ಬೆಂಗಳೂರು(www.thenewzmirror.com): ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರವು ಬಂಪರ್ ಕೊಡುಗೆ ನೀಡಿದೆ. 2026-27ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲು ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಜೂನ್ 12 ರಿಂದಲೇ ರಾಜ್ಯಾದ್ಯಂತ ಉಚಿತ ಬಸ್ ಪಾಸ್ಗಳ ವಿತರಣೆ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಲಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಒಳಗೊಂಡಂತೆ ನಾಲ್ಕೂ ಸಾರಿಗೆ ನಿಗಮಗಳ ಬಸ್ಗಳಲ್ಲಿ ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ನಿಯಮಗಳು ಮತ್ತು ಅರ್ಹತೆಗಳು:
ಸೇವಾಸಿಂಧು ಪೋರ್ಟಲ್: ವಿದ್ಯಾರ್ಥಿಗಳು ಉಚಿತ ಬಸ್ ಪಾಸ್ ಪಡೆಯಲು ಸರ್ಕಾರದ ಅಧಿಕೃತ ಸೇವಾಸಿಂಧು ಪೋರ್ಟಲ್ ಲಿಂಕ್ (https://sevasindhuservices.karnataka.gov.in/buspassservices/) ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ಹಳೇ ನಿಯಮಗಳೇ ಅನ್ವಯ: ವಿದ್ಯಾರ್ಥಿ ಬಸ್ ಪಾಸ್ ವಿತರಣೆಗೆ ಸಂಬಂಧಿಸಿದಂತೆ ಸದ್ಯ ಚಾಲ್ತಿಯಲ್ಲಿರುವ ಶೈಕ್ಷಣಿಕ ಅರ್ಹತೆ, ದೂರದ ಮಿತಿ ಹಾಗೂ ಪಾಸ್ನ ಕಾಲಾವಧಿಯ ನಿಯಮಾವಳಿಗಳೇ ಮುಂದುವರಿಯಲಿವೆ.
ಗಡಿಭಾಗದ ವಿದ್ಯಾರ್ಥಿಗಳಿಗೂ ಲಭ್ಯ: ಕರ್ನಾಟಕದಲ್ಲಿ ವಾಸವಿದ್ದು ನೆರೆ ರಾಜ್ಯಗಳಲ್ಲಿ ಕಲಿಯುತ್ತಿರುವ ಅಥವಾ ನೆರೆ ರಾಜ್ಯಗಳ ಗಡಿಭಾಗದಲ್ಲಿದ್ದು ಕರ್ನಾಟಕದ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳೂ ಕೂಡ ಈ ಉಚಿತ ಪಾಸ್ ಸೌಲಭ್ಯವನ್ನು ಪಡೆಯಲು ಅರ್ಹರಾಗಿದ್ದಾರೆ.
ಮಾಹಿತಿ ಕೌಂಟರ್ಗಳು: ಕೆಎಸ್ಆರ್ಟಿಸಿ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಟ್ಟು 123 ಪಾಸ್ ವಿತರಣಾ ಕೌಂಟರ್ಗಳನ್ನು ತೆರೆಯಲಾಗಿದ್ದು, ಇದರ ಸಂಪೂರ್ಣ ವಿವರಗಳನ್ನು ನಿಗಮದ ವೆಬ್ಸೈಟ್ (https://ksrtc.karnataka.gov.in/student pass) ಮೂಲಕ ಪಡೆಯಬಹುದು.
ಈಗಾಗಲೇ ಹಣ ಪಾವತಿಸಿದವರಿಗೆ ಪೂರ್ಣ ರೀಫಂಡ್!
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಈಗಾಗಲೇ ಹಣ ಪಾವತಿಸಿ ಬಸ್ ಪಾಸ್ ಪಡೆದುಕೊಂಡಿರುವ ವಿದ್ಯಾರ್ಥಿಗಳಿಗೆ ಸಾರಿಗೆ ನಿಗಮವು ಸಿಹಿ ಸುದ್ದಿ ನೀಡಿದೆ. ವಿದ್ಯಾರ್ಥಿಗಳು ಪಾವತಿಸಿರುವ ಸಂಪೂರ್ಣ ಮೊತ್ತವನ್ನು ಮುಂದಿನ 15 ದಿನಗಳ ಒಳಗಾಗಿ ಮರುಪಾವತಿ (Refund) ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಮರುಪಾವತಿ ಪ್ರಕ್ರಿಯೆಯ ಕುರಿತು ಸಾರಿಗೆ ನಿಗಮವು ಶೀಘ್ರದಲ್ಲೇ ಪ್ರತ್ಯೇಕವಾದ ಪ್ರಕಟಣೆಯನ್ನು ಹೊರಡಿಸಲಿದೆ.







