Darshan News | ನಟ ದರ್ಶನ್ ಪತ್ನಿ ಡಿಕೆಶಿ ಭೇಟಿಯಾಗಿದ್ದು ಯಾಕೆ.? ಮಗನಿಗೆ ಕಾಲೇಜು ಸೀಟಿಗಾಗಿನಾ ಇಲ್ಲ ಪತಿಯ ಪರವಾಗಿನಾ.? ಡಿಕೆಶಿ ಕೊಟ್ರು ಕ್ಲಾರಿಟಿ.!

ಬೆಂಗಳೂರು, (www.thenewzmirror.com) ;

ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾರೆ. ಇದರ ನಡುವೆ ನಟನ ಪತ್ನಿ ವಿಜಯಲಕ್ಷ್ಮೀ ಹಾಗೂ ತಮ್ಮ ದಿನಕರ್ ತೂಗೂದೀಪ್ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನ ಭೇಟಿ ಮಾಡಿದ್ದು, ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿತ್ತು. ಭೇಟಿ ಬಳಿಕ ಮಾತನಾಡಿದ ಡಿಕೆಶಿ, ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ನಮ್ಮ ಶಾಲೆಯಲ್ಲಿ ಮಗನಿಗೆ ಸೀಟು ಸಂಬಂಧ ನನ್ನನ್ನು ಭೇಟಿ ಮಾಡಿದ್ದರು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

RELATED POSTS

ದರ್ಶನ್, ವಿಜಯಲಕ್ಷ್ಮೀ ಪುತ್ರ ಈ ಮೊದಲು ನಮ್ಮ ಶಾಲೆಯಲ್ಲಿ ಓದುತ್ತಿದ್ದರು. ಕಾರಣಾಂತರಗಳಿಂದ ನಮ್ಮ ಶಾಲೆ ತೊರೆದು ಬೇರೆ ಶಾಲೆ ಸೇರಿದ್ದರು. ಈಗ ಮತ್ತೆ ಮರಳಿ ನಮ್ಮ ಶಾಲೆಗೆ ಸೇರಿಸಿಕೊಳ್ಳುವಂತೆ ಮನವಿ ಮಾಡಲು ಬಂದಿದ್ದರು. ನಮ್ಮ ಶಾಲೆಯ ಪ್ರಾಂಶುಪಾಲರು ಪ್ರವೇಶ ಅವಕಾಶ ನಿರಾಕರಿಸಿದ್ದರಿಂದ ನನ್ನ ಬಳಿ ಸೀಟು ಕೇಳಲು ಬಂದಿದ್ದರು ಎಂದು ಹೇಳಿದರು.

ಶಾಲೆಯ ದಾಖಲಾತಿಗೆ ಒಂದಷ್ಟು ನಿಯಮಾವಳಿಗಳಿವೆ. ನಾನು ಶಾಲೆಗೆ ಅಷ್ಟಾಗಿ ಭೇಟಿ ನೀಡುತ್ತಿಲ್ಲ. ಶಾಲೆಯ ಆಡಳಿತ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮಕ್ಕಳಿಗೆ ವಹಿಸಿದ್ದೇನೆ. ವಿಜಯಲಕ್ಷ್ಮಿ ಅವರು ಮಗನ ಭವಿಷ್ಯದ ದೃಷ್ಟಿಯಿಂದ ಬಂದಿದ್ದರು. ಜತೆಗೆ ನಮ್ಮ ಶಾಲೆಯ ಪಕ್ಕದಲ್ಲೇ ಅವರ ನಿವಾಸವಿದೆ. ನಾನು ಆ ಮಗುವಿಗೆ ಒಳ್ಳೆಯದಾಗಲಿ ಎಂದು ಪ್ರಾಂಶುಪಾರನ್ನು ಭೇಟಿ ಮಾಡಲು ಹೇಳಿದ್ದೇನೆ ಎಂದರು.

ವಿಜಯಲಕ್ಷ್ಮಿ ಅವರು ನೆರವು ಕೇಳಿದರೆ ಸಹಾಯ ಮಾಡುವಿರಾ ಎಂದಾಗ ನಾವು ಸಾರ್ವಜನಿಕ ಜೀವನದಲ್ಲಿದ್ದೇವೆ. ನನ್ನ ಭೇಟಿ ಮಾಡಲು ಬಂದವರನ್ನು ಬೇಡ ಎಂದು ಹೇಗೆ ನಿರಾಕರಣೆ ಮಾಡಲಿ? ಅಲ್ಲದೇ ನಮ್ಮ ಶಾಲೆಯ ಪಕ್ಕದಲ್ಲೇ ಅವರ ಮನೆಯಿದೆ. ನಮ್ಮ ಲೋಕಸಭಾ ಕ್ಷೇತ್ರದಲ್ಲೇ ಅವರ ಮನೆಯಿದೆ. ನನ್ನನ್ನು ಭೇಟಿ ಮಾಡಲು ನೂರಾರು ಜನ ಬಂದಿದ್ದಾರೆ. ನೀವು (ಮಾಧ್ಯಮದವರು) ಕೂಡ ಬಂದಿದ್ದೀರಿ. ನಿಮ್ಮ ಭೇಟಿಗೆ ನಿರಾಕರಿಸಿದರೆ ಡಿ.ಕೆ. ಶಿವಕುಮಾರ್ ದುರಹಂಕಾರಿ, ಭೇಟಿ ಮಾಡದೆ ತೆರಳಿದರು ಎನ್ನುತ್ತೀರಿ. ಸಾರ್ವಜನಿಕ ಜೀವನದಲ್ಲಿ ಇದ್ದಾಗ ಸಹಾಯ ಕೇಳಿಕೊಂಡು ನನ್ನನ್ನು ಭೇಟಿ ಮಾಡಲು ಬಂದರೆ ಅವರನ್ನು ಭೇಟಿ ಮಾಡಬೇಕಾಗುತ್ತದೆ. ಅದು ನನ್ನ ಕರ್ತವ್ಯ ಕೂಡ ಎಂದು ಹೇಳಿದರು.

ಆ ಹೆಣ್ಣುಮಗಳಿಗೆ ತನ್ನ ಮಗನ ಶಿಕ್ಷಣದ ಬಗ್ಗೆ ಕಾಳಜಿಯಿದೆ. ಎಲ್ಲಾ ಮಕ್ಕಳು ಒಂದೇ ಅಲ್ಲವೇ? ಅವರಿಗೆ ಮಗನ ಶಿಕ್ಷಣದ ಬಗ್ಗೆ ಇರುವ ಕಾಳಜಿ ನೋಡಿ ಬಹಳ ಸಂತೋಷವಾಯಿತು. ಬೇರೆ ಶಾಲೆಗೆ ಸೇರಿಸಿದರೆ ಮಾನಸಿಕವಾಗಿ ತೊಂದರೆಯಾಗಬಹುದು. ನಮ್ಮ ಶಾಲೆಗೆ ಸೇರಿಸಿದರೆ ಹತ್ತಿರದಲ್ಲೇ ಇರುವುದರಿಂದ ಹೋಗಿ ಬರಲು ಅನುಕೂಲ ಆಗುತ್ತದೆ. ಈ ಹಿಂದೆ ಪೋಷಕರ ಸಭೆಗೆ ಅವರನ್ನು ಕರೆಸಲಾಗಿತ್ತು. ಆ ವೇಳೆ ದರ್ಶನ್ ಕೂಡ ಬಂದಿದ್ದರು ಎಂದರು.

ಕಾನೂನಿನ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ:

ನಟ ದರ್ಶನ್ ಗೆ ಅನ್ಯಾಯ ಆಗಿದ್ದರೆ ನ್ಯಾಯ ಕೊಡಿಸಲಾಗುವುದು ಎಂದು ರಾಮನಗರದಲ್ಲಿ ನೀಡಿದ ಹೇಳಿಕೆಯ ಬಗ್ಗೆ ಮಾಧ್ಯಮದವರು ಕೇಳಿದಾಗ, “ನಿನ್ನೆ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ, ವಿಜಯಲಕ್ಷ್ಮಿ ಅವರು ನನ್ನನ್ನು ಭೇಟಿ ಮಾಡಲು ಬಂದಿದ್ದರು. ಎಲ್ಲೆಂದರಲ್ಲಿ ಭೇಟಿ ಮಾಡಲು ಸಾಧ್ಯವಿಲ್ಲ. ಮನೆಗೆ ಬಂದು ಭೇಟಿ ಮಾಡಿ ಎಂದು ಇಂದು ಬೆಳಗ್ಗೆ ಸಮಯಾವಕಾಶ ನೀಡಿದ್ದೆ. ಅವರು ನಿನ್ನೆ ಭೇಟಿಗೆ ಯತ್ನಿಸಿದಾಗ ಬಹುಶಹ ದರ್ಶನ್ ಪ್ರಕರಣದ ವಿಚಾರವಾಗಿ ಮಾತನಾಡಲು ಬರುತ್ತಾರೆ ಎಂದು ಭಾವಿಸಿದ್ದೆ” ಎಂದರು.

ನಟ ದರ್ಶನ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಪೊಲೀಸ್ ತನಿಖೆ ನಡೆಯುತ್ತಿದೆ. ನಾವು ಯಾವುದೇ ಕಾರಣಕ್ಕೂ ಪೊಲೀಸ್ ವಿಚಾರಣೆ, ನ್ಯಾಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಮಾಡಲೂಬಾರದು. ಹಸ್ತಕ್ಷೇಪ ಮಾಡುವುದು ಒಳ್ಳೆಯದಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲು ಕಾನೂನಿದೆ. ಕಾನೂನಿನ ಚೌಕಟ್ಟಿನಲ್ಲಿ ಎಲ್ಲರೂ ಒಂದೇ. ಏನೂ ಬೇಕಾದರೂ ಆಗಬಹುದು” ಎಂದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist