳೂರು, (www.thenewzmirror.com) ;

ಕಾಂಗ್ರೆಸ್ ಸರ್ಕಾರ ಬೀಳಿಸೋಕೆ ಬಿಜೆಪಿ ನಾಯಕರು ನಮ್ಮ ಶಾಸಕರಿಗೆ ಹಣದ ಆಮೀಷ ಒಡ್ಡುತ್ತಿದ್ದಾರೆ ಅಂತ ಆರೋಪ ಮಾಡಿರುವ ಕಾಂಗ್ರೆಸ್ ನಾಯಕರಿಗೆ ವಿಪಕ್ಷ ನಾಯಕ ತಿರುಗೇಟು ಕೊಟ್ಟಿದ್ದಾರೆ. ಕಾಂಗ್ರೆಸ್‌ ಶಾಸಕರಿಗೆ ಹಣ ನೀಡುತ್ತೇವೆಂದು ಮುಂದೆ ಬಂದ ಬಿಜೆಪಿ ನಾಯಕರು ಯಾರೆಂದು ಬಹಿರಂಗ ಪಡಿಸಲಿ, ಇಲ್ಲವಾದರೆ ಇದು ಹಿಟ್‌ ಆಂಡ್‌ ರನ್‌ ಆಗುತ್ತದೆ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ ಸವಾಲು ಹಾಕಿದ್ದಾರೆ.

RELATED POSTS

ಕಾಂಗ್ರೆಸ್‌ ಸರ್ಕಾರ ಮುಡಾ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಮುಳುಗಿರುವುದರಿಂದ ಸರ್ಕಾರ ಉಳಿಸಿಕೊಳ್ಳಲು ಶಾಸಕರಿಗೆ ಬೇರೆ ದಾರಿ ಇಲ್ಲ. ಇದಕ್ಕಾಗಿ ಬಿಜೆಪಿ ವಿರುದ್ಧ ಆಪಾದನೆ ಮಾಡಲಾಗಿದೆ. ಜನರ ಮನಸ್ಸನ್ನು ಬೇರೆಡೆ ಸೆಳೆಯುವ ಕುತಂತ್ರವಿದು. ಸರ್ಕಾರ ಬೀಳಿಸಲು ಬಿಜೆಪಿ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಅವರ ಪಕ್ಷದವರೇ ಸರ್ಕಾರ ಬೀಳಿಸಲು ಮುಂದಾಗಿದ್ದಾರೆ ಎಂದರು.

ಕಾಂಗ್ರೆಸ್‌ ಶಾಸಕರ ಬಳಿ ಬಂದು ಮಾತಾಡಿದ ಬಿಜೆಪಿ ನಾಯಕರು ಯಾರು ಎಂದು ಕಾಂಗ್ರೆಸ್‌ ನಾಯಕರು ಸ್ಪಷ್ಟವಾಗಿ ತಿಳಿಸಲಿ. ಗ್ಯಾರಂಟಿಗಳನ್ನು ತೆಗೆದುಹಾಕಬೇಕೆಂದು ಶಾಸಕರೇ ಒತ್ತಾಯಿಸುತ್ತಿದ್ದಾರೆ. ಸರ್ಕಾರದಲ್ಲಿ ಹಣವಿಲ್ಲದೆ, ಮದ್ಯದ ತೆರಿಗೆಯನ್ನು ಮೂರನೇ ಬಾರಿಗೆ ಏರಿಕೆ ಮಾಡಲು ಪ್ರಯತ್ನ ಶುರುವಾಗಿದೆ. ನೀರಿನ ದರ ಹಾಗೂ ಬಸ್‌ ಟಿಕೆಟ್‌ ದರ ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಪೆಟ್ರೋಲ್‌, ಮಾರ್ಗಸೂಚಿ ದರ ಹೆಚ್ಚಾಗಿದೆ. ಉಸಿರಾಡುವ ಗಾಳಿಗೂ ತೆರಿಗೆ ಹಾಕಿದರೆ ಇನ್ನು ಯಾವುದೂ ಉಳಿಯುವುದಿಲ್ಲ ಎಂದು ವ್ಯಂಗ್ಯವಾಡಿದರು.

ಗ್ಯಾರಂಟಿಗೆ ಹಣ ಮೀಸಲಿಡದೆ ಸರ್ಕಾರ ದಿವಾಳಿಯಾಗಿದೆ. ಇಂತಹ ಸ್ಥಿತಿಯಲ್ಲೂ ಕಾಂಗ್ರೆಸ್‌ ನಾಯಕರು ಏಣಿ ಹತ್ತಿಸಿದ ಮತದಾರರ ಬಗ್ಗೆ ಬಹಳ ಕೀಳಾಗಿ ಮಾತಾಡುತ್ತಿದ್ದಾರೆ. ಮುಂದೆ ಅಧಿಕಾರಕ್ಕೆ ಬರಲ್ಲ ಎಂಬುದು ಖಚಿತವಾಗಿರುವುದರಿಂದ ಆದಷ್ಟು ಲೂಟಿ ಮಾಡಲು ನೋಡುತ್ತಿದ್ದಾರೆ. ಈ ಅವಧಿಯಲ್ಲೇ ಡಾ.ಜಿ.ಪರಮೇಶ್ವರ್‌, ಡಿ.ಕೆ.ಶಿವಕುಮಾರ್‌, ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲು ತಂತ್ರ ಮಾಡುತ್ತಿದ್ದಾರೆ. ಶಾಸಕರಿಗೆ ಹಣ ಕೊಡಲು ಬಂದವರು ಯಾರೆಂದು ಸರಿಯಾಗಿ ತಿಳಿಸಲಿ. ಇಲ್ಲವಾದರೆ ಇದು ಹಿಟ್‌ ಆಂಡ್‌ ರನ್‌ ಆಗುತ್ತದೆ ಎಂದರು.

ಅತ್ಯಾಚಾರ ಪ್ರಕರಣ ಹೆಚ್ಚಳ

ರಾಜ್ಯದಲ್ಲಿ ಲವ್‌ ಜಿಹಾದ್‌ ಲಿಂಕ್‌ ಇರುವ ಅತ್ಯಾಚಾರ ಪ್ರಕರಣ ಉಡುಪಿಯಲ್ಲಿ ನಡೆದಿದೆ. ಈ ಹಿಂದೆ ಹುಬ್ಬಳ್ಳಿ, ಹಾವೇರಿಯಲ್ಲಿ ನಡೆದ ಪ್ರಕರಣಗಳನ್ನು ಮುಚ್ಚಿ ಹಾಕಲಾಗಿದೆ. ಇದು ಪೂರ್ವ ನಿಯೋಜಿತವಾಗಿ ನಡೆಯುತ್ತಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಇದು ಹೆಚ್ಚಿದ್ದು, ಸರ್ಕಾರದ ಕುಮ್ಮಕ್ಕಿನಿಂದಲೇ ಇದು ನಡೆಯುತ್ತಿದೆ. ಕಾಂಗ್ರೆಸ್‌ ತಮ್ಮನ್ನು ಏನೂ ಮಾಡುವುದಿಲ್ಲ ಎಂಬ ನಂಬಿಕೆ ಇಂತಹವರಿಗೆ ಬಂದಿದೆ. ಕೇರಳದಲ್ಲಿ ಲವ್‌ ಜಿಹಾದ್‌ ಕೇಂದ್ರವೂ ಇದ್ದು, ಅಲ್ಲಿ ಯುವಕರಿಗೆ ತರಬೇತಿ ನೀಡಲಾಗುತ್ತಿದೆ. 2047 ರೊಳಗೆ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುತ್ತೇವೆ ಎಂಬ ಕರಪತ್ರಗಳು ಕೂಡ ಹರಿದಾಡಿವೆ ಎಂದರು.

ಕೊಲೆ ಆರೋಪಿ ನಟ ದರ್ಶನ್‌ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಫೋಟೋ ತೆಗೆಯಲು ಮೊಬೈಲ್‌ ಎಲ್ಲಿಂದ ಬಂತು? ಜೈಲಿನಲ್ಲಿ ರಾಜಾರೋಷವಾಗಿ ಸಿಗರೇಟು, ಕಾಫಿ, ಮಾದಕ ವಸ್ತು ನೀಡಲಾಗುತ್ತಿದೆ. ಈಗಾಗಲೇ ಕಾನೂನು ಸುವ್ಯವಸ್ಥೆ ಕುಸಿದುಹೋಗಿದೆ. ಅತ್ಯಾಚಾರ, ಕೊಲೆ ಹೆಚ್ಚಿದೆ. ಸರ್ಕಾರ ಉಳಿಯುತ್ತೋ, ಇರುತ್ತೋ ಎಂದೇ ಶಾಸಕರು, ಸಚಿವರು ಚಿಂತೆ ಮಾಡುತ್ತಿದ್ದಾರೆ. ಜೈಲಿನಲ್ಲಾದ ಈ ಘಟನೆಗೆ ಸರ್ಕಾರ ಸರಿಯಾದ ಉತ್ತರ ನೀಡಬೇಕು. ತನಿಖೆ ಮಾಡುತ್ತೇವೆ ಎಂದರೆ ಏನೂ ಉಪಯೋಗವಿಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ತನಿಖೆ ಸಂಬಂಧ ಬಿಜೆಪಿ-ಜೆಡಿಎಸ್‌ನಿಂದ ಕಾನೂನು ಹೋರಾಟ ಮಾಡಲು ಚರ್ಚೆ ನಡೆಯುತ್ತಿದೆ. ಇದರ ಜೊತೆಗೆ ಭ್ರಷ್ಟಾಚಾರದ ವಿರುದ್ಧದ ಹೋರಾಟವೂ ಮುಂದುವರಿಯಲಿದೆ ಎಂದು ತಿಳಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist