ಮುಸಲ್ಮಾನರಿಗೆ ಆರ್ಥಿಕ ಶಕ್ತಿ ತುಂಬಲು ಮೀಸಲಾತಿ: ಡಿಸಿಎಂ ಡಿ.ಕೆ. ಶಿವಕುಮಾರ್

RELATED POSTS

ಕಲಬುರಗಿ(thenewzmirror.com): “ಸಿಎಂ ಸಿದ್ದರಾಮಯ್ಯ ಅವರು 4 ಲಕ್ಷ ಕೋಟಿಗೂ ಹೆಚ್ಚಿನ ಮೊತ್ತದ ಐತಿಹಾಸಿಕ ಬಜೆಟ್ ಮಂಡನೆ ಮಾಡಿದ್ದಾರೆ. ಎಲ್ಲ ವರ್ಗದ ಜನರಿಗೂ ಸಮತೋಲನವಾಗಿ ಅನುದಾನ ಹಂಚಿಕೆ ಮಾಡಿದ್ದಾರೆ”ಗುತ್ತಿಗೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ನೀಡಿರುವಂತೆ ಮುಸಲ್ಮಾನರಿಗೂ ಶೇ.4ರಷ್ಟು ಮೀಸಲಾತಿ ನೀಡಲಾಗಿದೆ. ಅವರಿಗೂ ಆದ್ಯತೆ ನೀಡಿ ಆರ್ಥಿಕ ಶಕ್ತಿ ತುಂಬಲು ಈ ನಿರ್ಧಾರ ಮಾಡಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಕಲಬುರಗಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಶನಿವಾರ ಮಾತನಾಡಿದ ಅವರು, “ಹೆಣ್ಣು ಕುಟುಂಬದ ಕಣ್ಣು ಎಂದು ಭಾವಿಸಿ ಮಹಿಳೆಯರಿಗೆ ಹೆಚ್ಚು ಶಕ್ತಿ ತುಂಬಬೇಕು ಎಂಬ ಉದ್ದೇಶದಿಂದ ನಾವು ಅನೇಕ ಕಾರ್ಯಕ್ರಮಗಳನ್ನು ನೋಡಿದ್ದೇವೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರ ಬದುಕಿನಲ್ಲಿ ಪ್ರೋತ್ಸಾಹ ನೀಡುವ ಪ್ರಯತ್ನ ಮಾಡಿದ್ದೇವೆ. ಚುನಾವಣೆಗೂ ಮುನ್ನ ನಾವು ಕೊಟ್ಟ ಮಾತಿನಂತೆ ಪ್ರತಿ ವರ್ಷ 5 ಸಾವಿರ ಕೋಟಿ ಕೊಡುತ್ತಿದ್ದೇವೆ. ಕಳೆದ ವರ್ಷವೂ ಕೊಟ್ಟಿದ್ದೆವು. ಈ ವರ್ಷವೂ ಕೊಟ್ಟಿದ್ದೇವೆ. ಇಂದು ಜೇವರ್ಗಿಯಲ್ಲಿ 1 ಸಾವಿರ ಕೋಟಿ ಮೊತ್ತದ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುವುದು. ನೀರಾವರಿ ಯೋಜನೆ ಮೂಲಕ ಶಕ್ತಿ ತುಂಬಲು 27 ಸಾವಿರ ಕೋಟಿ ಹಣವನ್ನು ಮೀಸಲಿಡಲಾಗಿದೆ” ಎಂದು ತಿಳಿಸಿದರು. 

“ಕಲ್ಯಾಣ ಕರ್ನಾಟಕಕ್ಕೆ ಸಂಬಂಧಿಸಿದಂತೆ ತುಂಗಭದ್ರಾ ಅಣೆಕಟ್ಟಿನಿಂದ ವ್ಯರ್ಥವಾಗುತ್ತಿರುವ 25-30 ಟಿಎಂಸಿ ನೀರನ್ನು ಉಳಿಸಿಕೊಳ್ಳಲು ಯೋಜನೆ ರೂಪಿಸುವ ಬಗ್ಗೆ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಸಿಎಂ ರೇವಂತ ರೆಡ್ಡಿ ಅವರ ಸಮಯ ಕೇಳಿದ್ದೇನೆ. ನವಲಿ ಅಣೆಕಟ್ಟು ಹಾಗೂ ಇದಕ್ಕೆ ಪರ್ಯಾಯವಾಗಿ ಮತ್ತೊಂದು ಯೋಜನೆಯನ್ನು ಪ್ರಸ್ತಾಪಿಸಲಾಗಿದೆ. ಇನ್ನು ಸಿಎಂ ತಾಂತ್ರಿಕ ಸಲಹೆಗಾರರಾದ ಕನ್ಹಯ್ಯ ನಾಯ್ಡು ಅವರ ಬಳಿಯು ನಮ್ಮ ಅಧಿಕಾರಿಗಳು ಚರ್ಚೆ ಮಾಡಲು ಸೂಚಿಸಿದ್ದೇವೆ” ಎಂದರು. 

“ಆರೋಗ್ಯ ಇಲಾಖೆಯಿಂದ ಈ ಭಾಗದಲ್ಲಿ ಅನೇಕ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ 500 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ಕಟ್ಟಲು ಮುಂದಾಗಿದ್ದೇವೆ. ಇನ್ನು ದೇವಾಲಯದ ಅರ್ಚಕರಿಗೆ ನೀಡುವ ವೇತನ ಹೆಚ್ಚಿಸಿದ್ದೇವೆ. ಆದರೂ ಬಿಜೆಪಿಯವರು ಟೀಕೆ ಮಾಡುತ್ತಾರೆ. ಗ್ರಾಮೀಣ ಭಾಗದಲ್ಲಿ ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಆದ್ಯತೆ ನೀಡಿದ್ದೇವೆ. ಎಲ್ಲಾ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ನಾವು ಬಜೆಟ್ ಮಂಡಿಸಿದ್ದೇವೆ” ಎಂದು ಹೇಳಿದರು.. 

ಮುಸಲ್ಮಾನರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡಿರುವ ಬಗ್ಗೆ ಕೇಳಿದಾಗ, “ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಮುಸಲ್ಮಾನರಿಗೆ ಎದೆ ಸೀಳಿದರೆ ನಾಲ್ಕು ಅಕ್ಷರ ಇಲ್ಲ. ಪಂಚರ್ ಹಾಕಿಕೊಂಡು ಇರುತ್ತಾರೆ ಎಂದು ಹೇಳಿದ್ದರು. ಮುಸಲ್ಮಾನರಲ್ಲಿ ವಿದ್ಯಾವಂತರು, ಬುದ್ಧಿವಂತರು, ಪ್ರಜ್ಞಾವಂತರು ಇದ್ದಾರೆ ಎಂದು ಅವರಿಗೂ ಅರ್ಥವಾಗಬೇಕಲ್ಲವೇ. ಗುತ್ತಿಗೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ನೀಡಿರುವಂತೆ ಮುಸಲ್ಮಾನರಿಗೂ ಶೇ.4ರಷ್ಟು ಮೀಸಲಾತಿ ನೀಡಲಾಗಿದೆ. ಅವರಿಗೂ ಆದ್ಯತೆ ನೀಡಿ ಆರ್ಥಿಕ ಶಕ್ತಿ ತುಂಬಲು ಈ ನಿರ್ಧಾರ ಮಾಡಿದ್ದೇವೆ” ಎಂದು ತಿಳಿಸಿದರು.

ತೊಗರಿ ಬೆಳೆ ವಿಚಾರವಾಗಿ ಕೇಳಿದಾಗ, “ತೊಗರಿ ವಿಚಾರವಾಗಿ ಅರ್ಜಿ ಸಲ್ಲಿಸಿ ಸರ್ಕಾರದ ಗಮನ ಸೆಳೆದಿದ್ದಾರೆ. ನಾವು ತಾಂತ್ರಿಕ ಸಮಿತಿ, ಸಂಶೋಧನಾ ಕೇಂದ್ರದ ಬಗ್ಗೆ ಚರ್ಚೆ ಮಾಡಿದ್ದಾರೆ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಈ ವಿಚಾರವಾಗಿ ಜಾಗೃತರಾಗಿ ಈ ವಿಚಾರ ನೋಡಿಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರಕ್ಕೆ ರೈತರ ಬಗ್ಗೆ ವಿಶೇಷವಾದ ಕಾಳಜಿ ಇದೆ. ರೈತರ ಬದುಕನ್ನು ಉಳಿಸುತ್ತೇವೆ. ಅವರಿಗೆ ಬೆಂಬಲವಾಗಿ ನಿಲ್ಲುತ್ತೇವೆ. ತೊಗರಿ ಬೆಳೆಯ ಸಮಸ್ಯೆ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ” ಎಂದರು.

ಮುಸಲ್ಮಾನರಿಗೆ ಬೈಯೋದೆ ಪ್ರಹ್ಲಾದ್ ಜೋಷಿ ಕೆಲಸ:

ರಾಜ್ಯ ಬಜೆಟ್ ಮುಸಸ್ಮಾನರ ಬಜೆಟ್ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಟೀಕಿಸಿರುವ ಬಗ್ಗೆ ಕೇಳಿದಾಗ, “ಜೋಷಿ ಅವರಿಗೆ ಮುಸಲ್ಮಾನರನ್ನು ಬೈಯೋದೆ ಕೆಲಸ. ಅವರಿಗೆ ಇನ್ನೇನು ಮಾಡಲು ಸಾಧ್ಯ? ಬಿಜೆಪಿಯವರು ತಾವು ಹಿಂದೂ ತಾವು ಮಾತ್ರ ಮುಂದು ಎನ್ನುತ್ತಾರೆ. ಆದರೆ ನಾವುಗಳು ಆಗಲ್ಲ, ಹಿಂದೂ, ಮುಸ್ಲಿಂ, ಕ್ರೈಸ್ತ, ಲಿಂಗಾಯತರು, ಒಕ್ಕಲಿಗರು, ಪರಿಶಿಷ್ಟರು ಎಲ್ಲರೂ ಒಂದು ಎನ್ನುತ್ತೇವೆ. ಅವರಿಗೆ ಒಂದು ವರ್ಗದ ಜನ ಮಾತ್ರ ಬೇಕು. ನಮಗೆ ಎಲ್ಲ ವರ್ಗದ ಜನರೂ ಬೇಕು” ಎಂದು ತಿರುಗೇಟು ನೀಡಿದರು.

ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕವಾಗಿ 5 ಸಾವಿರ ಕೋಟಿ ನೀಡಬೇಕಿತ್ತು. ಬೇರೆ ಯೋಜನೆಗಳನ್ನು ಕೆಕೆಆರ್ ಡಿಬಿಗೆ ಸೇರಿಸಲಾಗುತ್ತಿದೆ ಎಂದು ಕೇಳಿದಾಗ, “5 ಸಾವಿರ ಕೋಟಿ ನೀಡುತ್ತಿರುವುದು ಹೆಚ್ಚಿನ ಅನುದಾನ. ಇದರ ಜತೆಗೆ ಬೇರೆ ಯೋಜನೆಗಳಿಂದ ಏನು ಬರಬೇಕೋ ಅದು ಬರಲಿದೆ. ನಮ್ಮಲ್ಲಿ ಶಾಸಕರಿಗೆ 25% ಹಣ ಸಿಕ್ಕರೆ ಉಳಿದ 75% ಹಣ ಈ ಭಾಗದ ಶಾಸಕರಿಗೆ ಸಿಗುತ್ತಿದೆ” ಎಂದು ವಿವರಿಸಿದರು.

ಇನ್ನು ಅನೇಕ ಯೋಜನೆಗಳಿಗೆ ಮನಮೋಹನ್ ಸಿಂಗ್ ಅವರ ಹೆಸರು:

ಬೆಂಗಳೂರು ವಿವಿಗೆ ಮನಮೋಹನ್ ಸಿಂಗ್ ಅವರ ಹೆಸರು ಇಟ್ಟಿರುವ ಬಗ್ಗೆ ಕೇಳಿದಾಗ, “ಮನಮೋಹನ್ ಸಿಂಗ್ ಅವರು ಮಾಜಿ ಪ್ರಧಾನಮಂತ್ರಿಗಳು ಹಾಗೂ ದೇಶ ಎಂದಿಗೂ ಮರೆಯಲು ಸಾಧ್ಯವಾಗದಂತಹ ನಾಯಕ. ನೆಹರೂ, ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ನಂತರ ದೇಶಕ್ಕೆ ಅಪಾರ ಕೊಡುಗೆ ನೀಡಿರುವ ಪ್ರಧಾನಿ ಮನಮೋಹನ್ ಸಿಂಗ್. ಅವರಿಗೆ ಮತ್ತೊಬ್ಬರು ಸಾಟಿಯಿಲ್ಲ. ದೇಶದಲ್ಲಿ ಕೋಟ್ಯಂತರ ಜನ ಹಸಿವಿನಿಂದ ದೂರವಿದ್ದರೆ ಅದಕ್ಕೆ ಕಾರಣ ಮನಮೋಹನ್ ಸಿಂಗ್ ಅವರ ಕೊಡುಗೆ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತರೆ ಮೂಲಕ ಉದ್ಯೋಗ ಮಾಡುತ್ತಿದ್ದರೆ ಅದಕ್ಕೆ ಕಾರಣ ಮನಮೋಹನ್ ಸಿಂಗ್. ಸಂವಿಧಾನಿಕ ತಿದ್ದುಪಡಿ ತಂದು ದೇಶಕ್ಕೆ ಅವರು ಶಕ್ತಿ ತುಂಬಿದ್ದಾರೆ. ದೇಶದ ಆರ್ಥಿಕ ಶಕ್ತಿಯನ್ನು ಬಲಿಷ್ಠಗೊಳಿಸಿದ ನಾಯಕ. ಹೀಗಾಗಿ ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಕೇವಲ ಬೆಂಗಳೂರು ವಿವಿಗೆ ಮಾತ್ರ ಅವರ ಹೆಸರನ್ನು ಸೀಮಿತವಾಗಿಸುವುದಿಲ್ಲ. ಮುಂಬರುವ ಅನೇಕ ಯೋಜನೆಗಳಿಗೆ ಅವರ ಹೆಸರನ್ನು ಇಡುತ್ತೇವೆ” ಎಂದು ತಿಳಿಸಿದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist