ಬೆಂಗಳೂರು, (www.thenewzmirror.com) ;
ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಸರ್ಕಾರ ಇದೀಗ ದಿನ ಕಳೆದಂತೆ ಒಂದಲ್ಲ ಒಂದು ರೀತಿಯ ಶಾಕ್ ನೀಡುತ್ತಿದೆ. ಪೆಟ್ರೋಲ್, ಡಿಸೇಲ್ ಹಾಗೂ ಹಾಲಿನ ದರ ಹೆಚ್ಚಳ ಮಾಡಿ ಜನಸಾಮಾನ್ಯರಿಗೆ ಹೊರೆ ಹಾಕಿದ್ದ ಸರ್ಕಾರ ಇದೀಗ ನೀರಿನ ಬಿಲ್ ಏರಿಕೆ ಮಾಡ್ತೀವಿ ಅಂತ ಮುನ್ಸೂಚನೆ ಕೊಟ್ಟಿತ್ತು. ಇದರ ಬೆನ್ನಲ್ಲೇ KSRTC ಬಸ್ ಪ್ರಯಾಣ ದರವನ್ನ ಹೆಚ್ಚಳ ಮಾಡೋ ಸುಳಿವು ನೀಡಿದ್ದಾರೆ. ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್ಸಿ) ಮಾದರಿಯಲ್ಲೇ ಸಾರಿಗೆ ನಿಗಮಗಳಲ್ಲಿ ಪ್ರಯಾಣ ದರ ಏರಿಕೆ ಮಾಡುವ ತೀರ್ಮಾನ ಮಾಡಿದೆ. ಇದಕ್ಕಾಗಿ ಪ್ರತ್ಯೇಕ ನಿಯಂತ್ರಣ ಆಯೋಗ (ಕೆಟಿಆರ್ಸಿ) ರಚನೆಗೆ ಮುಂದಾಗಿದೆ ಅನ್ನೋ ಮಾತುಗಳೂ ಕೇಳಿ ಬರುತ್ತಿದೆ.
ಬಸ್ ಪ್ರಯಾಣ ದರ ಹೆಚ್ಚಳ ಕುರಿತಂತೆ ಟ್ವೀಟ್ ಮಾಡಿದ್ದ ವಿಪಕ್ಷ ನಾಯಕ ಆರ್. ಅಶೋಕ್, ಬಸ್ ದರ ಏರಿಕೆಗೆ ಹೊಸ ಆಯೋಗ ರಚನೆ ಮಾಡುವ ಮೂಲಕ ಪಿಕ್ ಪಾಕೆಟ್ ಸರ್ಕಾರದ ಹೊಸ ಪ್ರಯೋಗ ಅಂತ ಟೀಕಿಸಿದ್ದರು. ಅಷ್ಟೇ ಅಲ್ದೆ ಅಧಿಕಾರಕ್ಕೆ ಬಂದ ದಿನದಿಂದ ಬೆಲೆ ಏರಿಕೆ, ತೆರಿಗೆ ಹೆಚ್ಚಳ ಅಂತ ಒಂದಲ್ಲ ಒಂದು ರೀತಿ ಜನ ಸಾಮಾನ್ಯರ ಸುಲಿಗೆ ಮಾಡುತ್ತಿರುವ @INCKarnataka ಸರ್ಕಾರ ಈಗ ಬಸ್ ದರ ಏರಿಕೆಗೆ ಪ್ರತ್ಯೇಕ ಆಯೋಗ ರಚಿಸಿ ಪಿಕ್ ಪಾಕೆಟ್ ಗಾಗಿ ಹೊಸ ಪ್ರಯೋಗ ಮಾಡಲು ಹೊರಟಿದೆ. ಜತೆಗೆ ಆಡಳಿತ ಮಾಡುವಲ್ಲಿ ಮೂರು ಕಾಸು ಪ್ರಯೋಜನ ಇಲ್ಲದಿದ್ದರೂ ಜನರಿಗೆ ಮಂಕು ಬೂದು ಎರಚಿ ಹೊಸ ಪ್ರಯೋಗಗಳ ಮೂಲಕ ಜನರನ್ನ ಸುಲಿಗೆ ಮಾಡುವಲ್ಲಿ ಕಾಂಗ್ರೆಸ್ ಪಕ್ಷದವರು ಬಹಳ ನಿಸ್ಸೀಮರು ಅಂತ ಕಿಡಿ ಕಾರಿದ್ರು ಅಶೋಕ್.
