ಬೆಂಗಳೂರು, (www.thenewzmirror.com) ;
ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಬಳಸಬೇಕು ಎನ್ನುವ ಕಾನೂನು ಇಂದು ನಿನ್ನೆಯದಲ್ಲ 2013 ರಲ್ಲಿ ರಾಜ್ಯ ಸರ್ಕಾರ ಆದೇಶ ಮಾಡಿದ್ರೆ 2017 ಬಿಬಿಎಂಪಿ ಕನ್ನಡ ನಾಮಫಲಕ ಕಡ್ಡಾಯ ಮಾಡಿ ಆದೇಶ ಹೊರಡಿಸಿತ್ತು. ಅಧಿಕೃತ ಆದೇಶ ಆಗಿದ್ದರೂ ನಾಮಫಲಕದಲ್ಲಿ ಶೇಕಡ .60 ರಷ್ಟು ಬಳಕೆ ಮಾಡುವಲ್ಲಿ ವಾಣಿಜ್ಯ ಮಳಿಗೆಗಳು ಮನಸ್ಸು ಮಾಡುತ್ತಿಲ್ಲ.
ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ನಿಯಮ 1963 ಹಾಗೂ ತತ್ಸಂಬಂಧಿ ನಿಯಮ ಅನುಷ್ಠಾನ ಕಾರ್ಮಿಕ ಇಲಾಖೆ ಆಡಳಿತ ವ್ಯಾಪ್ತಿಗೆ ಬರುವುದರಿಂದ, ಕನ್ನಡ ಭಾಷೆ ನಾಮಫಲಕ ಅಳವಡಿಸುವುದನ್ನು ಕಟ್ಟುನಿಟ್ಟಾಗಿ ಪಾಲಿಸಲು ಕಾರ್ಮಿಕ ಇಲಾಖೆಗೆ ಈಗಾಗಲೇ ರಾಜ್ಯ ಸರ್ಕಾರ ಸೂಚನೆ ಕೊಟ್ಟಿತ್ತು. ಹೀಗಿದ್ದರೂ ಆ ನಿಯಮ ಪಾಲನೆ ಆಗುವಲ್ಲಿ ಮಾತ್ರ ವಿಫಲವಾಗುತ್ತಿದೆ.

ಬೆಂಗಳೂರಿನಲ್ಲಿ 50 ಸಾವಿರಕ್ಕೂ ಅಧಿಕ ಉದ್ದಿಮೆಗಳಿಗೆ ಬಿಬಿಎಂಪಿ ಪರವಾನಗಿ ನೀಡಿದೆ. ಇದರಲ್ಲಿ ಸುಮಾರು 8-10 ಸಾವಿರ ಉದ್ದಿಮೆಗಳಷ್ಟೇ ಕನ್ನಡ ಬಳಸುತ್ತಿವೆ. ಉಳಿದ 40 ಸಾವಿರ ಉದ್ದಿಮೆಗಳು ನಿಯಮಾನುಸಾರ ನಾಮಫಲಕಗಳಲ್ಲಿ ಕನ್ನಡ ಬಳಸುತ್ತಿಲ್ಲ. ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರೆ ಕನ್ನಡ ಅವಗಣನೆಗೆ ಪಾತ್ರವಾಗಿರುವುದು ಎದ್ದು ಕಾಣುತ್ತದೆ. ಇಂಗ್ಲೀಷ್ ಬರಹಗಳಿರುವ ನಾಮಫಲಕಗಳೇ ರಾರಾಜಿಸುತ್ತಿವೆ. ಹೀಗಾಗಿ 2017 ರಲ್ಲಿ ಬಿಬಿಎಂಪಿ ನಾಮಫಲಕದಲ್ಲಿ ಶೇ.60ರಷ್ಟು ಜಾಗವನ್ನು ಕನ್ನಡಕ್ಕೆ ಮೀಸಲಿಡಬೇಕೆಂದು ಆದೇಶ ಹೊರಡಿಸಿತ್ತು.
ಹೀಗಿದ್ದರೂ ಕೆಲ ಅಂಗಡಿ ಮಾಲೀಕರು ಕನ್ನಡ ನಾಮಫಲಕ ಬಗ್ಗೆ ಅಸಡ್ಡೆ ತೋರಿದ್ದರಿಂದ ಇತ್ತೀಚೆಗೆ ಕರವೇ ಕಾರ್ಯಕರ್ತರು ಬಿಬಿಎಂಪಿ ಮುಖ್ಯ ಆಯುಕ್ತರನ್ನ ಭೇಟಿ ಮಾಡಿ ಅಂಗಡಿ, ಮಾಲ್, ಹೊಟೇಲ್ ಗಳಲ್ಲಿ ಶೇ.60ರಷ್ಟು ಕನ್ನಡ ನಾಮಫಲಕ ಅಳವಡಿಕೆ ಕುರಿತಂತೆ ಆದೇಶವಿದ್ದರೂ ಜಾರಿಯಾಗಿಲ್ಲ. ಹೀಗಾಗಿ ಅಂಥ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಿ ಅಂತ ಮನವಿ ಮಾಡಿದ್ದರು.
