ಬೆಂಗಳೂರು, (www.thenewzmirror.com);
ಚುನಾವಣಾ ಸಮಯದಲ್ಲಿ ರಾಜ್ಯ ಸರ್ಕಾರ ಸರ್ಕಾರಿ ನೌಕರರನ್ನ ದುರ್ಬಳಕೆ ಮಾಡಿಕೊಳ್ತಿದ್ಯಾ ಎನ್ನುವ ಅನುಮಾನ ಕಾಡುತ್ತಿದೆ. ನಿಯಮಗಳನ್ನ ಗಾಳಿಗೆ ತೂರಿ ಅಧಿಕಾರಿಗಳನ್ನ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತಿದೆ ಎನ್ನುವ ಗಂಭೀರ ಆರೋಪ ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರ ಎದುರಿಸುತ್ತಿದೆ.
ರಾಜ್ಯದಲ್ಲಿ ಎರಡು ಹಂತದಲ್ಲಿ ಲೋಕಸಮರ ಮುಕ್ತಾಯವಾಗಿ ಅಭ್ಯರ್ಥಿಗಳ ಭವಿಷ್ಯ ಮತಕಟ್ಟೆಯಲ್ಲಿ ಭದ್ರವಾಗಿದೆ. ಇದರ ಬೆನ್ನಲ್ಲೇ ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರಗಳಿಗೆ ಚುನಾವಣಾ ಕಾವು ಏರುತ್ತಿದೆ. ಈಗಾಗಲೇ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು, ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನ ಘೋಷಣೆ ಮಾಡಿವೆ. ಬಿಫಾರಂ ಪಡೆದ ಅಭ್ಯರ್ಥಿಗಳು ಇದೀಗ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ನಿಯಮದ ಪ್ರಕಾರ ಸರ್ಕಾರಿ ಅಧಿಕಾರಿಗಳನ್ನ, ನೌಕರರನ್ನ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವಂತಿಲ್ಲ. ಹಾಗೂ ಚುನಾವಣಾ ಪ್ರಚಾರ ವೇದಿಕೆ ಮೇಲೂ ಕಾಣಿಸಿಕೊಳ್ಳುವಂತಿಲ್ಲ ಎನ್ನುವ ನಿಯಮವಿದೆ. ಆದರೆ ಈ ಎಲ್ಲ ನಿಯಮಗಳನ್ನ ಗಾಳಿಗೆ ತೂರಿರೋ ಸ್ವತಃ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ತಮ್ಮ ಅಧೀನದಲ್ಲಿರುವ ಬಿಎಂಟಿಸಿ ನೌಕರರನ್ನ ಪದವಿಧರ ಕ್ಷೇತ್ರದ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಮೇ 9 ರಂದು ಪದವೀಧರ ಕ್ಷೇತ್ರದ ಪಕ್ಷದ ಅಭ್ಯರ್ಥಿ ರಾಮೋಜಿ ಗೌಡ ಅವರ ಚುನಾವಣಾ ಪ್ರಚಾರ ಬಿಟಿಎಂ ಲೇಔಟ್ ನಲ್ಲಿ ಆಯೋಜಿಸಲಾಗಿತ್ತು. ಆ ಚುನಾವಣಾ ಪ್ರಚಾರದಲ್ಲಿ ಬಿಟಿಎಂ ಕ್ಷೇತ್ರದ ಶಾಸಕ ಹಾಗೂ ಸಾರಿಗೆ ಸಚಿವರೂ ಆಗಿರುವ ರಾಮಲಿಂಗಾರೆಡ್ಡಿ, ಸರ್ಕಾರಿ ಅಧಿಕಾರಿಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ.
