ಬೆಂಗಳೂರು, (www.thenewzmirror.com) ;
ರಾಜ್ಯ ರಾಜಧಾನಿ ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ರೀಲ್ಸ್ ನಲ್ಲಿ ಫೇಮಸ್ ಆಗಿದ್ದ ಯುವಕನಿಂದ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿರೋ ಆರೋಪ ಕೇಳಿಬಂದಿದ್ದು, ಆರೋಪಿಯನ್ನ ಡಿ.ಜೆ. ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಹೊಟ್ಟೆ ನೋವು ಎಂದು ನರಳಾಡುತ್ತಿದ್ದ ಮಗಳನ್ನು ಆಸ್ಪತ್ರೆಗೆ ಕರೆದು ಹೋದ ಪೋಷಕರಿಗೆ ಆಘಾತ ಎದುರಾಗಿತ್ತು. ಯಾಕೆಂದರೆ ಶಾಲೆಗೆ ಹೋಗುತ್ತಿದ್ದ ಮಗಳು 7 ತಿಂಗಳ ಗರ್ಭಿಣಿಯಾಗಿದ್ದಳು. ವೈದ್ಯರು ಹೇಳಿದ ಸುದ್ದಿ ಕೇಳಿ ತಂದೆ-ತಾಯಿ ಶಾಕ್ ಆಗಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಾ ಅಲ್ಪ-ಸ್ವಲ್ಪ ಫೇಮಸ್ ಆಗಿದ್ದ ಯುವಕ ವಿರುದ್ಧ ಇದೀಗ ಪೋಷಕರು ಅತ್ಯಾಚಾರ ಎಸಗಿದ್ದಾನೆ ಅಂತ ಆರೋಪಿಸಿದ್ದಾರೆ.
15 ವರ್ಷದ ತಮ್ಮ ಮಗಳನ್ನು ನಂಬಿಸಿ, ಮನವೊಲಿಸಿ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿದ್ದಲ್ಲದೆ ಈ ಬಗ್ಗೆ ಕೇಳಲು ಆರೋಪಿ ಮನೆಗೆ ಹೋದಾಗ ಬಾಲಕಿಯ ತಂದೆಗೆ ಬೆದರಿಕೆ ಹಾಕಿದ್ದನಂತೆ. ರೌಡಿಗಳ ಪರಿಚಯವಿದೆ, ನಿಮ್ಮ ಮಗಳನ್ನು ಬಿಡುವುದಿಲ್ಲ ಎಂದು ಹಲ್ಲೆ ನಡೆಸಿದ್ದನಂತೆ ಅಂತ ದೂರಿದ್ದಾರೆ.
ಈ ವಿಚಾರ ತಿಳಿಯುತ್ತಿದ್ದಂತೆ ಮನನೊಂದ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಪೋಷಕರು ಆಕೆಯನ್ನು ರಕ್ಷಿಸಿದ್ದಾರೆ. ಆರೋಪಿಯನ್ನ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರೆಸಿದ್ದಾರೆ.