ಸಾರಿಗೆ ಸಚಿವರಾಗಿ ಬೈರತಿ ಸುರೇಶ್ ಅಧಿಕಾರ ಸ್ವೀಕಾರ, ಉಚಿತ ಸ್ಮಾರ್ಟ್ ಕಾರ್ಡ್ ವಿತರಣೆಗೆ ಜಾಗತಿಕ ಟೆಂಡರ್!

RELATED POSTS

ಬೆಂಗಳೂರು(www.thenewzmirror.com):ರಾಜ್ಯ ಸಾರಿಗೆ ಇಲಾಖೆಯ ನೂತನ ಸಚಿವರಾಗಿ ಬೈರತಿ ಸುರೇಶ್ ಅವರು ಸೋಮವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಅಧಿಕೃತವಾಗಿ ಹೊಣೆಗಾರಿಕೆ ವಹಿಸಿಕೊಂಡಿದ್ದಾರೆ. ಅಧಿಕಾರ ಸ್ವೀಕರಿಸಿದ ತಕ್ಷಣವೇ ಸಾರಿಗೆ ಸಂಸ್ಥೆಯನ್ನು ಬಲಪಡಿಸಲು ಮುಂದಾದ ಸಚಿವರು, ಕೆಎಸ್ಸಾರ್ಟಿಸಿ ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳ ಹಿರಿಯ ಅಧಿಕಾರಿಗಳ ಮಹತ್ವದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಶಕ್ತಿ ಯೋಜನೆ’ಯು ರಾಜ್ಯದ ಕೋಟ್ಯಂತರ ಮಹಿಳೆಯರ ಬದುಕಿಗೆ ಆಸರೆಯಾಗಿದೆ ಎಂದರು. ಈ ಉಚಿತ ಪ್ರಯಾಣದ ಸೌಲಭ್ಯ ಜಾರಿಗೆ ಬಂದ ನಂತರ ಸರ್ಕಾರಿ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಶೇಕಡಾ 40 ರಷ್ಟು ಅಭೂತಪೂರ್ವ ಹೆಚ್ಚಳ ದಾಖಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಮೆಟ್ರೋ ಮಾದರಿ ‘ಸ್ಮಾರ್ಟ್ ಕಾರ್ಡ್’: ಯಾರಿಗೆ ಉಚಿತ? ಯಾರಿಗೆ ಪಾವತಿ?

ಉಚಿತ ಬಸ್ ಪ್ರಯಾಣದ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕ ಹಾಗೂ ಹೈಟೆಕ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದರ ಭಾಗವಾಗಿ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಬಳಸಬಹುದಾದ ಸ್ಮಾರ್ಟ್ ಕಾರ್ಡ್‌ಗಳನ್ನು ಶೀಘ್ರದಲ್ಲೇ ಪರಿಚಯಿಸಲಾಗುವುದು ಎಂದು ಸಚಿವರು ಪ್ರಕಟಿಸಿದರು:

ಮಹಿಳೆಯರಿಗೆ ಸಂಪೂರ್ಣ ಉಚಿತ: ರಾಜ್ಯದ ಸುಮಾರು 3 ಕೋಟಿಗೂ ಅಧಿಕ ಮಹಿಳಾ ಪ್ರಯಾಣಿಕರಿಗೆ ಈ ಹೈಟೆಕ್ ಸ್ಮಾರ್ಟ್ ಕಾರ್ಡ್‌ಗಳನ್ನು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ನೀಡಲಾಗುತ್ತದೆ.

ಪುರುಷರಿಗೂ ಲಭ್ಯ: ಪುರುಷ ಪ್ರಯಾಣಿಕರು ಮೆಟ್ರೋ ಸ್ಮಾರ್ಟ್ ಕಾರ್ಡ್‌ಗಳ ಮಾದರಿಯಲ್ಲಿ ನಿರ್ದಿಷ್ಟ ಹಣ ಪಾವತಿಸಿ ಈ ಕಾರ್ಡ್‌ಗಳನ್ನು ಖರೀದಿಸಬಹುದು. ಕಾರ್ಡ್‌ನಲ್ಲಿನ ಹಣ ಖಾಲಿಯಾದ ನಂತರ ರೀಚಾರ್ಜ್ ಮಾಡಿಕೊಂಡು ಪ್ರಯಾಣ ಮುಂದುವರಿಸಲು ಅವಕಾಶ ಕಲ್ಪಿಸಲಾಗುತ್ತದೆ.

