ಬೆಂಗಳೂರು(www.thenewzmirror.com): ರಾಜಧಾನಿಯ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಗುವಿನ ಸಾವಿನ ಪ್ರಕರಣದಲ್ಲಿ ತೀವ್ರ ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿತನ ಪ್ರದರ್ಶಿಸಿದ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಇಲಾಖೆಯಲ್ಲಿ ಇಂತಹ ಉದಾಸೀನತೆ ಮತ್ತು ಕಾನೂನು ಬಾಹಿರ ನಡೆಗಳನ್ನು ಸರ್ಕಾರ ಎಂದಿಗೂ ಸಹಿಸುವುದಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಈ ಅಮಾನತು ಆದೇಶದ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಅಧಿಕೃತ ಮಾಹಿತಿ ನೀಡಿದ ಅವರು,”ಕಳೆದ ಏಪ್ರಿಲ್ 4 ರಂದೇ ಮಗುವಿನ ಮರಣೋತ್ತರ ಪರೀಕ್ಷೆಯ ವರದಿ ಕೈಸೇರಿತ್ತು. ವರದಿಯಲ್ಲಿ ಅದು ಹತ್ಯೆ ಎಂದು ದೃಢಪಟ್ಟ ತಕ್ಷಣವೇ ಅಧಿಕಾರಿಗಳು ಅದನ್ನು ಅನುಮಾನಾಸ್ಪದ ಸಾವು ಎಂದು ಪರಿಗಣಿಸಿ ಎಫ್ಐಆರ್ (FIR) ದಾಖಲಿಸಿ ತನಿಖೆ ಆರಂಭಿಸಬೇಕಾಗಿತ್ತು. ಆದರೆ, ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಈ ಪ್ರಕರಣವನ್ನು ಕೇವಲ ಯುಡಿಆರ್ (ಅಸ್ವಾಭಾವಿಕ ಸಾವು ವರದಿ) ವ್ಯಾಪ್ತಿಯಲ್ಲೇ ಇಟ್ಟುಕೊಂಡು, ಅಧಿಕಾರಿಗಳು ತಮ್ಮ ಹಂತದಲ್ಲೇ ತೀವ್ರ ವಿಳಂಬ ಧೋರಣೆ ಅನುಸರಿಸಿದ್ದಾರೆ. ಇದು ಅತ್ಯಂತ ಗಂಭೀರ ಸ್ವರೂಪದ ಕರ್ತವ್ಯ ಲೋಪವಾಗಿದೆ” ಎಂದು ಸಚಿವರು ವಿವರಿಸಿದ್ದಾರೆ.
ಠಾಣಾ ಇನ್ಸ್ಪೆಕ್ಟರ್ ಸೇರಿ ಮೂವರು ಅಮಾನತು:
ಮಗುವಿನ ಸಾವಿನ ತನಿಖೆಯಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಕಾಡುಗೋಡಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಹಾಗೂ ರೈಟರ್ ಸೇರಿದಂತೆ ಒಟ್ಟು 3 ಮೂವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಇಬ್ಬರು ಆರೋಪಿಗಳ ಬಂಧನ:
ಈ ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಮೋಹನ್ ಮತ್ತು ಪ್ರಿಯಾಂಕ ಎಂಬುವವರನ್ನು ಈಗಾಗಲೇ ಪೊಲೀಸರು ದಸ್ತಗಿರಿ ಮಾಡಿದ್ದು, ವಿಚಾರಣೆ ಮುಂದುವರಿದಿದೆ. ಪ್ರಕರಣದ ಸಂಪೂರ್ಣ ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಇನ್ನಷ್ಟು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.







