ಬೆಂಗಳೂರು, (www.thenewzmirror.com) :
ಪೌರತ್ವ ತಿದ್ದುಪಡಿ ಕಾಯ್ದೆ (CAA) ಅನುಷ್ಠಾನದ ನಿಯಮಗಳನ್ನು ಗೃಹ ಸಚಿವಾಲಯ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಆ ಮೂಲಕ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ದಾಖಲೆ ರಹಿತ ಮುಸ್ಲಿಮೇತರ ವಲಸಿಗರಿಗೆ ತ್ವರಿತ ಪೌರತ್ವಕ್ಕೆ ದಾರಿ ಮಾಡಿಕೊಟ್ಟಿದೆ.
CAA ಸಿಟಿಜನ್ ಅಮೆಂಡ್ಮೆಂಟ್ ಆಕ್ಟ್ ಅಥವಾ ಸಿಎಎ ಎಂಬುದು ಭಾರತಕ್ಕೆ ವಲಸೆ ಬಂದು ನೆಲಸಿರುವ ನೆರೆಯ ದೇಶಗಳ ಅಲ್ಪಸಂಖ್ಯಾತ ಸಮುದಾಯಗಳಿಗೆ ಭಾರತೀಯ ಪೌರತ್ವ ಕಲ್ಪಿಸುವ ಕಾಯ್ದೆ. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಮೂಲದ ಹಿಂದೂ, ಸಿಖ್, ಬೌದ್ಧ, ಕ್ರೈಸ್ತ, ಜೈನ ಮತ್ತು ಪಾರ್ಸಿ ಜನರಿಗೆ ಸಿಎಎ ಅಡಿ ಭಾರತೀಯ ಪೌರತ್ವ ಅವಕಾಶ ಸಿಗಲಿದೆ. ಧಾರ್ಮಿಕ ಆಧಾರದಲ್ಲಿ ಪೌರತ್ವ ನೀಡುವುದು ತಪ್ಪು ಎಂಬುದು ಮುಸ್ಲಿಂ ಸಮುದಾಯದ ಆಕ್ಷೇಪ.
ಸಿಎಎ ವಿಚಾರ ಕಳೆದ ನಾಲ್ಕೈದು ವರ್ಷದಿಂದಲೂ ಸಾಕಷ್ಟು ಚರ್ಚೆ, ಪ್ರತಿಭಟನೆಗೆ ಕಾರಣವಾಗಿತ್ತು. ಸಿಎಎ ನಿಬಂಧನೆಗಳ ಅಡಿಯಲ್ಲಿ, ನೆರೆಯ ದೇಶಗಳಾದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ 2014 ರ ಡಿಸೆಂಬರ್ 31 ಕ್ಕಿಂತ ಮೊದಲು ಭಾರತಕ್ಕೆ ಬಂದ ಆರು ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದೂಗಳು, ಕ್ರಿಶ್ಚಿಯನ್ನರು, ಸಿಖ್ಖರು, ಜೈನರು, ಬೌದ್ಧರು ಮತ್ತು ಪಾರ್ಸಿಗಳಿಗೆ ಭಾರತೀಯ ಪೌರತ್ವ ನೀಡುವುದೇ CAA ಕಾಯ್ದೆ.
ಮಾಮೂಲಿಯ ಕಾನೂನು ಪ್ರಕಾರ ಯಾವುದೇ ವ್ಯಕ್ತಿ ಭಾರತೀಯ ಪೌರತ್ವ ಹೊಂದಬೇಕಾದರೆ 11 ವರ್ಷ ಇಲ್ಲಿ ವಾಸ ಮಾಡಿರಬೇಕು. ಸಿಎಎಯಲ್ಲಿ ನೆರೆಯ ದೇಶಗಳ ಅಲ್ಪಸಂಖ್ಯಾತ ಸಮುದಾಯಗಳಿಗೆ ಒಂದಷ್ಟು ವಿನಾಯಿತಿ ಕೊಡಲಾಗಿದೆ.
