ಬೆಂಗಳೂರು, (www.thenewzmirroe.com) ;
ರಾಜ್ಯ ಸರ್ಕಾರ ಹೊಸ ವರ್ಷಕ್ಕೆ ಬಸ್ ಪ್ರಯಾಣಿಕರಿಗೆ ಶಾಕ್ ನೀಡಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KSRTC)ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC) ಸೇರಿದಂತೆ ನಾಲ್ಕೂ ನಿಗಮಗಳ ಬಸ್ ಟಿಕೆಟ್ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಲು ಗುರುವಾರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ಶೇಕಡಾ 15 ರಷ್ಟು ಹೆಚ್ಚಿಸಲು ಅನುಮೋದನೆ ನೀಡಲಾಗಿದೆ. ಜನವರಿ 5ರಿಂದ ಪರಿಷ್ಕೃತ ಟಿಕೆಟ್ ದರ ಅನ್ವಯವಾಗಲಿದೆ.
ಬಿಎಂಟಿಸಿ, ಕೆಎಸ್ಆರ್ಟಿಸಿ, ಕೆಡಬ್ಲ್ಯುಕೆಆರ್ಟಿಸಿ ಮತ್ತು ಕೆಕೆಆರ್ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳು ಈ ಹಿಂದೆ ಶೇ. 40 ರಷ್ಟು ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದವು. ಡೀಸೆಲ್ ಬೆಲೆಯ ಏರಿಕೆಯನ್ನು ಗಮನಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
‘ಬಿಎಂಟಿಸಿ ಬಸ್ ದರಗಳನ್ನು 2014ರಲ್ಲಿ ಮತ್ತು ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯುಕೆಆರ್‌ಟಿಸಿಯ ದರಗಳನ್ನು 2020ರಲ್ಲಿ ಪರಿಷ್ಕರಿಸಲಾಯಿತು. ದರ ಪರಿಷ್ಕರಣೆ ನಂತರ ಡೀಸೆಲ್ ಮತ್ತು ಬಿಡಿಭಾಗಗಳ ಬೆಲೆಗಳು ಏರಿಕೆಯಾಗಿವೆ. ಜತೆಗೆ ಸಿಬ್ಬಂದಿ ವೇತನವೂ ಹೆಚ್ಚಿದೆ. ಈ ಎಲ್ಲ ಕಾರಣಗಳಿಂದ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮುನ್ಸೂಚನೆ ಕೊಟ್ಟಿದ್ದರು.
ಅಷ್ಟೇ ಅಲ್ದೆ ದಿನದಿಂದ ದಿನಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಆರ್ಥಿಕ ಸಂಕಷ್ಟ ಹೆಚ್ಚುತ್ತಿದೆ. ಬಿಎಂಟಿಸಿಯಲ್ಲಿ 10 ವರ್ಷಗಳ ಹಿಂದೆ (2014) ಹಾಗೂ ಕೆಎಸ್ಸಾರ್ಟಿಸಿ, ವಾಯುವ್ಯ ಸಾರಿಗೆ ನಿಗಮ ಮತ್ತು ಕೆಕೆಆರ್‌ಟಿಸಿಯಲ್ಲಿ 5 ವರ್ಷಗಳ ಹಿಂದೆ (2020) ಪ್ರಯಾಣ ದರ ಹೆಚ್ಚಳ ಮಾಡಲಾಗಿತ್ತು. ಅದರಂತೆ ಬಿಎಂಟಿಸಿ ಪ್ರಯಾಣ ದರ ಹೆಚ್ಚಳ ಮಾಡುವ ಸಂದರ್ಭದಲ್ಲಿ ಡೀಸೆಲ್ ಬೆಲೆ 54ರಿಂದ 55 ರು.ವರೆಗೆ ಇತ್ತು. ಅದೇ ರೀತಿ ಉಳಿದ ಮೂರು ನಿಗಮಗಳ ಪ್ರಯಾಣ ದರ ಹೆಚ್ಚಳ ಮಾಡುವಾಗ 70ರಿಂದ 75 ರು.ವರೆಗೆ ಇತ್ತು. ಅದೇ ಈಗ ಡೀಸೆಲ್ ದರ ₹89 ಗಳಾಗಿದೆ.
ಹೀಗಾಗಿ ನಿಗಮಗಳು ಇಂಧನದ ಮೇಲೆ ಮಾಡುತ್ತಿರುವ ವೆಚ್ಚದಲ್ಲಿ ಭಾರೀ ಏರಿಕೆಯಾಗಿದ್ದರೂ ಪ್ರಯಾಣ ದರದಲ್ಲಿ ಹೆಚ್ಚಳವಾಗಿಲ್ಲ. ಈ ಕಾರಣದಿಂದಾಗಿ ನಾಲ್ಕೂ ನಿಗಮಗಳು 6,244.29 ಕೋಟಿ ರು. ಹೊಣೆಗಾರಿಕೆ ಹೊಂದಿದ್ದು, 5 ವರ್ಷಗಳಲ್ಲಿ 5,209.35 ಕೋಟಿ ನಷ್ಟ ಅನುಭವಿಸಿವೆ. ಹೀಗಾಗಿ ಪ್ರಯಾಣ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿತ್ತು.
ಬಿಎಂಟಿಸಿ ಗೆ ಹತ್ತು ವರ್ಷಗಳ ಹಿಂದೆ ದರ ಪರಿಷ್ಕರಣೆ ಆಗಿತ್ತು. ಅಂದು ರೂ60.98 ಪೈಸೆ ಇತ್ತು. ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಅಂದಿನ ಡೀಸೆಲ್ ವೆಚ್ಚ 9 ಕೋಟಿ 16ಲಕ್ಷ ಇದ್ದ್ದು ಈಗ ಪ್ರಸ್ತುತ 13.21ಕೋಟಿ ಹೆಚ್ಚಳ ಆಗಿದೆ.
ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಂದ ಸಿಬ್ಬಂದಿ ವೆಚ್ಚ 12.85ಕೋಟಿ ಇದ್ದದ್ದು ಪ್ರಸ್ತುತ 18.36 ಕೋಟಿ ಆಗಿದೆ ಪ್ರತಿ ದಿನ 9.56ಕೋಟಿ ಹೆಚ್ಚುವರಿ ಹೊರೆ ಉಂಟಾಗಿದೆ. ಆ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಆಗಿದೆ.
ಎಲ್ಲಾ ಕಾರ್ಪೋರೇಷನ್ ಗಳು, ನಗರ ಬಸ್ಸುಗಳು, ಐಷಾರಾಮಿ ಬಸ್ಸುಗಳು ಸೇರಿದಂತೆ ಎಲ್ಲರಿಗೂ ಶೇ 15% ಪರಿಷ್ಕರಿಸಲಾಗಿದೆ. ಇದರಿಂದ ಪ್ರತಿ ತಿಂಗಳು 74.85 ಕೋಟಿಗಳಷ್ಟು ಆದಾಯ ಹೆಚ್ಚಾಗಲಿದೆ. ಶಕ್ತಿ ಯೋಜನೆಗಾಗಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ 5015 ಕೋಟಿಗಳನ್ನು ಮೀಸಲಿರಿಸಿದೆ. ಪ್ರತಿ ತಿಂಗಳು ನಾಲ್ಕೂ ನಿಗಮಗಳಿಗೆ 417.92 ಕೋಟಿ ಗಳ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುವುದಿಲ್ಲ ಎನ್ನುವುದು ಸರ್ಕಾರ ಸಮಜಾಯಿಷಿ.