ಬೆಂಗಳೂರು, (www.thenewzmirror.com) :
ಸರ್ಕಾರದ ವತಿಯಿಂದ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪಂಚಾಯಿತಿ ಮಟ್ಟದಲ್ಲಿ ಆರಂಭಿಸಲು ನಿರ್ಧರಿಸಿರುವ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭದ ಪ್ರಸ್ತಾಪ ಕೈಬಿಡುವಂತೆ ಶಿಕ್ಷಣ ತಜ್ಞರು ಮನವಿ ಮಾಡಿದ್ದಾರೆ. ಈ ಕುರಿತಂತೆ ಶಿಕ್ಷಣ ತಜ್ಞ ಪ್ರೊ. ನಿರಂಜನಾರಾಧ್ಯ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ಪಂಚಾಯಿತಿ ಮಟ್ಟದಲ್ಲಿ ಪೂರ್ವ ಶೈಕ್ಷಣಿಕವಾಗಿ ಆಂಗ್ಲದಲ್ಲಿ ಶಿಕ್ಷಣ ನೀಡುವ ಪದ್ದತಿ ಸರಿಯಿಲ್ಲ. ಮಕ್ಕಳ ಪ್ರಾರಂಭಿಕ ಕಲಿಕೆ ಮತ್ತು ಕಲಿಕೆಯ ಭಾಷೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಬಹುಮುಖ್ಯವಾಗಿ ಕಲಿಕೆಯ ಭಾಷೆಯು ಮಾತೃಭಾಷೆಯಾಗಿರಬೇಕು. ಮಗುವಿಗೆ ಗೊತ್ತಿರದ ಭಾಷೆಯಲ್ಲಿ ಕಲಿಕೆ ಪ್ರಾರಂಭವಾದರೆ ಮಗುವಿನ ಪೂರ್ಣ ಬೌದ್ಧಿಕ ಬೆಳವಣಿಗೆ ಸಾಧ್ಯವಾಗದೆ ಆಸಕ್ತಿ ಕುಂದುವುದಲ್ಲದೆ ಮಗು ಕೇವಲ ಕಂಠಪಾಠಕ್ಕೆ ಜೋತು ಬೀಳುತ್ತದೆ. ಈ ಎಲ್ಲ ಅಂಶಗಳಿಂದ ಕೂಡಲೇ ಸರ್ಕಾರ ಪ್ರಸ್ತಾಪವನ್ನ ಕೈ ಬಿಡಬೇಕೆಂದು ಮನವಿ ಮಾಡಿದ್ದಾರೆ.
ಮುಂದಿನ ವರ್ಷದಿಂದ ರಾಜ್ಯಾದ್ಯಂತ ಮೂರು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನ ಪ್ರಾರಂಭಿಸಲು ತೀರ್ಮಾನ ಮಾಡಿದೆ. ಪೂರ್ವ ಪ್ರಾಥಮಿಕದಿಂದಲೇ ಪಂಚಾಯಿತಿಗೊಂದು ಸಾರ್ವಜನಿಕ ಶಾಲೆ ಪ್ರಾರಂಭಿಸುವ ಬದಲು, 2017ರ ಸರ್ಕಾರಿ ಶಾಲೆಗಳ ಸಬಲೀಕರಣ ವರದಿಯ ತೀರ್ಮಾನದಂತೆ ಪೂರ್ವ ಪ್ರಾಥಮಿಕದಿಂದ 4ನೇ ತರಗತಿವರೆಗೆ ಬುನಾದಿ ಪ್ರಾಥಮಿಕ ಶಿಕ್ಷಣವನ್ನು ಆಯಾ ಹಳ್ಳಿ, ಹಟ್ಟಿ, ಹಾಡಿಗಳಲ್ಲಿ ಉಳಿಸಿಕೊಳ್ಳಬೇಕು. 5 ರಿಂದ 12ನೇ ತರಗತಿವರೆಗೆ ಗ್ರಾಮ ಪಂಚಾಯತಿ ಮತ್ತು ನಗರದ ವಾರ್ಡ್ ಹಂತದಲ್ಲಿ ಕೇಂದ್ರೀಯ ಶಾಲೆಯ ಮಾದರಿಯಲ್ಲಿ ಸುಸಜ್ಜಿತ ರಾಜೀವ್ ಗಾಂಧಿ ಸಾರ್ವಜನಿಕ ನವೋದಯ ಶಾಲೆಗಳನ್ನು ಪ್ರಾರಂಭಿಸಲು ಮುಂದಿನ ನಾಲ್ಕು ವರ್ಷಗಳಿಗೆ ಕ್ರಿಯಾ ಯೋಜನೆ ತಯಾರಿಸಬೇಕು’ ಎಂದು ಒತ್ತಾಯಿಸಿದ್ದಾರೆ.