ಬೆಂಗಳೂರು(www.thenewzmirror.com):ರಾಜಧಾನಿಯ ಯುವ ಪೀಳಿಗೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚಾಗುತ್ತಿರುವ ಮಾದಕ ವ್ಯಸನದ ಕಳವಳಕಾರಿ ವರದಿಗಳ ಬೆನ್ನಲ್ಲೇ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ನಗರದ ಎಲ್ಲಾ ಪಬ್ಗಳು, ಬ್ರೂವರೀಸ್, ಬಾರ್, ಕ್ಲಬ್ ಮತ್ತು ರೆಸ್ಟೋರೆಂಟ್ಗಳಲ್ಲಿ ಅಪ್ರಾಪ್ತ ವಯಸ್ಕರ ಪ್ರವೇಶ ಹಾಗೂ ಮದ್ಯಪಾನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲು ಸಚಿವ ಪ್ರಿಯಾಂಕ್ ಖರ್ಗೆ ಅವರು ಪೊಲೀಸ್ ಅಧಿಕಾರಿಗಳಿಗೆ ಗಂಭೀರ ನಿರ್ದೇಶನ ನೀಡಿದ್ದಾರೆ.
ಆತಂಕ ಹುಟ್ಟಿಸಿದೆ ಇತ್ತೀಚಿನ ವಿದ್ಯಾರ್ಥಿಗಳ ಸಮೀಕ್ಷೆ
ಬೆಂಗಳೂರಿನ ಸುಮಾರು 4,093 ವಿದ್ಯಾರ್ಥಿಗಳನ್ನು ಒಳಗೊಂಡ ಇತ್ತೀಚಿನ ಆಘಾತಕಾರಿ ಅಧ್ಯಯನವೊಂದನ್ನು ಉಲ್ಲೇಖಿಸಿರುವ ಸಚಿವರು, ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದನ್ನು ವಿವರಿಸಿದ್ದಾರೆ:
ಪ್ರತಿ ಮೂವರು ಹದಿಹರೆಯದವರಲ್ಲಿ ಒಬ್ಬರು ಮದ್ಯ ಅಥವಾ ತಂಬಾಕು ಸೇವನೆಯಿಂದಾಗಿ ಗಂಭೀರ ಆರೋಗ್ಯ ಸಮಸ್ಯೆಯ ಅಪಾಯ ಎದುರಿಸುತ್ತಿದ್ದಾರೆ.
ಸಮೀಕ್ಷೆಯಲ್ಲಿ ಭಾಗವಹಿಸಿದ ಒಟ್ಟು ವಿದ್ಯಾರ್ಥಿಗಳಲ್ಲಿ ಶೇ. 33 ರಷ್ಟು ಮಂದಿ ಮದ್ಯಪಾನಕ್ಕೆ ದಾಸರಾಗಿದ್ದಾರೆ.
ಸುಮಾರು ಶೇ. 18 ರಷ್ಟು ಯುವಕರು ತಂಬಾಕು ವ್ಯಸನಕ್ಕೆ ತುತ್ತಾಗಿದ್ದಾರೆ.
ಮದ್ಯಪಾನವನ್ನು ಆರಂಭಿಸುವ ಸರಾಸರಿ ವಯಸ್ಸು 17 ವರ್ಷಗಳಾಗಿದ್ದು, ಕೆಲವು ಕಡೆಗಳಲ್ಲಿ ಕೇವಲ 8 ವರ್ಷದ ಮಕ್ಕಳೂ ಮದ್ಯ ಸೇವಿಸಿರುವುದು ಆತಂಕ ಮೂಡಿಸಿದೆ.
“ಐಡಿ ಕಾರ್ಡ್ ಇಲ್ಲದಿದ್ದರೆ ಪ್ರವೇಶವಿಲ್ಲ” – ಕಟ್ಟುನಿಟ್ಟಿನ ರೂಲ್ಸ್!
ಇದು ಕೇವಲ ಉದ್ಯಮದ ಪರವಾನಗಿ ಸಮಸ್ಯೆಯಲ್ಲ, ಬದಲಿಗೆ ಮಕ್ಕಳ ಭವಿಷ್ಯ ಮತ್ತು ಸಾರ್ವಜನಿಕ ಆರೋಗ್ಯದ ವಿಚಾರ ಎಂದು ಸ್ಪಷ್ಟಪಡಿಸಿರುವ ಸರ್ಕಾರ, ಹೊಸ ಮಾರ್ಗಸೂಚಿಗಳನ್ನು ಪಾಲಿಸುವಂತೆ ತಾಕೀತು ಮಾಡಿದೆ:
ವಯಸ್ಸಿನ ಪುರಾವೆ ಕಡ್ಡಾಯ: ಗ್ರಾಹಕರಿಗೆ ಮದ್ಯ ಪೂರೈಸುವ ಮುನ್ನ ಸರ್ಕಾರ ನೀಡಿರುವ ಮಾನ್ಯವಾದ ವಯಸ್ಸಿನ ಗುರುತಿನ ಚೀಟಿಯನ್ನು ಪರಿಶೀಲಿಸುವುದು ಕಡ್ಡಾಯ.
ಮಾಲೀಕರೇ ಹೊಣೆ: ನಿಯಮ ಉಲ್ಲಂಘಿಸಿ ಅಪ್ರಾಪ್ತರಿಗೆ ಪ್ರವೇಶ ನೀಡಿದರೆ ಆಯಾ ಸಂಸ್ಥೆಗಳ ಮಾಲೀಕರು, ವ್ಯವಸ್ಥಾಪಕರು ಹಾಗೂ ಲೈಸೆನ್ಸ್ ಹೊಂದಿರುವವರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಸಿಸಿಟಿವಿ ಕಣ್ಗಾವಲು: ಎಲ್ಲಾ ಮದ್ಯದ ಅಂಗಡಿ ಹಾಗೂ ಪಬ್ಗಳ ಪ್ರವೇಶ ದ್ವಾರದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳು ಕಡ್ಡಾಯವಾಗಿ ಕಾರ್ಯನಿರ್ವಹಿಸಬೇಕು ಮತ್ತು ಅದರ ದೃಶ್ಯಾವಳಿಗಳನ್ನು ಸಂರಕ್ಷಿಸಿಡಬೇಕು.
ಪೊಲೀಸ್ ಸಮನ್ವಯ: ಈ ನಿಯಮಗಳನ್ನು ಜಾರಿಗೊಳಿಸಲು ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (RWA), ನಾಗರಿಕ ಗುಂಪುಗಳು ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸಲಿವೆ.
ವಾಣಿಜ್ಯ ಲಾಭಕ್ಕಾಗಿ ನಮ್ಮ ಮಕ್ಕಳ ಸುರಕ್ಷತೆ ಮತ್ತು ಅವರ ಭವಿಷ್ಯವನ್ನು ಬಲಿ ಕೊಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕರ್ನಾಟಕ ಸರ್ಕಾರವು ‘ಶೂನ್ಯ ಸಹಿಷ್ಣುತೆ’ (Zero Tolerance) ವಿಧಾನವನ್ನು ಅನುಸರಿಸಲಿದೆ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.







