ಬೆಂಗಳೂರು, (www.thenewzmirror.com) ;
ಭಗವಾನ್ ಬುದ್ದರ ಜಯಂತಿ ಹಿನ್ನೆಲೆ ಬೆಂಗಳೂರು ವಿಶ್ವವಿದ್ಯಾಲಯದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಕೇಂದ್ರ ಗ್ರಂಥಾಲಯ ಏರ್ಪಡಿಸಿದ್ದ ಬುದ್ದರ ಕುರಿತಾದ ಪುಸ್ತಕ ಪ್ರದರ್ಶನ ಆಯೋಜಿಸಲಾಗಿದೆ. ಪುಸ್ತಕ ಪ್ರದರ್ಶನವನ್ನ ಕುಲಪತಿ ಡಾ.ಜಯಕರ ಎಸ್ ಎಂ ಉದ್ಘಾಟಿಸಿದರು. ಮೇ 23 ರಿಂದ ಮೇ 31 ರವರೆಗೂ ಪುಸ್ತಕ ಪ್ರದರ್ಶನವಿದ್ದು ವಿದ್ಯಾರ್ಥಿಗಳು, ಪುಸ್ತಕ ಆಸಕ್ತರು ಬುದ್ದರ ಕುರಿತಾದ ಪುಸ್ತಕ, ಆಕಾರಗ್ರಂಥ, ಸಂಶೋಧನಾ ಕೃತಿಗಳು, ವಿಮರ್ಶಾ ಕೃತಿಗಳನ್ನು ಅಧ್ಯಯನ ನಡೆಸಬಹುದು.
ಪ್ರದರ್ಶನದಲ್ಲಿ 300 ಕ್ಕೂ ಹೆಚ್ಚು ಪುಸ್ತಕಗಳು ಪ್ರದರ್ಶನಕ್ಕಿದ್ದು ಅಪರೂಪ,ವಿಶೇಷವಾದ ಕೃತಿಗಳು ಲಭ್ಯವಿದೆ. ಈ ವೇಳೆ ಮಾತನಾಡಿದ ಗ್ರಂಥಪಾಲಕ ಪ್ರೊ.ಎಂ.ರಘುನಂದನ್, ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ಸಲುವಾಗಿ, ಸಾಹಿತ್ಯಿಕ, ಐತಿಹಾಸಿಕ ಮತ್ತು ವೈಜ್ಞಾನಿಕ ದೃಷ್ಟಿಕೋನಗಳನ್ನು ತರುವ ಸಲುವಾಗಿ ದೇಶದ ದಾರ್ಶನಿಕರ, ಕವಿಗಳ, ಬರಹಗಾರ ಹಾಗೂ ಸಮಾಜ ಸುಧಾರಕರ ಜಯಂತಿಯಂದು ಪುಸ್ತಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದರು.
ಮಾನವ ಕುಲಕ್ಕೆ ಬೆಳಕು ತಂದ ಭಗವಾನ್ ಬುದ್ದರ ಚಿಂತನೆ, ತತ್ವ, ಸಿದ್ದಾಂತ, ಅನುಯಾಯಿಗಳ ಕುರಿತಾದ ಪುಸ್ತಕಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಈ ಪುಸ್ತಕ ಪ್ರದರ್ಶನದಲ್ಲಿ ಅಂತರಾಷ್ಟ್ರೀಯ ಪುಸ್ತಕಗಳನ್ನು ಮತ್ತು ಎಲ್ಲೂ ಲಭ್ಯವಿಲ್ಲದ ಅಪರೂಪದ ಸಂಶೋಧನಾ ಕೃತಿಗಳನ್ನು ಕಾಣಬಹುದಾಗಿದೆ. ‘ಬುದ್ದಘೋಷ ಪ್ಯಾರಬಲ್ಸ್, ಬುದ್ದಿಸ್ಟ್ ಇಂಡಿಯಾ, ಬುದ್ದಿಸ್ಟ್ ಸಿವಿಲೈಜೆಷನ್, ಬುದ್ದಿಸ್ಟ್ ಇನ್ ಇಂಡಿಯಾ’ ಇಂತಹ ಅಪರೂಪದ ನೂರಾರು ಪುಸ್ತಕಗಳು ಪ್ರದರ್ಶನದಲ್ಲಿದ್ದು ವಿದ್ಯಾರ್ಥಿಗಳು, ಅಧ್ಯಾಪಕರು, ಬರಹಗಾರರು, ಸಂಶೋಧಕರು ಅಧ್ಯಯನ ನಡೆಸಬಹುದಾಗಿದೆ.
ಬುದ್ದ ಈ ದೇಶದ ಜ್ಞಾನದ ಮೇರುಬಿಂದು. ಸರ್ವವನ್ನೂ ತ್ಯಜಿಸಿ ಜ್ಞಾನದೆಡೆಗೆ ಹೆಜ್ಜೆ ಹಾಕಿದ ಬುದ್ದ ಈ ದೇಶಕ್ಕೆ ಸದಾ ಸ್ಪೂರ್ತಿ.ಹೊಸ ಚಿಂತನೆ, ತತ್ವ,ನೀತಿಗಳ ಮೂಲಕ ಮಹಾಸುಧಾರಕನಾಗಿ, ಧರ್ಮಪ್ರವರ್ತಕನಾಗಿ ಇಡೀ ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದವರು ಬುದ್ದ ಎಂದು ಕುಲಪತಿ ಡಾ.ಜಯಕರ ಎಸ್ ಎಂ ಅಭಿಪ್ರಾಯಪಟ್ಟರು. ಅಷ್ಟೇ ಅಲ್ದೆ ಭಾರತದಿಂದ ಶುರುವಾಗಿ ಏಷ್ಯಾ ಖಂಡದಲ್ಲೇ ಜ್ಞಾನದ ಸಂದೇಶ ಸಾರಿ ಹೊಸ ಆಂದೋಲನ ಸೃಷ್ಟಿಸಿದವರು ಬುದ್ದ. ಇಂತಹ ಬುದ್ದರ ಕುರಿತು ವಿದ್ಯಾರ್ಥಿಗಳು ಅಧ್ಯಯನ ನಡೆಸಬೇಕು. ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಸಮಾಜಕ್ಕಾಗಿ ದುಡಿಯಬೇಕು. ಈ ಪುಸ್ತಕ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ಮತ್ತಷ್ಟ ಬುದ್ದರ ಪ್ರಭಾವ ಹೆಚ್ಚಾಗಲಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.