ಆ ಚುನಾವಣಾ ಪ್ರಚಾರದಲ್ಲಿ ಬಿಎಂಟಿಸಿ ಸಂಚಾರಿ ನಿಯಂತ್ರಕ ಚಿಕ್ಕತಿಮ್ಮಯ್ಯ ಕಾಣಿಸಿಕೊಂಡಿದ್ದಾರೆ. ಅವರು ಸರ್ಕಾರಿ ನೌಕರರಾಗಿದ್ದು, ನಿಯಮದ ಪ್ರಕಾರ ಅವರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವಂತಿಲ್ಲ ಎನ್ನುವ ನಿಯಮವಿದ್ದರೂ ಆ ಪ್ರಚಾರ ಸಭೆಯಲ್ಲಿ ಭಾಗಿಯಾಗಿ, ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿ ಗೌಡ ಪರವಾಗಿ ಮತಯಾಚನೆ ಮಾಡಿದ್ದಾರೆ. ಅಷ್ಟೇ ಅಲ್ದೇ ಸಭೆಯನ್ನ ಉದ್ದೇಶಿಸಿ ಸುಧೀರ್ಘ ಭಾಷಣ ಮಾಡಿ ಪಕ್ಷದ ಕಾರ್ಯಕರ್ತರ ರೀತಿ ಮತಯಾಚಿಸಿದ್ದಾರೆ.
ಬಿಎಂಟಿಸಿ ಸಂಚಾರಿ ನಿಯಂತ್ರಕ ಚಿಕ್ಕತಿಮ್ಮಯ್ಯ ಅಂದು ಡ್ಯೂಟಿಯಲ್ಲಿದ್ದುಕೊಂಡೇ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಅಂದು ಫಸ್ಟ್ ಶಿಫ್ಟ್ ನಲ್ಲಿದ್ದಬಿಎಂಟಿಸಿ ಸಂಚಾರಿ ನಿಯಂತ್ರಕ ಚಿಕ್ಕತಿಮ್ಮಯ್ಯ, ಬೆಳಗ್ಗೆ 10 ಗಂಟೆ ಸುಮಾರಿಗೆ ಸಭೆಯಲ್ಲಿ ಭಾಗಿಯಾಗಿದ್ದಾರೆ. ಅಂದು ಮಧ್ಯಾಹ್ನದ ವರೆಗೂ ಸಭೆಯಲ್ಲಿ ಭಾಗಿಯಾಗಿ ಆನಂತರ ತಮ್ಮ ಡ್ಯೂಟಿಗೆ ವಾಪಾಸ್ಸಾಗಿದ್ದಾರೆ. ಇದು ಕಾನೂನು ಬಾಹಿರವಾಗಿದ್ದು, ಇದಕ್ಕೆ ಸಾರಿಗೆ ಸಚಿವರ ರಾಮಲಿಂಗಾರೆಡ್ಡಿ ಅವರ ಬೆಂಬಲವಿದ್ದು, ಹೀಗಾಗಿಯೇ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವ ಬಿಎಂಟಿಸಿ ಸಂಚಾರಿ ನಿಯಂತ್ರಕ ಚಿಕ್ಕತಿಮ್ಮಯ್ಯ ಅವ್ರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಬಿಟಿಎಂ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಡು ಬಿಎಂಟಿಸಿ ಎಂಡಿ ಹಾಗೂ ಚುನಾವಣಾ ಆಯೋಗಕ್ಕೆ ಸಾಕ್ಷಿ ಸಮೇತ ದೂರು ಕೊಟ್ಟಿದ್ದಾರೆ.
ಸಾರಿಗೆ ಸಚಿವರ ನಡೆ ಖಂಡಿಸಿದ ಬಿಜೆಪಿ ಮುಖಂಡ
ಇನ್ನು ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ ಬಿಎಂಟಿಸಿ ಸಿಬ್ಬಂದಿ ಬಳಕೆ ಮಾಡಿಕೊಂಡು ಮತ ಕೇಳಿದ್ದನ್ನ ಬಿಜೆಪಿ ಮುಖಂಡ ಅನಿಲ್ ಶೆಟ್ಟಿ ಖಂಡಿಸಿದ್ದಾರೆ. ಸಾರಿಗೆ ಸಚಿವರು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಕ್ಕೆ ಸಂಬಂಧಿಸಿದಂತೆ ಸಾಕ್ಷಿ ಸಮೇತ ದೂರು ಕೊಟ್ಟಿದ್ದರೂ ಚಿಕ್ಕತಿಮ್ಮಯ್ಯ ವಿರುದ್ಧ ಕ್ರಮ ಕೈಗೊಳ್ಳದಿರುವುದು ವಿಷಾದನೀಯ ಅಂತ ಅಭಿಪ್ರಾಯ ಪಟ್ಟಿದ್ದಾರೆ.