ಬೆಂಗಳೂರು, (www.thenewzmirror.co.) :
ಬೆಂಗಳೂರು ವಿಶ್ವವಿದ್ಯಾಲಯ ಸೈನ್ಸ್ ಫೋರಂ ವತಿಯಿಂದ ಅಂತರಾಷ್ಟ್ರೀಯ ವಿಜ್ಞಾನ ಸಮ್ಮೇಳನವನ್ನು ಉದ್ಘಾಟಿಸಲಾಯಿತು. ಜ್ಞಾನಭಾರತಿ ಆವರಣದ ಹೆಚ್ ಎನ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹವಾಮಾನ ಬದಲಾವಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ಅಭಿವೃದ್ಧಿ ಕುರಿತು ವಿಚಾರಗೋಷ್ಠಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ NRSC ಅಧ್ಯಕ್ಷ ಡಾ.ಪ್ರಕಾಶ್ ಚೌಹಾನ್,ಪುಣೆ ವಿವಿ ಪ್ರಾಧ್ಯಾಪಕ ಡಾ.ರವೀಂದ್ರ ಜಿ ಜಯಬಯೆ,CEPT ವಿವಿ ಪ್ರಾಧ್ಯಾಪಕಿ ಡಾ.ಅಂಜನಾ ವ್ಯಾಸ್‌ರವರಿಗೆ “ಯುಜಿಐಟಿ ಎಕ್ಸ್‌ಲೆನ್ಸಿ ಅವಾರ್ಡ್” ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕುಲಪತಿ ಡಾ.ಜಯಕರ ಎಸ್ ಎಂ,ಕುಲಸಚಿವ ಶೇಕ್ ಲತೀಫ್,ಡೀನ್ ಅಶೋಕ್ ಡಿ ಹಂಜಗಿ ಸೇರಿದಂತೆ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.



ಇನ್ನೂ ಎರಡು ದಿನಗಳ ವಿಜ್ಞಾನ ಸಮ್ಮೇಳನದಲ್ಲಿ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಿಭಾಗದ ವಿವಿಧ ಮಾಡೆಲ್‌ಗಳ ಪ್ರದರ್ಶನ,ರಸಪ್ರಶ್ನೆ ಸ್ಪರ್ಧೆ,ಪ್ರಬಂಧ ಸ್ಪರ್ಧೆ, ಪೋಸ್ಟರ್ ಪ್ರೆಸೆಂಟೆಷನ್ ಸ್ಪರ್ಧೆ ಏರ್ಪಡಿಸಲಾಗಿದೆ. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು 1500 ಕ್ಕೂ ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದಾರೆ.
ಸಮ್ಮೇಳನದಲ್ಲಿ 6 ಕ್ಕೂ ಹೆಚ್ಚು ದೇಶಗಳ,14 ಕ್ಕೂ ಹೆಚ್ಚು ರಾಜ್ಯಗಳ,ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು,ವಿಷಯ ತಜ್ಞರು, ಆಹ್ವಾನಿತರು ಭಾಗಿಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ವಿಜ್ಞಾನ ನಿಖಾಯದ ಡೀನ್ ಅಶೋಕ್ ಡಿ ಹಂಜಗಿ ಮಾತನಾಡಿ “ವಿಜ್ಞಾನ ದಿನಾಚರಣೆ ಅಂಗವಾಗಿ ವಿಜ್ಞಾನ ಸಮ್ಮೇಳನವನ್ನು ಆಯೋಜಿಸಲಾಗಿದೆ.ವಿಶ್ವವಿದ್ಯಾಲಯದ 20 ಕ್ಕೂ ಹೆಚ್ಚು ವಿಭಾಗಗಳು ಒಗ್ಗೂಡಿ ವಿಜ್ಞಾನ ಸಮ್ಮೇಳನ ನಡೆಸಲಾಗುತ್ತಿದೆ.ಸೈನ್ಸ್ ಮಾಡೆಲ್ ಪ್ರದರ್ಶನ (exhibition) ಸೇರಿದಂತೆ ವಿವಿಧ ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳಿಗೆ ವಿಜ್ಞಾನದ ಪರಿಚಯ ಮಾಡಿಸಲಾಗುತ್ತಿದೆ.ಪ್ರಾಯೋಗಿಕವಾಗಿ ವಿದ್ಯಾರ್ಥಿಗಳು ಮತ್ತಷ್ಟು ಅಧ್ಯಯನ ನಡೆಸಲು ಈ ಸಮ್ಮೇಳನ ಅನುಕೂಲವಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನು ಕುಲಪತಿ ಡಾ.ಜಯಕರ ಎಸ್ ಎಂ ಮಾತನಾಡಿ “ಹವಾಮಾನ ವೈಪರೀತ್ಯಕ್ಕೆ ಪರೋಕ್ಷವಾಗಿ ನಾವೇ ಕಾರಣ,ಅಭಿವೃದ್ಧಿ ಹೆಸರಲ್ಲಿ ಪ್ರಕೃತಿ ನಾಶವಾಗುತ್ತಿದ್ದು,ಹವಾಮಾನ ಬದಲಾವಣೆಗೆ ಕಾರಣವಾಗಿದೆ.ವಿಶ್ವದಲ್ಲಿ 400 ಮಿಲಿಯನ್ ಟನ್ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ ಇದರಿಂದ ಸಾಕಷ್ಟು ಪರಿಣಾಮ ಬೀರುತ್ತಿದೆ.
ವಿಶ್ವವಿದ್ಯಾಲಯ ಆವರಣದಲ್ಲಿ ಕೂಡ ಪ್ಲಾಸ್ಟಿಕ್ ಕಸದ ಸಮಸ್ಯೆ ಇದೆ. ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳು ಅದನ್ನು ನಿರ್ಮೂಲನೆ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ, ನಮ್ಮ ಪರಿಸರ ನಾವೇ ಕಾಪಾಡಿಕೊಂಡು ಹವಾಮಾನ ಬದಲಾವಣೆ ತಡೆಯಬೇಕು ಎಂದು ” ಅಭಿಪ್ರಾಯ ವ್ಯಕ್ತಪಡಿಸಿದರು.