ಗ್ಲೋಬಲ್ ಟೆಂಡರ್ ಹಾಗೂ ಪೈಲಟ್ ಪ್ರಾಜೆಕ್ಟ್ ಆರಂಭ

ರಾಜ್ಯಾದ್ಯಂತ 3 ಕೋಟಿಗಿಂತಲೂ ಅಧಿಕ ಸ್ಮಾರ್ಟ್ ಕಾರ್ಡ್‌ಗಳ ವಿತರಣೆ ಮಾಡಬೇಕಿರುವುದರಿಂದ, ಜಾಗತಿಕ ಮಟ್ಟದ ಮುಕ್ತ ಟೆಂಡರ್ (Global Tender) ಕರೆಯಲು ಅಧಿಕಾರಿಗಳಿಗೆ ಸಚಿವರು ಆದೇಶಿಸಿದ್ದಾರೆ. ಸಾರ್ವಜನಿಕರಿಗೆ ಯಾವುದೇ ಗೊಂದಲವಾಗದಂತೆ ತಡೆಯಲು ಆರಂಭಿಕ ಹಂತದಲ್ಲಿ ಪ್ರಾಯೋಗಿಕವಾಗಿ (Pilot Project) ಆಯ್ದ ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಿ, ನಂತರ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು ಎಂದು ಬೈರತಿ ಸುರೇಶ್ ಸ್ಪಷ್ಟಪಡಿಸಿದರು.

1000 ಬಸ್ ಖರೀದಿ

ರಾಜ್ಯ ಸರ್ಕಾರದ ಅನುದಾನದಡಿಯಲ್ಲಿ 1000 ಸಾವಿರ ಬಸ್ ಗಳನ್ನು ಖರೀದಿಸಲಾಗುತ್ತದೆ. ಇದೇ ವೇಳೆ, ಕೇಂದ್ರ ಸರ್ಕಾರದ ಅನುದಾನದಲ್ಲಿ 4 ಸಾವಿರ ಎಲೆಕ್ಟ್ರಿಕ್ ಬಸ್ ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ಹಂತಹಂತವಾಗಿ ಬಸ್ ಗಳನ್ನು ಖರೀದಿಸಿ ನಾಲ್ಕೂ ನಿಗಮಗಳಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ಬೈರತಿ ಸುರೇಶ್ ಹೇಳಿದರು.

ನಿರ್ಭಯಕ್ಕೆ ಹೆಚ್ಚು ಆದ್ಯತೆ

ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಸುರಕ್ಷತೆಗೆ ಆದ್ಯತೆಯನ್ನು ನೀಡಲಾಗುತ್ತಿದೆ. ಖಾಸಗಿ ಪ್ರಯಾಣಿಕರ ವಾಹನಗಳು ಅಂದರೆ, ವಾಣಿಜ್ಯ ಕಾರುಗಳು, ಟ್ಯಾಕ್ಸಿಗಳು ಸೇರಿದಂತೆ ಇನ್ನಿತರೆ ವಾಹನಗಳಿಗೆ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ಸಿಸ್ಟಂ ಅಳವಡಿಕೆಯನ್ನು ಕ್ಷಿಪ್ರಗತಿಯಲ್ಲಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದುವರೆಗೆ 1 ಲಕ್ಷಕ್ಕೂ ಅಧಿಕ ವಾಹನಗಳಿಗೆ ಈ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಇನ್ನುಳಿದ 4-5 ಲಕ್ಷ ವಾಹನಗಳಿಗೆ ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಅಳವಡಿಸಬೇಕೆಂದು ಅಧಿಕಾರಿಗಳಿಗೆ ಆದೇಶ ನೀಡಿದರು.

ಸಭೆಯಲ್ಲಿ ಸಾರಿಗೆ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್, ಆಯುಕ್ತ ಸೆಲ್ವಮಣಿ ಸೇರಿದಂತೆ ನಾಲ್ಕೂ ನಿಗಮಗಳ ಹಿರಿಯ ಅಧಿಕಾರಿಗಳು ಹಾಜರಿದ್ದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist