ಬೆಂಗಳೂರು, (www.thenewzmirror.com) ;
ಡಿವೈಎಸ್ ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ ವಜಾಗೊಂಡಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಸಚಿವರ ಮೇಲಿದ್ದ ಕಳಂಕ ಸಂಪೂರ್ಣ ನಿವಾರಣೆಯಾದಂತಾಗಿದೆ.
ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಕ್ಲೀನ್ ಚಿಟ್ ನೀಡಿದ್ದ ಸಿಬಿಐನ ಕ್ರಮ ಪ್ರಶ್ನಿಸಿ ಗಣಪತಿ ಸಹೋದರಿ ಸಬಿತಾ ಮತ್ತಿತರರು ಸಲ್ಲಿಸಿರುವ ವಿಶೇಷ ಕ್ರಿಮಿನಲ್ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ ಮತ್ತು ನ್ಯಾಯಮೂರ್ತಿ ಸತೀಶ್ಚಂದ್ರ ಶರ್ಮ ಅವರನ್ನೊಳಗೊಂಡ ಪೀಠ ವಜಾಗೊಳಿಸಿದೆ.
ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಎಂಟು ವರ್ಷಕ್ಕೂ ಹೆಚ್ಚು ಕಾಲ ನಡೆದ ಕಾನೂನು ಸಂಘರ್ಷದಲ್ಲಿ ಸಚಿವ ಜಾರ್ಜ್ ಅವರಿಗೆ ಗೆಲುವು ಲಭಿಸಿದ್ದು, ಪ್ರಕರಣದಲ್ಲಿ ಸಚಿವರಿಗೆ ಕ್ಲೀನ್ ಚಿಟ್ ನೀಡಿದ್ದ ಸಿಬಿಐ ನಿರ್ಧಾವನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಂತಾಗಿದೆ.
2016ರ ಜು.17ರ ಡಿವೈಎಸ್ಪಿ ಎಂ.ಕೆ.ಗಣಪತಿ ಕೊಡಗಿನ ಹೋಟೆಲ್ ಕೊಠಡಿಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಮಾಡಿದ್ದ ವಿಡಿಯೋದಲ್ಲಿ ಅವರು ಆಗ ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರ ಹೆಸರು ಪ್ರಸ್ತಾಪಿಸಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣದ ತನಿಖೆಯನ್ನುಿ ಸಿಬಿಐಗೆ ವಹಿಸಿತ್ತು.
ಪ್ರಕರಣದ ಕುರಿತು ಸುದೀರ್ಘ ವಿಚಾರಣೆ ನಡೆಸಿದ್ದ ಸಿಬಿಐ, 2019ರಲ್ಲಿ ವರದಿ ನೀಡಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಅಲ್ಲದೆ, ಗಣಪತಿ ಆತ್ಮಹತ್ಯೆಗೆ ಕಿರುಕುಳ ಕಾರಣವಲ್ಲ. ಬದಲಾಗಿ ಒಂದೆರಡು ಬಾರಿ ಸಚಿವ ಜಾರ್ಜ್ ಅವರು ಗಣಪತಿಗೆ ನೆರವು ನೀಡಿದ್ದರು ಎಂದು ಹೇಳಿತ್ತು.