ಬೆಂಗಳೂರು, (www.thenewzmirror.com) ;
ವಿಶ್ವವಿಖ್ಯಾಯ ತಿರುಪತಿ ಶ್ರೀ ವೆಂಕಟೇಶ್ವರ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಬಳಸಿರುವ ಪದಾರ್ಥಗಳು ಭಾರಿ ವಿವಾದ ಸೃಷ್ಟಿಸಿದೆ. ಲಡ್ಡು ತಯಾರಿಸಲು ಬಳಸಿದ ತುಪ್ಪದಲ್ಲಿ ದನ ಹಾಗೂ ಹಂದಿ ಮಾಂಸದ ಕೊಬ್ಬು, ಮೀನಿನ ಎಣ್ಣೆ ಅಲ್ಲದೆ ಪಾಮ್ ಆಯಿಲ್, ಸೂರ್ಯಕಾಂತಿ ಮತ್ತು ಸೋಯಾಬೀನ್ ಮುಂತಾದ ಅಂಶಗಳು ಇರುವುದು ಪತ್ತೆಯಾಗಿದೆ.
ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ತಿರುಪತಿ ಲಡ್ಡು ಪ್ರಕರಣ ಇದೀಗ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಸ್ವತಃ ಈ ವಿಚಾರವನ್ನ ಟಿಟಿಡಿ ಕೂಡ ಒಪ್ಪಿಕೊಂಡಿದೆ. ಟಿಟಿಡಿ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಬಳಸಲಾಗುತ್ತಿದೆ ಅನ್ನೋ ಸುದ್ದಿ ಹೊರ ಬರ್ತಿದ್ದಂತೆ ಕೇಂದ್ರ ಸರ್ಕಾರ ಕೂಡ ಮಧ್ಯಪ್ರವೇಶಿಸಿದ್ದು, ಘಟನೆ ಕುರಿತಂತೆ ವರದಿಯನ್ನೂ ಕೇಳಿದೆ.
ತಿರುಪತಿ ಲಡ್ಡು ತಯಾರಿಕೆಯಲ್ಲಿ ಕಲಬೆರಿಕೆ ತುಪ್ಪ ಬಳಕೆ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿರುವ ನಡುವೆ ಎಚ್ಚೆತ್ತ ಕರ್ನಾಟಕ ಸರ್ಕಾರ ರಾಜ್ಯದ ದೇವಾಲಯಗಳಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪ ಬಳಕೆ ಮಾಡುವಂತೆ ಆದೇಶ ಹೊರಡಿಸಿದೆ.
ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಸೂಚನರ ಮೇರೆಗೆ ಧಾರ್ಮಿಕ ದತ್ತಿ ಇಲಾಖೆ ಈ ತೀರ್ಮಾನ ಮಾಡಿದೆ. ರಾಜ್ಯ ಧಾರ್ಮಿಕ ದತ್ತಿ ಇಲಾಖೆಯು ದೇವಸ್ಥಾನಗಳ ಸೇವೆಗಳಿಗೆ, ದೀಪಗಳಿಗೆ, ಪ್ರಸಾದ ತಯಾರಿಕೆಗೆ, ದಾಸೋಹ ಭವನಗಳಲ್ಲಿ ನಂದಿನಿ ತುಪ್ಪ ಬಳಸುವಂತೆ ಸೂಚನೆ ನೀಡಿದೆ.
ರಾಜ್ಯದ ಎಲ್ಲಾ ಮುಜರಾಯಿ ಇಲಾಖೆಗಳ ದೇಗುಲಗಳಲ್ಲಿ ಪ್ರಸಾದ ಸೇರಿ ವಿವಿಧ ದಾಸೋಹಗಳಿಗೆ ಕಡ್ಡಾಯವಾಗಿ ನಂದಿನಿ ತುಪ್ಪ ಬಳಸುವಂತೆ ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಇಂದು ಮಹತ್ವದ ಆದೇಶ ಹೊರಡಿಸಿದೆ. ಹಾಗೆನೇ ಇನ್ನುಮುಂದೆ ದೇವಸ್ಥಾದ ಸೇವೆಗಳಿಗೆ, ದೀಪಗಳಿಗೆ, ಪ್ರಸಾದ ತಯಾರಿಕೆಗೆ, ದಾಸೋಹ ಭವನಗಳಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪವನ್ನೇ ಬಳಕೆ ಮಡಬೇಕು ಎಂದು ಸೂಚನೆ ನೀಡಲಾಗಿದೆ.