ಬೆಂಗಳೂರು, (www.thenewzmirror.com) :
ಈ ಬಾರಿ ಲೋಕಸಭೆ ಚುನಾವಣೆಗೆ ರಾಜ್ಯದಿಂದ ಖಟ್ಟಾ ಹಿಂದುತ್ವವಾದಿ ಲೋಕಸಮರದಲ್ಲಿ ಅಖಾಡಕ್ಕೆ ಇಳಿಯಲಿದ್ದಾರೆ. ಈಗಾಗಲೇ ಬಿಜೆಪಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಣೆ ಮಾಡಿದೆ. ಉಳಿದಂತೆ ಮೂರು ಕ್ಷೇತ್ರಗಳನ್ನ ಜೆಡಿಎಸ್ ಗೆ ಬಿಟ್ಟುಕೊಡಲಿದೆ. ಇನ್ನೈದು ಕ್ಷೇತ್ರಗಳಿಗೆ ಹುರಿಯಾಳುಗಳನ್ನ ಹುಡುಕುತ್ತಿದ್ದ ಈ ಐದರ ಪೈಕಿ ಓರ್ವ ಹಿಂದುತ್ವವಾದಿಗೆ ಟಿಕೆಟ್ ನೀಡಲು ಬಿಜೆಪಿ ಹೈಕಮಾಂಡ್ ತೀರ್ಮಾನ ಮಾಡಿದೆಯಂತೆ. ಇಂದು ಬಿಜೆಪಿ ತನ್ನ ಮೂರನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ.
ಬಿಜೆಪಿ ಉಳಿದ ಕ್ಷೇತ್ರಗಳಿಗೆ ಯಾವ ಅಭ್ಯರ್ಥಿಗಳನ್ನ ಕಣಕ್ಕಿಳಿಸುತ್ತೆ ಅನ್ನೋ ಕುತೂಹಲದ ನಡುವೆನೇ ಚಕ್ರವರ್ತಿ ಸೂಲಿಬೆಲೆ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಟಿಕೆಟ್ ಸಿಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಕ್ರವರ್ತಿ ಸೂಲಿಬೆಲೆ, ಚುನಾವಣೆ ಸ್ಪರ್ಧೆಗೆ ಅವಕಾಶ ಸಿಕ್ಕರೆ ವಿರೋಧ ಇಲ್ಲ ಎಂದಿದ್ದಾರೆ.
ಪುತ್ತೂರಿನಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಈ ಬಗ್ಗೆ ಮಾತನಾಡಿ, ಚುನಾವಣೆ ಟಿಕೆಟ್ ಕೇಳಿಕೊಂಡು ಹೋಗುವುದಿಲ್ಲ, ಒಂದು ವೇಳೆ ಅಂಥ ಅವಕಾಶ ಬಂದರೆ ಸ್ಪರ್ಧಿಸಲು ವಿರೋಧ ಇಲ್ಲ. ಲೋಕಸಭಾ ಚುನಾವಣೆಗೆ ನಾನು ಸ್ಪರ್ಧಿಸುವ ವಿಚಾರ ಸದ್ಯ ವದಂತಿಯಷ್ಟೆ ಎಂದಿದ್ದಾರೆ.
2014, 2019ರಲ್ಲೂ ಇಂತಹ ವದಂತಿ ಹರಡಿತ್ತು. ಈಗ 2024ರಲ್ಲೂ ಅಂಥದ್ದೊಂದು ವದಂತಿ ಹರಡಿದೆ. ರಾಜಕೀಯ ಆಸಕ್ತಿಯ ಪ್ರಶ್ನೆ ಬೇರೆ, ಅದಕ್ಕೆ ನನ್ನ ವಿರೋಧವಿಲ್ಲ. ಹತ್ತು ವರ್ಷಗಳಿಂದ ಕಾಪಾಡಿಕೊಂಡು ಬಂದಿರೋದನ್ನ ಸ್ವಲ್ಪ ಸಡಿಲ ಮಾಡ್ತೀನಿ. ಏನಾದ್ರೂ ಭಗವಂತನ ಇಚ್ಛೆ ಇದ್ದರೆ ಅದು ಆಗೇ ಆಗುತ್ತೆ. ಆದರೆ ಇದುವರೆಗೆ ನನ್ನನ್ನ ಯಾರೂ ಸಂಪರ್ಕಿಸಿಲ್ಲ. ನಾನೂ ಯಾರನ್ನೂ ಸಂಪರ್ಕಿಸಿಲ್ಲ ಎಂದಿದ್ದಾರೆ.