ಬೆಂಗಳೂರು,(www.thenewzmirror.com) :
ಸಕ್ಕರೆ ಕಾರ್ಖಾನೆ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್‌ಗೆ 439 ಕೋಟಿ ರೂ.ಗಳ ಸಾಲ ಪಾವತಿಸದೇ ವಂಚಿಸಿರುವ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿಗೆ ರಾಜ್ಯ ಹೈಕೋರ್ಟ್ ಬಿಗ್ ರಿಲೀಫ್ ಕೊಟ್ಟಿದೆ. ಮುಂದಿನ ವಿಚಾರಣೆವರೆಗೂ ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಮೇಶ್ ಜಾರಕಿಹೊಳಿ ಮತ್ತಿತರರು ವಿರುದ್ಧ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್‌ಗೆ 439 ಕೋಟಿ ರೂ.ಗಳ ಸಾಲ ಪಾವತಿಸದೇ ವಂಚಿಸಿರುವ ಆರೋಪಕ್ಕೆ ಗುರಿಯಾಗಿದ್ದರು. ಇವರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಪ್ರಶ್ನಿಸಿ ಹೈಕೊರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಏಕಸದಸ್ಯಪೀಠ ವಿಚಾರಣೆ ನಡೆಸಿತು.
ಈ ವೇಳೆ ರಮೇಶ್ ಜಾರಕಿಹೊಳಿ ಪರ ವಕೀಲರು, ಫೆ. 26ರಂದು ಅರ್ಜಿದಾರರ ಮಗನ ಮದುವೆ ನಿಶ್ಚಯವಾಗಿದೆ. ಈ ಸಂದರ್ಭದಲ್ಲಿ ತನಿಖಾಧಿಕಾರಿಗಳು ಬಂಧಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ರಕ್ಷಣೆ ನೀಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ, ಹಿಂದೂ ಧರ್ಮದ ಸಂಪ್ರದಾಯಗಳ ಪ್ರಕಾರ ಮಗನ ಮದುವೆಯಲ್ಲಿ ತಂದೆ ಹಾಜರಿ ಮುಖ್ಯ. ಆದ ಕಾರಣಮುಂದಿನ ವಿಚಾರಣೆವರೆಗೂ ಪ್ರಕರಣದ ಮೊದಲ ಅರ್ಜಿದಾರರ (ರಮೇಶ್ ಜಾರಕಿಹೊಳಿ) ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂದು ತನಿಖಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಪ್ರಕರಣದ ಇತರೆ ಅರ್ಜಿದಾರರ ವಿರುದ್ಧ ತನಿಖೆ ನಡೆಸುವುದಕ್ಕೆ ಯಾವುದೇ ಅಡ್ಡಿಯಿಲ್ಲ ಹಾಗೂ ಅಪೆಕ್ಸ್ ಬ್ಯಾಂಕ್‌ನಿಂದ ಪಡೆದಿರುವ ಸಾಲ ಮತ್ತು ಅದರ ಕುರಿತು ಮರು ಪಾವತಿ ಮಾಡಿರುವುದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವಿವರಣೆಯನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸುವಂತೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ.