ಬೆಂಗಳೂರು, (www.thenewzmirror.com);
ನೀವು ನಂಬಿದ್ರೆ ನಂಬಿ ಬಿಟ್ರೆ ಬಿಡಿ…, ಬೃಹತ್ತಾಕಾರವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಸದ್ದಿಲ್ಲದೆ ರಾಜಕಾಲುವೆ ಕಣ್ಮರೆಯಾಗುತ್ತಿದೆ. ಇದಕ್ಕೆ ಸ್ಪ್ರಳೀಯ ಜನಪ್ರತಿನಿಧಿಗಳ ಬೆಂಬಲವೂ ಇದೆ ಅಂತಾನೇ ಹೇಳಲಾಗುತ್ತಿದೆ. ಇದೆಲ್ಲಾ ಗೊತ್ತಿದ್ದರೂ ಬಿಬಿಎಂಪಿ ಮಾತ್ರ ಕೈಕಟ್ಟಿ ಕುಳಿತಿರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರತಿ ಬಾರಿ ಮಳೆ ಬಂದಾಗ ಮಳೆ ನೀರು ಸರಾಗವಾಗಿ ಹರಿಯಬೇಕು ಅಂತ ರಾಜಕಾಲುವೆ ನಿರ್ಮಾಣ ಮಾಡಲಾಗಿದೆ. ಸದ್ಯ ೮೦೦ ಕಿಲೋ ಮೀಟರ್ ಗೂ ಉದ್ದ ರಾಜಕಾಲುವೆ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದು, ಅದನ್ನ ನಿರ್ವಹಣೆ ಮಾಡುವ ಜವಾಬ್ದಾರಿ ಹೊತ್ತಿರೋದು ಬಿಬಿಎಂಪಿ ಅರ್ಥಾತ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ. ಪ್ರತಿ ವರ್ಷ ರಾಜಕಾಲುವೆ ನಿರ್ವಹಣೆಗೆ ಅಂತ ಕೋಟಿ ಕೋಟಿ ಹಣವನ್ನೂ ಮೀಸಲಿಡುವ ಬಿಬಿಎಂಪಿ ಹೆಸರಿಗೆ ಮಾತ್ರ ಹಣವನ್ನ ನಿರ್ವಹಣೆ ಹೆಸರಲ್ಲಿ ವ್ಯಯಮಾಡ್ತಿದೆ. ಆದ್ರೆ ಅದರ ದುರಸ್ತಿ ಅಥವಾ ನಿರ್ವಹಣೆ ಮಾತ್ರ ಶೂನ್ಯ ಅನ್ನೋದು ಪದೇ ಪದೇ ಮಳೆಗಾಲದಲ್ಲಿ ಸಾಬೀತಾಗುತ್ತಲೇ ಇದೆ.
ಬೆಂಗಳೂರಿನ ಹೃದಯ ಭಾಗದಲ್ಲಿ ರಾಜಕಾಲುವೆ ಸದ್ದಿಲ್ಲದೆ ಮರೆಯಾಗುತ್ತಿದೆ. ನೀರು ಹರಿಯವು ಜಾಗದಲ್ಲಿ ಮಣ್ಣು ಸುರಿದು ಅದನ್ನ ಒತ್ತುವರಿ ಮಾಡಿಕೊಳ್ಳುವ ಕೆಲಸ ಆಗುತ್ತಿದೆ. ಈ ಕುರಿತಂತೆ ಸ್ಥಳೀಯರು ಜನಪರ ಸುದ್ದಿ ಪ್ರಸಾರ ಮಾಡುವ ದಿ ನ್ಯೂಝ್ ಮಿರರ್ ಗೆ ಫೋಟೋ ಸಮೇತ ದೂರು ಕೊಟ್ಟಿದ್ದಾರೆ. ಇದನ್ನ ಆಧರಿಸಿ ಸ್ಥಳಕ್ಕೆ ತೆರಳಿದಾಗ ಅಲ್ಲಿ ರಾಜಕಾಲುವೆ ಒಳಗೆ ಮಣ್ಣು ಸುರಿದು ಅದನ್ನ ಜೆಸಿಬಿ ಮೂಲಕ ಸಮತಟ್ಟು ಮಾಡುವ ಕೆಲಸ ಆಗುತ್ತಿದೆ.



