ಬೆಂಗಳೂರು, (www.thenewzmirror.com) :
ವಸತಿ ಸಮುಚ್ಚಯಗಳ ಸಂಕೀರ್ಣಗಳ ನಿರ್ವಹಣೆಗಾಗಿ ಸಹಕಾರ ಸಂಘಗಳನ್ನು ನೋಂದಾಯಿಸದಂತೆ ಸಹಕಾರ ಸಂಘಗಳ ರಿಜಿಸ್ಟ್ರಾರ್ ಗೆ ರಾಜ್ಯ ಹೈ ಕೋರ್ಟ್ ಆದೇಶ ನೀಡಿದೆ.
ಡಿಎಸ್ ಮ್ಯಾಕ್ಸ್ ಸ್ಟಾರ್ನೆಸ್ಟ್ ಎಂಬ ವಸತಿ ಸಮುಚ್ಚಯ ಸಂಕೀರ್ಣದಲ್ಲಿ ಕೆಲವು ವಸತಿ ಮಾಲೀಕರು ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗಡೆ ನೇತೃತ್ವದ ನ್ಯಾಯಪೀಠ ಈ ಆದೇಶ ನೀಡಿದೆ.
ವಸತಿ ಸಮುಚ್ಚಯ ಸಂಕೀರ್ಣವನ್ನು ನಿರ್ವಹಿಸಲು ಸಹಕಾರ ಸಂಘವನ್ನು ನೋಂದಾಯಿಸದಂತೆ ಸಹಕಾರಿ ಸಂಘಗಳ ರಿಜಿಸ್ಟ್ರಾರ್‌ಗೆ ಸೂಚಿಸಿದೆ. ಸದಸ್ಯರಿಂದ ಷೇರು ಬಂಡವಾಳ ಸಂಗ್ರಹಿಸುವ ಅನುಮತಿಯನ್ನು ಸಹ ರದ್ದುಪಡಿಸಿದೆ. ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯ್ದೆ, 1972 ರ ಅಡಿಯಲ್ಲಿ ಸಂಘವನ್ನು ರಚಿಸುವಂತೆ ನ್ಯಾಯಾಲಯ ಬಿಲ್ಡರ್ ಡಿಎಸ್ ಮ್ಯಾಕ್ಸ್‌ಗೆ ನಿರ್ದೇಶನ ನೀಡಿದೆ.
ವಸತಿ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಸಹಕಾರಿ ಸಂಘಗಳನ್ನು ರಚಿಸಬಾರದು. 1972 ರ ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯ್ದೆಯ ನಿಬಂಧನೆಗಳ ಮೂಲಕ ಇಂತಹ ಸಂಘಟಗಳ ಆಡಳಿತ ನಡೆಸಲ್ಪಡುತ್ತವೆ. ಆದರೆ ಕರ್ನಾಟಕ ಸಹಕಾರಿ ಸಂಸ್ಥೆಗಳ ಕಾಯ್ದೆಯಡಿ ಯಾವುದೇ ಸಹಕಾರ ಸಂಘವನ್ನು ರಚಿಸಲು ಅವಕಾಶವಿಲ್ಲ ಎಂಬುದು ಅರ್ಜಿದಾರರ ವಾದವಾಗಿದೆ.
ಕಾಯಿದೆ 1972 ರ ಅಡಿಯಲ್ಲಿ ಸಂಘದ ನೋಂದಣಿಯನ್ನು ಹೊಂದಬಹುದಾಗಿದೆ. 1972 ರ ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯ್ದೆಯಡಿಯಲ್ಲಿ ಸಂಘವನ್ನು ರಚಿಸುವಲ್ಲಿ ಸಹಕರಿಸಲು ಬಿಲ್ಡರ್, ಮಾಲೀಕರಿಗೆ ನಿರ್ದೇಶನ ಸಹ ನೀಡಲಾಗಿದೆ. ಅರ್ಜಿದಾರರ ಪರ ವಕೀಲರಾದ ಅಡ್ವ ಬೀನಾ ಪಿಳ್ಳೈ ವಾದ ಮಂಡಿಸಿದ್ದರು.