ಮುಂಬೈ, (www.thenewzmirror.com) :
ಬಾಲಿವುಡ್ ಬಿಗ್ ಬಿ ನಟ ಅಮಿತಾಭ್ ಬಚ್ಚನ್ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವು ವರ್ಷಗಳಿಂದ ಅವರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. 81 ವರ್ಷ ವಯಸ್ಸಿನ ಅಮಿತಾಬ್ ಆಸ್ಪತ್ರೆಗೆ ದಾಖಲಾಗಿರುವುದು ಅಭಿಮಾನಿಗಳಿಗೆ ಆತಂಕ ಆಗಿದೆ. ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದ್ದು, ಬಿಗ್ ಬಿ ಅವರಿಗೆ ಯಾವುದೇ ಗಂಭೀರ ಸಮಸ್ಯೆ ಎದುರಾಗಿಲ್ಲ ಎಂದು ಹೇಳಲಾಗುತ್ತಿದೆ.
ಅಮಿತಾಭ್ ಬಚ್ಚನ್ ಅವರು ಆಸ್ಪತ್ರೆಗೆ ದಾಖಲಾದ ವಿಷಯ ಹೊರಬೀಳುವುದಕ್ಕೂ ಒಂದು ಗಂಟೆ ಮೊದಲು ಅವರ ಮಾಡಿದ ಎಕ್ಸ್ (ಟ್ವಿಟರ್) ಪೋಸ್ಟ್ ಗಮನ ಸೆಳೆದಿತ್ತು. ‘ಎಂದೆಂದಿಗೂ ಚಿರಋಣಿ’ ಎಂದು ಅಮಿತಾಭ್ ಬಚ್ಚನ್ ಬರೆದುಕೊಂಡಿದ್ದಾರೆ. ಸರ್ಜರಿ ಆದ ಬಳಿಕ ಅವರು ಈ ರೀತಿ ಪೋಸ್ಟ್ ಮಾಡಿರಬಹುದು ಎನ್ನಲಾಗಿದೆ. ಬೇಗ ಗುಣಮುಖರಾಗಿ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
T 4950 – in gratitude ever ..
— Amitabh Bachchan (@SrBachchan) March 15, 2024
ಕಾಲಿನ ರಕ್ತನಾಳದ ಸಮಸ್ಯೆ ಇರುವುದರಿಂದ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಒಟ್ಟಿನಲ್ಲಿ ಅವರ ಆರೋಗ್ಯದ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ಆಸ್ಪತ್ರೆ ಅಥವಾ ಕುಟುಂಬದವರು ಹೆಲ್ತ್ ಅಪ್ಡೇಟ್ ನೀಡಲಿ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದಾರೆ.