ಬೆಂಗಳೂರು, (www.thenewzmirror.com) ;
ಪತ್ನಿಯನ್ನು ಕೊಂದು ಪರಾರಿಯಾಗಿದ್ದ ಪಾತಕಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ ಘಟನೆ ಕೋಲಾರದಲ್ಲಿ ನಡೆದಿದೆ.
ಚಾಮರಾಜಪೇಟೆಯಲ್ಲಿ ಪತ್ನಿಯನ್ನು ಕೊಂದಿದ್ದ ಆರೋಪಿ, ತಲೆಮರೆಸಿಕೊಂಡು ಕೋಲಾರದಲ್ಲಿ ಓಡಾಡುತ್ತಿದ್ದ. ಕೊಲೆ ನಡೆದ ಐದು ದಿನದ ಬಳಿಕ, ಆರೋಪಿ ತಬ್ರೇಝ್ ಪಾಷಾನ ಬೆನ್ನು ಹತ್ತಿದ ಪೊಲೀಸರಿಗೆ ಆತನ ಹೆಣ ಎದುರಾಗಿದೆ. ಫೇಸ್‌ಬುಕ್ ಲೈವ್ ಮಾಡುತ್ತಲೇ ಪತ್ನಿಯ ಹತ್ಯೆ ಮಾಡಿದ್ದ ಪಾತಕಿ, ಪೊಲೀಸರಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಜೀವ ಕಳೆದುಕೊಂಡಿದ್ದಾನೆ.
ಫಾತಿಮಾ (34) ಪತಿಯಿಂದ ಕೊಲೆಯಾದ ಮಹಿಳೆ. ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಐದು ವರ್ಷಗಳ ಹಿಂದೆಯೇ ಈ ದಂಪತಿ ದೂರವಾಗಿದ್ದರು. ಆರೋಪಿ ತಬ್ರೇಝ್ ಪಾಷಾ ಕಳ್ಳತನ ಕೇಸ್, ಗಾಂಜಾ ಕೇಸ್‌ನಲ್ಲಿ ಭಾಗಿಯಾಗಿದ್ದ. ಇತ್ತ ಅಂಗವಿಕಲ ತಾಯಿಯೊಂದಿಗೆ ಇಬ್ಬರು ಮಕ್ಕಳ ಜತೆ ಫಾತಿಮಾ ವಾಸವಿದ್ದಳು. ಆದರೂ ಆಗಾಗ ಮನೆಗೆ ಬಂದು ಜಗಳ ಮಾಡುತ್ತಿದ್ದ. ಪದೇ ಪದೆ ಮನೆಗೆ ಬರುವಂತೆ ಕಿರುಕುಳ ಕೊಡುತ್ತಿದ್ದ.
ಹೀಗಾಗಿ ಫಾತಿಮಾ ತಾಯಿ, ತಬ್ರೇಝ್ ಏನಾದರೂ ಮಾಡುತ್ತಾನೆ ಎಂಬ ಆತಂಕದಿಂದ ಮನೆಗೆ ಸಿಸಿಟಿವಿ ಅಳವಡಿಸಿದ್ದರು. ಸೋಮವಾರ ಬೆಳಗ್ಗೆ 8.30ರ ಸುಮಾರಿಗೆ ಮನೆಗೆ ಬಂದು ಜಗಳ ತೆಗೆದಿದ್ದ ತಬ್ರೇಜ್ ಪಾಷ, ಇಬ್ಬರು ಮಕ್ಕಳನ್ನು ಹೊರಗೆ ಕಳಿಸಿದ್ದ. ತಾಯಿಯ ಮುಂದೆಯೇ ಪತ್ನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದ.
ಆರೋಪಿಯನ್ನು ಬಂಧಿಸಲು ಕೋಲಾರಕ್ಕೆ ತೆರಳಿದ್ದ ಚಾಮರಾಜಪೇಟೆ ಪೊಲೀಸರ ತಂಡ ಆತನ ಚಿಕ್ಕಮ್ಮನ ಮನೆಗೆ ಪ್ರವೇಶಿಸಿದಾಗ, ತಪ್ಪಿಸಿಕೊಳ್ಳುವ ಭರದಲ್ಲಿ ಸುಮಾರು 12 ಅಡಿ ಎತ್ತರದ ಮನೆಯ ಟೆರೇಸ್‌ನಿಂದ ಈತ ಜಿಗಿದಿದ್ದಾನೆ. ಆಗ ಬಿದ್ದು ಅಸ್ವಸ್ಥನಾಗಿದ್ದ. ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಸಾವಿಗೀಡಾಗಿದ್ದಾನೆ.