ಈ ಮನವಿ ಆಧಾರದ ಮೇಲೆ ಸಭೆ ನಡೆಸಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಕೂಡಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಲಯ ಆಯುಕ್ತರುಗಳಿಗೆ ಸೂಚನೆ ಕೊಟ್ಟರು. ಅಷ್ಟೇ ಅಲ್ದೇ ನಗರದಲ್ಲಿರುವ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಬರುವ ವಾಣಿಜ್ಯ ಮಳಿಗೆಗಳ ಸರ್ವೇ ಕಾರ್ಯವನ್ನು ಪ್ರಾರಂಭಿಸಿ ಕನ್ನಡ ಭಾಷೆಯ ನಾಮಫಲಕಗಳನ್ನು ಬಳಸದಿರುವ ಮಳಿಗೆಗಳಿಗೆ ನೋಟಿಸ್ ಜಾರಿಗೊಳಿಸಬೇಕು. ನಂತರ ಕನ್ನಡ ಭಾಷೆಯುಳ್ಳ ನಾಮಫಲಕಗಳನ್ನು ಅನುಷ್ಠಾನಗೊಳಿಸಲು ಗಡವು ನೀಡಬೇಕು. ಆದರೂ ನಾಮಫಲಕ ಬದಲಾಯಿಸದಿದ್ದಲ್ಲಿ ಮೊದಲು ಪರವಾನಗಿಯನ್ನು ಅಮಾನತುಗೊಳಿಸಬೇಕು. ತದನಂತರ ಪರವಾನಗಿಯನ್ನು ರದ್ದುಗೊಳಿಸಬೇಕೆಂದು ಸೂಚಿಸಿದರು.
15 ದಿನಗಳಲ್ಲಿ ಸರ್ವೇ ಕಾರ್ಯ ಪೂರ್ಣಗೊಳಿಸಿ ಕನ್ನಡ ಭಾಷೆಯ ನಾಮಫಲಕ ಅಳವಡಿಸುವಂತೆ ನೋಟಿಸ್ ನೀಡಬೇಕು. ಜೊತೆಗೆ ಆಯಾ ವಲಯ ವ್ಯಾಪ್ತಿಯಲ್ಲಿ ಬರುವ ಮಾಲ್‌ಗಳ ಜೊತೆ ಸಭೆ ನಡಿಸಿ ಮಾಲ್ ಹಾಗೂ ಮಾಲ್ ಗಳಲ್ಲಿರುವ ಎಲ್ಲಾ ಮಳಿಗೆಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯುಳ್ಳ ನಾಮಫಲಕಗಳನ್ನು ಅಳವಡಿಸಲು ಸೂಚನೆ ನೀಡಿ, ಕನ್ನಡ ನಾಮಫಲಕ ಅಳವಡಿಸದಿದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಮಾಲ್ ಗಳಿಗೆ ಎಚ್ಚರಿಕೆ ನೀಡಬೇಕೆಂದು ಸೂಚಿಸಿದರು. ಹಾಗೆನೇ ಎಲ್ಲಾ ವಾಣಿಜ್ಯ ಮಳಿಗೆಗಳಲ್ಲಿ ಫೆಬ್ರವರಿ 28ರೊಳಗಾಗಿ ಶೇ. 60 ರಷ್ಟು ಕನ್ನಡ ನಾಮಫಲಗಳನ್ನು ಅಳವಡಿಸಿರಬೇಕು. ಈ ಸಂಬಂಧ ಎಲ್ಲಾ ವಲಯಗಳಲ್ಲೂ ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ತಾಕೀತು ಮಾಡಿದರು.
ಇಂದು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಕನ್ನಡ ನಾಮಫಲಕ ಅಳವಡಿಸದ ವಾಣಿಜ್ಯಮಳಿಗೆಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಮುಂಬರುವ ದಿನಗಳಲ್ಲಾದರೂ ಸರ್ಕಾರದ ಆದೇಶ ಪಾಲನೆ ಆಗುತ್ತಾ ಕಾದು ನೋಡಬೇಕು.