ಬೆಂಗಳೂರು, (www.thenewzmirror.com) :
ಬೆಂಗಳೂರು ಜಲಮಂಡಳಿ ವ್ಯಾಪ್ತಿಯ ಪ್ರದೇಶಗಳಿಗೆ 1470 ಎಂಎಲ್‍ಡಿ ಕಾವೇರಿ ನೀರನ್ನು ನಿತ್ಯ ಸರಬರಾಜು ಮಾಡಲಾಗುತ್ತಿದೆ. ಈ ಸರಬರಾಜಿನಲ್ಲಿ ಯಾವುದೇ ರೀತಿಯಲ್ಲಿ ವ್ಯತ್ಯಯವಾಗಿಲ್ಲ. ಬೆಂಗಳೂರು ನಗರಕ್ಕೆ ಬರುವ ನೀರು ಬರುತ್ತಿದೆ. ನಗರದಲ್ಲಿ ಸಮರ್ಪಕ ನೀರು ಸರಬರಾಜಿಗೂ ಸಹ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬದ್ಧವಾಗಿದ್ದು ಬೆಂಗಳೂರಿಗರು ಯಾವುದೇ ಸುಳ್ಳುವದಂತಿಗಳಿಗೆ ಕಿವಿಗೊಡಬೇಡಿ ಎಂದು ಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಮನವಿ ಮಾಡಿದ್ದಾರೆ.
![](https://thenewzmirror.com/wp-content/uploads/2024/03/1000855431-edited-1.jpg)
ಬೆಂಗಳೂರು ನಗರಕ್ಕೆ 1.54ಟಿಎಂಸಿ ನೀರು ತಿಂಗಳಿಗೆ ಅಗತ್ಯವಾಗಿದ್ದು,ಮಾರ್ಚ್ ತಿಂಗಳಿಂದ ಜುಲೈ ಅಂತ್ಯದವರೆಗೆ 8 ಟಿಎಂಸಿ ಅಗತ್ಯವಿದೆ. ಬೆಂಗಳೂರು ಸೇರಿದಂತೆ ಕಾವೇರಿ ನೀರಿನ ಮೇಲೆ ಅವಲಂಬನೆಯಾಗಿರುವ ನಗರಗಳಿಗೆ ಜುಲೈ ಅಂತ್ಯದವರೆಗೆ 17 ಟಿಎಂಸಿ ನೀರು ಬೇಕಾಗಿದ್ದು,ಕಾವೇರಿ ಜಲಾಶಯಗಳಲ್ಲಿ 34 ಟಿಎಂಸಿ ನೀರು ಸಂಗ್ರಹವಿದೆ. ಬೇಡಿಕೆಗಿಂತ ಎರಡುಪಟ್ಟು ನೀರು ಸಂಗ್ರಹವಿದ್ದು ಯಾವುದೇ ರೀತಿಯ ಆತಂಕ ಬೇಡ. ನೀರನ್ನು ನಗರಕ್ಕೆ ಸಮರ್ಪಕವಾಗಿ ಸರಬರಾಜು ಮಾಡಲು ಬದ್ಧವಾಗಿದ್ದೇವೆ ಎಂದರು.
ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಇದ್ದು,ನಿತ್ಯ 2100 ಎಂಎಲ್‍ಡಿ ನೀರು ಅಗತ್ಯವಿದೆ(ಓರ್ವ ಮನುಷ್ಯನಿಗೆ ನಿತ್ಯದ ಸರಾಸರಿ 150 ಲೀಟರ್ ನೀರು). 1450 ಎಂಎಲ್‍ಡಿ ಕಾವೇರಿ ನೀರು ನಿತ್ಯ ಬರುತ್ತಿದ್ದು,ಅದನ್ನು ನಮ್ಮ ವ್ಯಾಪ್ತಿಯ ಪ್ರದೇಶಗಳಿಗೆ ಸಮರ್ಪಕವಾಗಿ ಸರಬರಾಜು ಮಾಡಲಾಗುತ್ತಿದೆ.
ಬೆಂಗಳೂರು ಹೊರವಲಯದ 110 ಹಳ್ಳಿಗಳಲ್ಲಿ ಅಂತರ್ಜಲ ಮಟ್ಟ ಕುಸಿತದಿಂದ ಉಳಿದ 650 ಎಂಎಲ್‍ಡಿ ನೀರಿನ ಸಮಸ್ಯೆ ಉಂಟಾಗಿದೆ. ಅಂತರ್ಜಲ ಮಟ್ಟ ಕುಸಿತಕ್ಕೆ ನಾವೆಲ್ಲರು ಕಾರಣರಾಗಿದ್ದೇವೆ. ನಗರದ ಹೊರವಲಯದ ಅಪಾರ್ಟ್‍ಮೆಂಟ್‍ಗಳು ಬೆಳೆದಿದ್ದು,ಇವರ್ಯಾರು ಕಾವೇರಿ ನೀರಿನ ಮೇಲೆ ಅವಲಂಬನೆಯಾಗಿರಲಿಲ್ಲ. ಬೋರವೆಲ್‍ಗಳನ್ನು ನೆಚ್ಚಿಕೊಂಡಿದ್ದರು;ಈಗ ಅಂತರ್ಜಲಮಟ್ಟ ಕುಸಿತದಿಂದ ಅವರಿಗೆ ಸಮಸ್ಯೆ ಉಂಟಾಗಿದೆ ಎಂದರು.
ಬೋರವೆಲ್‍ಗಳ ಮೇಲೆ ಅವಲಂಬಿಸಿರುವವರ ಸಮಸ್ಯೆ ಬಗೆಹರಿಸಲು ಮಂಡಳಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.