ಬೆಂಗಳೂರು, (www.thenewzmirror.com) ;
ಬಿಜೆಪಿ ಎಂದಿಗೂ ಸರ್ಕಾರ ಬೀಳಿಸುವ ಪ್ರಯತ್ನ ಮಾಡಿಲ್ಲ. ಅಂತಹ ಅವಶ್ಯಕತೆ ನಮಗಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಯಾರು ಸಿಎಂ ಆಗಬೇಕೆಂದು ಮ್ಯೂಸಿಕಲ್ ಚೇರ್ ನಂತೆ ಸ್ಪರ್ಧೆ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ ಹೀಗೆ ಎಲ್ಲರೂ ಮುಖ್ಯಮಂತ್ರಿ ಆಗುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಕಾಂಗ್ರೆಸ್ ಶಾಸಕರಲ್ಲೇ ಈ ವಿಷಯ ಬಹಳ ಚರ್ಚೆಯಾಗುತ್ತಿದೆ ವಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದ್ರು.
ಬೆಂಗಳೂರಿನಲ್ಲಿ ಮಾತನಾಡಿದ ಅವ್ರು, ರಾಜ್ಯಪಾಲರು ವಿಧೇಯಕ ವಾಪಸ್ ಕಳುಹಿಸಿದಾಗ ಅದಕ್ಕೆ ಸ್ಪಷ್ಟೀಕರಣ ಕೊಟ್ಟು ಮನವರಿಕೆ ಮಾಡುವುದು ಸರ್ಕಾರದ ಕರ್ತವ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರಿಗೆ ಗೌರವ ನೀಡುವುದನ್ನು ಕಲಿಯಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ರಾಜ್ಯ ಸರ್ಕಾರ ಮುಜರಾಯಿ ಇಲಾಖೆಗೆ ಸಂಬಂಧಿಸಿದ ವಿಧೇಯಕ ಸೇರಿದಂತೆ ಹಲವು ವಿಧೇಯಕಗಳನ್ನು ರೂಪಿಸಿದೆ. ಇಂತಹ ವಿಧೇಯಕಗಳ ಸಾಧಕ-ಬಾಧಕಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವ ಅಧಿಕಾರ ರಾಜ್ಯಪಾಲರಿಗೆ ಇದೆ. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಅಂದಿನ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಹತ್ತಾರು ವಿಧೇಯಕಗಳನ್ನು ವಾಪಸ್ ಕಳುಹಿಸಿದ್ದರು ಎಂದು ನೆನಪಿಸಿದ್ರು.
ರಾಜಭವನ ಎಂದರೆ ಬಿಜೆಪಿ ಕಚೇರಿ ಎನ್ನುವುದು ಹಳಸಿದ ಮಾತು. ವಿಧೇಯಕವನ್ನು ಮರಳಿ ಕಳುಹಿಸಿದರೆ ಅದಕ್ಕೆ ಸರ್ಕಾರ ಸ್ಪಷ್ಟೀಕರಣ ಕೊಟ್ಟು ಗೊಂದಲ ನಿವಾರಿಸಬೇಕು. ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡುವುದು ಸರ್ಕಾರದ ಕರ್ತವ್ಯ. ಈ ಕರ್ತವ್ಯ ಮಾಡದೇ ಇದ್ದಲ್ಲಿ ಅದು ಸರ್ಕಾರದ ನಿರ್ಲಕ್ಷ್ಯವೇ ಹೊರತು ರಾಜ್ಯಪಾಲರ ತಪ್ಪಲ್ಲ. ಸರ್ಕಾರ ತಪ್ಪು ಮಾಡಿ ಅದನ್ನು ರಾಜ್ಯಪಾಲರ ಮೇಲೆ ಹೇರುವುದು ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರಿಗೆ ಗೌರವ ನೀಡುವುದನ್ನು ಕಲಿಯಬೇಕು ಎಂದರು.
ಲೋಕಸಭೆ ಚುನಾವಣೆಯಲ್ಲಿ ಸೋತ ಕೂಡಲೇ, ಜನರಿಗೆ ನಿಯತ್ತಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ನಿಂದಿಸುತ್ತಿದ್ದಾರೆ. ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಿದ್ದು, ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಬೆಂಗಳೂರಿನ ಜನರನ್ನು ಕಾಂಗ್ರೆಸ್ ನಾಯಕರು ಹೀಯಾಳಿಸಿ ಮಾತಾಡುತ್ತಾರೆ. ಬೆಂಗಳೂರಿನ ಜನರ ಬಗ್ಗೆ ಮಾತಾಡುವ ನೈತಿಕತೆ ಅವರಿಗಿಲ್ಲ. ಜನರಿಗೆ ಕುಡಿಯುವ ನೀರು ನೀಡುವುದು ಸರ್ಕಾರದ ಕರ್ತವ್ಯ. ಹೀಗೆ ಮಾತಾಡಿದ್ದಕ್ಕೆ ಕಾಂಗ್ರೆಸ್ ಜನರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಮೊದಲಿನಿಂದಲೂ ಹಿಂದೂಗಳಿಗೆ ರಕ್ಷಣೆ ಇಲ್ಲ. ಬಾಂಗ್ಲಾದಂತೆ ಹಿಂದೂಗಳ ಮೇಲೆ ದೌರ್ಜನ್ಯ ನಡೆಸುತ್ತೇವೆ ಎಂದು ಕಾಂಗ್ರೆಸ್ ಶಾಸಕ ಐವನ್ ಡಿಸೋಜ ಹೇಳಿದ್ದಾರೆ. ಅದಕ್ಕೆ ಹಿರಿಯ ನಾಯಕರು ಏನೂ ಸ್ಪಷ್ಟನೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರದ ದೋಷಗಳ ವಿರುದ್ಧ ಬಿಜೆಪಿ ನಿರಂತರವಾಗಿ ಹೋರಾಟ ಮಾಡುತ್ತಿದೆ. ಗ್ಯಾರಂಟಿಗಳ ಮೋಸದ ವಿರುದ್ಧ ಹೋರಾಟ, ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ ಮೊದಲಾದವುಗಳ ಮೂಲಕ ಬಿಜೆಪಿ ಸಮರ್ಥವಾಗಿ ಕೆಲಸ ಮಾಡುತ್ತಿದೆ. 136 ಶಾಸಕರ ಬಲವಿದ್ದರೂ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಉತ್ತರ ನೀಡದೆ ಪಲಾಯನ ಮಾಡಿದ್ದಾರೆ. ಬಿಜೆಪಿಯ ಹೋರಾಟದ ಫಲವಾಗಿ ಕಾಂಗ್ರೆಸ್ ಸರ್ಕಾರ ಈಗ ನಡುಗುತ್ತಿದೆ. ಈ ಮೂಲಕ ಪಕ್ಷ ಬಲವಾಗಿದೆ ಎಂದರು.