ಸಿಎಎಯಲ್ಲಿ ಧಾರ್ಮಿಕವಾಗಿ ತಾರತಮ್ಯ ಮಾಡಲಾಗಿದೆ. ಅಲ್ಪಸಂಖ್ಯಾತರ ಪಟ್ಟಿಯಲ್ಲಿ ಮುಸ್ಲಿಮರಿಲ್ಲ. ಶ್ರೀಲಂಕಾ ಮೊದಲಾದ ನೆರೆಯ ದೇಶಗಳಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಿದ್ದಾರೆ. ಅವರಿಗೆ ಯಾಕೆ ಪೌರತ್ವ ಕೊಡುತ್ತಿಲ್ಲ? ಮುಸ್ಲಿಮರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ ಎಂಬದು ಕೆಲ ವರ್ಗದ ಮುಸ್ಲಿಮರಿಂದ ಬರುತ್ತಿರುವ ಆಕ್ಷೇಪ.
ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಸ್ಥಳಾಂತರಗೊಂಡ ಅಲ್ಪಸಂಖ್ಯಾತರಿಗೆ ಅರ್ಜಿ ಪ್ರಕ್ರಿಯೆಯ ಸಮಯದಲ್ಲಿ ಯಾವುದೇ ದಾಖಲೆ ಒದಗಿಸುವುದರಿಂದ ವಿನಾಯಿತಿ ನೀಡಲಾಗಿದೆ. ಈ ಕ್ರಮವು ತಮ್ಮ ತಾಯ್ನಾಡಿನಲ್ಲಿ ಕಿರುಕುಳವನ್ನು ಎದುರಿಸಿದವರಿಗೆ ಪೌರತ್ವ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಗುರಿಯನ್ನು ಹೊಂದಿದೆ.
ಅರ್ಜಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಗೃಹ ಸಚಿವಾಲಯವು ಪೋರ್ಟಲ್ ಅನ್ನು ಸಿದ್ಧಪಡಿಸಿದೆ, ಇದು ಸಂಪೂರ್ಣವಾಗಿ ಆನ್ ಲೈನ್ ಆಗಿರುತ್ತದೆ. ಅರ್ಜಿದಾರರು ಪ್ರಯಾಣ ದಾಖಲೆಗಳಿಲ್ಲದೆ ಭಾರತಕ್ಕೆ ಪ್ರವೇಶಿಸಿದ ವರ್ಷವನ್ನು ಘೋಷಿಸಬೇಕಾಗುತ್ತದೆ. ಅವರಿಂದ ಯಾವುದೇ ಹೆಚ್ಚುವರಿ ದಾಖಲೆಗಳನ್ನು ಕೋರಲಾಗುವುದಿಲ್ಲ. ಸಿಎಎ ಅಡಿಯಲ್ಲಿನ ಪ್ರಯೋಜನಗಳನ್ನು ಮೂರು ನೆರೆಯ ದೇಶಗಳ ದಾಖಲೆರಹಿತ ಅಲ್ಪಸಂಖ್ಯಾತರಿಗೆ ವಿಸ್ತರಿಸಲಾಗುವುದು.
ಸಿಎಎ ಸಂಸತ್ತಿನಲ್ಲಿ ಅಂಗೀಕಾರವಾದ ನಂತರ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿದ್ದು, ಇದಕ್ಕೆ ವಿರೋಧವು ಪ್ರಚಲಿತದಲ್ಲಿದೆ. ಆದಾಗ್ಯೂ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಎಎ ಜಾರಿಗೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ್ದರು. ಈ ಎಲ್ಲದರ ನಡುವೆ ಮಹತ್ವದ ಬೆಳವಣಿಗೆಯೊಂದರಲ್ಲಿ, 2024 ರಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ದೇಶಾದ್ಯಂತ ಜಾರಿಗೆ ತರಲಾಗಿದೆ.