ಅಶೋಕ್ ಗೆ ಟ್ವೀಟ್ ಮೂಲಕವೇ ತಿರುಗೇಟು ಕೊಟ್ಟಿರೋ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶ್ರೀ ಅಶೋಕ್ ರವರೇ, ನೀವು ಸಾರಿಗೆ ಸಚಿವರಾಗಿದ್ದವರು , ಸಾರಿಗೆ ಸಂಸ್ಥೆಗಳ ಬಗ್ಗೆ ತಿಳಿದೂ ಕೂಡ ಈ ರೀತಿ ಮಾತನಾಡುತ್ತಿದ್ದಾರಾ ಎಂದರೆ ಆಶ್ಚರ್ಯವಾಗುತ್ತಿದೆ ಅಂತ ವ್ಯಂಗ್ಯವಾಡಿದ್ದಾರೆ. ಅಷ್ಟೇ ಅಲ್ದೇ 2013 ರಲ್ಲಿ ತಾವು ಸಾರಿಗೆ ಸಚಿವರಾಗಿದ್ದಾಗ ಬಸ್ ಪ್ರಯಾಣ ದರ 10.5% ಏರಿಕೆ ಮಾಡಿರುವುದು ಮರೆತುಬಿಟ್ಟಿದ್ದೀರಾ ?.., 2020 ರಲ್ಲಿ ತಮ್ಮದೇ ಪಕ್ಷ ಅಧಿಕಾರದಲ್ಲಿದ್ದಾಗ ಬಸ್ ಪ್ರಯಾಣ ದರ 12% ಹೆಚ್ಚಳ ಮಾಡಿದಾಗ ನೀವು ಕ್ಯಾಬಿನೆಟ್ ಮಂತ್ರಿಯಾಗಿದ್ದರಲ್ಲವೇ ?ಆಗ ಯಾಕೆ ವಿರೋಧ ವ್ಯಕ್ತ ಪಡಿಸಲಿಲ್ಲ. ಅಂತ ಪ್ರಶ್ನಸಿದ್ದಾರೆ.
2021 ರ ನವೆಂಬರ್ ನಲ್ಲಿ ನಿಮ್ಮದೇ ಸರ್ಕಾರ ರಚಿಸಿದ್ದ ಎಂ.ಆರ್ ಶ್ರೀನಿವಾಸಮೂರ್ತಿ ಅವರ ಏಕಸಮಿತಿ ಕೆಲ ಶಿಫಾರಸ್ಸನ್ನ ಕೊಟ್ಟಿತ್ತು. ಅದರಲ್ಲಿ ಬಸ್ ಪ್ರಯಾಣ ದರವನ್ನು Institutional Arrangement for Revision of Bus Fares ಶೀರ್ಷಿಕೆಯಡಿಯಲ್ಲಿ KERC ಮಾದರಿಯಲ್ಲಿ ಕಾಲಕಾಲಕ್ಕೆ ಬಸ್ ದರ ಹೆಚ್ಚಿಸಬೇಕು, ಆಗಷ್ಟೇ ಸಾರಿಗೆ ಸಂಸ್ಥೆಗಳು ಉಳಿಯಲು ಸಾಧ್ಯವೆಂದು ವರದಿ ಕೊಟ್ಟಿತ್ತು. ಆಗ ನೀವು ಕ್ಯಾಬೆನೆಟ್ ಮಂತ್ರಿಯಾಗಿದ್ದಾಗ ಯಾಕೆ ಈ ವರದಿಯನ್ನು ತಿರಸ್ಕರಿಸಲಿಲ್ಲ. ಅಂತ ಪ್ರಶ್ನೆ ಮಾಡಿದ್ದಾರೆ ಹಾಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ.
2000 ರ ಸೆಪ್ಟೆಂಬರ್ ನಲ್ಲಿ ಕೆಎಸ್ ಆರ್ಟಿಸಿ ಸೇರಿದಂತೆ ಇತರೆ ರಾಜ್ಯ ಸಾರಿಗೆ ನಿಮಗಗಳು ಡೀಸೆಲ್ ತೈಲದ ಬೆಲೆಯಲ್ಲಿ ಹೆಚ್ಚಳವಾದಾಗ ಮತ್ತು ನೌಕರರಿಗೆ ನೀಡುವ ತುಟ್ಟಿಭತ್ಯೆ ದರಗಳಲ್ಲಿ ಹೆಚ್ಚಳವಾದಾಗ ಪ್ರಯಾಣ ದರಗಳನ್ನು ಸ್ವಯಂಚಾಲಿತ ದರ ಹೊಂದಾಣಿಕೆ ನೀತಿಯಂತೆ ಪರಿಷ್ಕರಿಸಲು ಅನುಮತಿ ನೀಡಿರುತ್ತದೆ ಎಂಬ ಮಾಹಿತಿಯೇ ತಮಗೆ ಇಲ್ಲವೇ? ಹಾಗೆನೇ ತಮ್ಮದೇ ಬಿ.ಜೆ.ಪಿ ಸರ್ಕಾರ ಕಳೆದ 5 ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳನ್ನು ರೂ.5900 ಕೋಟಿ ನಷ್ಟದಲ್ಲಿಟ್ಟು ಹೋಗಿದ್ದು, ಈಗ ಸಾರಿಗೆ ಸಂಸ್ಥೆಗಳ ಪಾಡೇನು ಎಂಬುದರ ಬಗ್ಗೆ ತಾವು ಉತ್ತರ ನೀಡುವಿರಾ?.., ನನಗೆ ರಾಜಕೀಯವೇ ಮುಖ್ಯ. ಸಾರಿಗೆ ಸಂಸ್ಥೆಗಳು ಉಳಿದರೇನು ? ಮುಳುಗಿದರೆ ನನಗೇನು? ಅನ್ನುವ ಮನಸ್ಥಿತಿ ನಿಮ್ಮದಿತ್ತಾ ಅಂತ ಖಾರವಾಗಿಯೇ ಪ್ರಶ್ನೆ ಮಾಡಿದ್ದಾರೆ.
ಮಾಜಿ ಸಾರಿಗೆ ಸಚಿವರೇ ಅಂದು ನೀವು ಸರ್ಕಾರದ ಭಾಗವಾಗಿ ತೆಗೆದುಕೊಂಡ ಎಲ್ಲಾ ಕ್ರಮಗಳನ್ನು ಇಂದು ಮರೆಮಾಚಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿರುವುದು ಎಷ್ಟು ಸಮಂಜಸ ಎಂದು ಆತ್ಮಾವಲೋಕನ ಮಾಡಿಕೊಳ್ಳಿ ಅಂತ ಸಲಹೆ ನೀಡಿದ್ದಾರೆ ಹಾಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ.
ಮಾಜಿ ಮತ್ತು ಹಾಲಿ ಸಾರಿಗೆ ಸಚಿವರ ಟ್ವೀಟ್ ವಾರ್ ನಲ್ಲಿ ಸದ್ಯದಲ್ಲೇ ಕೆಎಸ್ ಆರ್ ಟಿಸಿ ಸೇರಿದಂತೆ ರಾಜ್ಯ ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳ ವಾಗುತ್ತೆ ಅನ್ನೋದು ಗೊತ್ತಾಗಿದ್ದು, ಸದ್ಯದಲ್ಲೇ ಅದರ ಬರೆ ಜನಸಾಮಾನ್ಯರಿಗೆ ತಟ್ಟೋದು ದೂರವಿಲ್ಲ ಅನ್ನೋದು ಗೊತ್ತಾಗಿದೆ.