ವಿಜಯನಗರ ಪೈಪ್ ಲೈನ್ ಗೆ ಹೊಂದಿಕೊಂಡಂತೆ ಇರುವ ರಾಜಕಾಲುವೆಯಲ್ಲಿ ಕಳೆದ ೧೫ ದಿನಗಳಿಂದ ರಾತ್ರಿ ಹೊತ್ತು ಮಣ್ಣು ಸುರಿದು ಜೆಸಿಬಿ ಮೂಲಕ ಅದನ್ನ ಸಮ ಮಾಡುವ ಕೆಲಸ ಆಗುತ್ತಿದೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಹೀಗೆ ರಾಜಕಾಲುವೆಯನ್ನ ಒತ್ತುವರಿ ಮಾಡಿಕೊಂಡರೆ ಮಳೆ ನೀರು ಹೇಗೆ ಹೋಗುತ್ತೆ..? ಮತ್ತೆ ಮಳೆ ಬಂದಾಗ ಮನೆಗಳಿಗೆ ನೀರು ನುಗ್ಗುತ್ತೆ ಅಲ್ವಾ ಅಂತ ಪ್ರಶ್ನೆ ಮಾಡುತ್ತಿದ್ದಾರೆ.
ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ..?
ವಿಜಯನಗರ ಪೈಪ್ ಗೆ ಹೊಂದಿಕೊಂಡಂತೆ ಇರುವ ರಾಜಕಾಲುವೆಯಲ್ಲಿ ಈರೀತಿ ಒತ್ತುವರಿಯಾಗ್ತಿದೆ. ( ಈ ಹಿಂದೆ ಪ್ರಕಟವಾಗಿದ್ದ ವರದಿಯಲ್ಲಿ ವರದಿಗಾರರ ಕಣ್ತಪ್ಪಿನಿಂದ ವಿಜಯನಗರ ವಿಧಾನಸಭಾ ಕ್ಷೇತ್ರ ಎಂದು ಉಲ್ಲೇಖವಾಗಿತ್ತು. ವರದಿ ಸತ್ಯಕ್ಕೆ ದೂರವಾಗಿದ್ದು ಎಂದು ತಿಳಿದ ನಂತರ ಮತ್ತೆ ಮರು ಪ್ರಕಟಮಾಡಲಾಗುತ್ತಿದೆ) ಹೀಗೆ ಮಣ್ಣು ಸುರಿದು ಅದನ್ನ ಒತ್ತುವರಿ ಮಾಡುತ್ತಿದ್ದರೂ ಈ ವಿಚಾರ ಸ್ಥಳೀಯ ಜನಪ್ರತಿನಿಧಿಗಳಿಗೆ ಗೊತ್ತಿಲ್ವಾ..? ಗೊತ್ತಿದ್ದರೂ ಸುಮ್ಮನಿರೋದು ಯಾಕೆ ಎಂಬ ಹತ್ತು ಹಲವು ಪ್ರಶ್ನೆಗಳು ಕಾಡುತ್ತಿವೆ.

ಬಿಬಿಎಂಪಿ ಏನು ಮಾಡುತ್ತಿದೆ..?
ಇನ್ನು ಬಿಬಿಎಂಪಿಯಲ್ಲಿ ಸುಗಮ ಆಡಳಿತಕ್ಕೆ ಒಂದೊಂದು ವಲಯಕ್ಕೆ ಒಬ್ಬೊಬ್ಬ ಐಎಎಸ್ ಅಧಿಕಾರಿಯನ್ನ ನೇಮಿಸಲಾಗಿದೆ. ಹೀಗಿದ್ದರೂ ಇಷ್ಟು ದೊಡ್ಡ ಮಟ್ಟದಲ್ಲಿ ರಾಜಕಾಲುವೆ ಒತ್ತುವರಿ ಆಗುತ್ತಿದ್ದರೂ ಸುಮ್ಮನಿರೋದು ಯಾಕೆ..? ರಾಜಕೀಯ ಪ್ರಭಾವಕ್ಕೆ ಮಣಿದು ಕಣ್ಮುಚ್ಚಿ ಕುಳಿತಿದ್ದಾರಾ..? ಇಲ್ಲ ಮುಖ್ಯ ಆಯುಕ್ತರ ಮೌಖಿಕ ಆದೇಶದ ಮೇರೆಗೆ ಸುಮ್ಮನಿದ್ದಾರಾ ಅಂತ ಸ್ಥಳೀಯರು ಪ್ರಶ್ನೆ ಮಾಡುತ್ತಿದ್ದಾರೆ.