ಬೆಂಗಳೂರು,(www.thenewzmirror.com);
ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಫಿನಾಲೆಗೆ ಹತ್ತಿರವಾಗುತ್ತಿದೆ. ಬಿಗ್ ಬಾಸ್ ಟ್ರೋಫಿಗಾಗಿ ಬಿಗ್ ಬಾಸ್ ಮನೆಯಲ್ಲಿರೋ ಸ್ಪರ್ಧಾಳುಗಳು ಶಕ್ತಿ ಮೀರಿ ಆಟವಾಡ್ತಾ ಫಿನಾಲೆ ವಾರಕ್ಕೆ ಹೋಗೋ ಸಿದ್ಧತೆಯಲ್ಲಿದ್ದಾರೆ. ಇದೆಲ್ಲದರ ನಡುವೆ ಇದೀಗ ಕನ್ನಡ ಬಿಗ್ ಸಾಬ್ ಗೆ ಸಂಕಷ್ಟ ಶುರುವಾಗಿದೆ. ಫಿನಾಲೆಗೆ ಕೆಲ ದಿನಗಳು ಮಾತ್ರ ಬಾಕಿ ಇದ್ದು, ರೋಚಕ ಘಟ್ಟದಲ್ಲಿ ಸಾಗುತ್ತಿರುವ ನಡುವೆನೇ ಇದೀಗ ಹೊಸ ಸಮಸ್ಯೆ ಎದುರಾಗಿದೆ.
ಬೆಂಗಳೂರು ದಕ್ಷಿಣ ತಾಲೂಕಿನ ಮಾಳಿಗೊಂಡನಹಳ್ಳಿ ಗ್ರಾಮದಲ್ಲಿ ಬಿಗ್‌ಬಾಸ್ ಕಾರ್ಯಕ್ರಮವನ್ನು ಕಾನೂನು ಬಾಹಿರವಾಗಿ ನಡೆಸಲಾಗುತ್ತಿದೆ. ಕನ್ನಡದ ಬಿಗ್ ಬಾಸ್ 11 ಕಾರ್ಯಕ್ರಮಕ್ಕಾಗಿ ಬೆಂಗಳೂರು ಹೊರವಲಯದ ಮಾಳಿಗೊಂಡನಹಳ್ಳಿ ಸರ್ವೇ ನಂ 128/1ರಲ್ಲಿ ಬೃಹತ್ ಸೆಟ್ ಹಾಕಲಾಗಿದೆ. ಈ ಸ್ಥಳದಲ್ಲಿ ರಿಯಾಲಿಟಿ ಶೋ ನಡೆಯಲು ಕಾರ್ಮಿಕ ಇಲಾಖೆ, ಪರಿಸರ ಮಾಲಿನ್ಯ ಮಂಡಳಿ, ಸ್ಥಳೀಯ ಗ್ರಾಮ ಪಂಚಾಯ್ತಿಯಿಂದ ಅನುಮತಿ ಪಡೆಯದೇ ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂದು ರಾಘವೇಂದ್ರ ಆಚಾರ್ ಎಂಬುವವರು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ರಾಘವೇಂದ್ರ ಆಚಾರ ಕೊಟ್ಟ ದೂರಿನ ಮೇರೆಗೆ ಬಿಗ್‌ಬಾಸ್ ನಡೆಯುತ್ತಿರುವ ಮಾಳಿಗೊಂಡನಹಳ್ಳಿ ಸರ್ವೆ ನಂ.128/1ರ ವಾಣಿಜ್ಯ, ವ್ಯಾಪಾರ ವಸತಿಯೇತರ ವ್ಯವಹಾರದ ಲೈಸೆನ್ಸ್ ರದ್ದು ಮಾಡಿ, ಶೋ ಸ್ಥಗಿತಗೊಳಿಸಿ ಕ್ರಮಕೈಗೊಳ್ಳುವಂತೆ ಬೆಂಗಳೂರು ನಗರ ಜಿಪಂ ಸಿಇಒ ಲತಾ ಕುಮಾರಿ ಸೂಚನೆ ನೀಡಿದ್ದರು. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಜಿಲ್ಲಾಪಂಚಾಯತ್ ಸಿಇಓ ಲೈಸನ್ಸ್ ರದ್ದು ಮಾಡಿ ಆದೇಶ ಹೊರಡಿಸಿದ್ದು. ರಾಮೋಹಳ್ಳಿ ಗ್ರಾಮಪಂಚಾಯಿತ್ ಗೆ ಕೊಟ್ಟಿರೋ ನೊಟೀಸ್ ನಲ್ಲಿ ರಾಮೋಹಳ್ಳಿ ಗ್ರಾಮ ಪಂಚಾಯಿತಿಯವರು ಬಿಗ್‌ಬಾಸ್ ಶೋ ನಡೆಸಲು ಅನುಮತಿ ನೀಡಿಲ್ಲ ಎಂಬುದಾಗಿ ತಿಳಿಸಿರುವ ಕಾರಣ ಕೂಡಲೇ ಪರಿಶೀಲಿಸಿ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಿ ಅಂತ ಲತಾ ಕುಮಾರಿ ಸೂಚಿಸಿದ್ದರು. ಅದರಂತೆ ರಾಮೋಹಳ್ಳಿ ಪಿಡಿಒ, ಜಮೀನಿನ ಮಾಲೀಕ ಪಡೆದಿದ್ದ ವಾಣಿಜ್ಯ, ವ್ಯಾಪಾರ ವಸತಿಯೇತರ ವ್ಯವಹಾರದ ಲೈಸೆನ್ಸ್ ಅನ್ನು ರದ್ದು ಮಾಡಿ, ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಕಾರ್ಯಕ್ರಮವನ್ನ ನಿಲ್ಲಿಸುವಂತೆ ಆದೇಶಿಸಿದ್ದರು.
ಅಯ್ಯೋ ಇನ್ನೇನು ಶೋ ರದ್ದು ಆಗೇ ಬಿಡುತ್ತೆ ಅಂದುಕೊಳ್ತಿರುವಾಗ್ಲೇ ಬಿಗ್ ಬಾಸ್ ಆಯೋಜಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಬಿಗ್ ಬಾಸ್ ಸೀಸನ್ 11 ಶೋ ರದ್ದುಗೊಳಿಸುವ ಆದೇಶದ ಹಿನ್ನೆಲೆಯಲ್ಲಿ ಬಿಗ್ ಬಾಸ್ ಮ್ಯಾನೇಜ್‌ಮೆಂಟ್ ಕೋರ್ಟ್ ಮೆಟ್ಟಿಲೇರಿತ್ತು. ಅದರಂತೆ ಕೋರ್ಟ್ ಲೈಸನ್ಸ್ ರದ್ದು ಮಾಡಲು ಆದೇಶಿಸಿದ್ದ ಪ್ರತಿಗೆ ತಡೆಯಾಜ್ಞೆ ನೀಡಿದ್ದು, ಅದರ ಪ್ರತಿಯನ್ನ ಬಿಗ್ ಬಾಸ್ ಆಯೋಜಕರು ಕುಂಬಳಗೋಡು ಪೊಲೀಸರಿಗೆ ನೀಡಿದ್ದಾರೆ. ಅದರಂತೆ ಪೊಲೀಸರು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ತಲುಪಿಸಿದ್ದಾರೆ ಎಂದು ತಿಳಿದುಬಂದಿದೆ.