ಬೆಂಗಳೂರು, (www.thenewzmirror.com) ;
ಎಂಎಸ್‌ಎಂಇ ಗಳಿಗೆ ಅಗತ್ಯವಿರುವ ನುರಿತ ಕಾರ್ಮಿಕರ ಅವಶ್ಯಕತೆಯನ್ನು ಒದಗಿಸಲು ಬೆಂಗಳೂರಿನಲ್ಲಿ ರಾಷ್ಟೀಯ ಸಣ್ಣ ಕೈಗಾರಿಕಾ ನಿಗಮ (NSIC) ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಉದ್ಧೇಶಿಸಿದೆ, ಇದರ ಸಲುವಾಗಿ ಈಗಾಗಲೇ ಕೇಂದ್ರ ಸರ್ಕಾರದ ಸಚಿವರೊಂದಿಗೆ ಹಾಗೂ ಇಲಾಖಾ ಅಧಿಕಾರಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾಹಿತಿ ನೀಡಿದ್ರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI) ಆಯೋಜಿಸಿದ್ದ 19ನೇ ರಫ್ತು ಶ್ರೇಷ್ಠತಾ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವಲ್ಲಿ MSMEಗಳ ಪಾತ್ರ ಪ್ರಮುಖವಾದದ್ದು. MSMEಗಳು ಕೃಷಿಯ ನಂತರ ಎರಡನೇ ಅತಿ ದೊಡ್ಡ ಕ್ಷೇತ್ರ. ಕೇವಲ 20% ಹೂಡಿಕೆಯೊಂದಿಗೆ 80% ಉದ್ಯಮಗಳು ಉದ್ಯೋಗಗಳನ್ನು ಒದಗಿಸುತ್ತದೆ. MSMEಗಳು ರಾಷ್ಟ್ರದ ಜಿಡಿಪಿಗೆ ಸುಮಾರು ಶೇ.31% ಕೊಡುಗೆ ನೀಡುತ್ತಿದೆ. ಇದರಲ್ಲಿ ಶೇ.45% ರಫ್ತು ಮತ್ತು ಶೇ.34% ಉತ್ಪಾದನಾ ವಲಯವು ಒಳಗೊಂಡಿದೆ ಎಂದು ಹೇಳಿದ್ರು.
ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ ಉತ್ತೇಜಿಸಲು ಕೇವಲ ಬೆಂಗಳೂರು ಅಲ್ಲದೆ 2ನೇ ಸ್ತರ ಮತ್ತು 3ನೇ ಸ್ತರದ ನಗರಗಳಲ್ಲೂ ಕೈಗಾರಿಕೆಗಳು ಸ್ಥಾಪಿತವಾಗಬೇಕು ಮತ್ತು ಆಯಾ ಜಿಲ್ಲೆಗಳ ಸ್ಥಳೀಯ ಮೂಲ ಸೌಕರ್ಯ ಗಮನದಲ್ಲಿಟ್ಟುಕೊಂಡು ಕೈಗಾರಿಕೆಗಳನ್ನು ಸ್ಥಾಪಿಸಿದರೆ ಸ್ಥಳೀಯರಿಗೆ ಉದ್ಯೋಗ ನೀಡಿದಂತಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಫ್‌ಕೆಸಿಸಿಐಯು ಬೆಂಗಳೂರು ಗ್ರಾಮಾಂತರ ಜಿಲ್ಲೆ, ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದಲ್ಲಿ ಉದ್ದೇಶಿಸಿರುವ ಎಫ್‌ಕೆಸಿಸಿಐ ಕೌಶಲ್ಯಾಭಿವೃದ್ಧಿ ಕೇಂದ್ರಕ್ಕೆ ಕೇಂದ್ರ ಸರ್ಕಾರದಿಂದ ಮತ್ತು ನನ್ನ ಸಚಿವಾಲಯದಿಂದ ಎಲ್ಲಾ ರೀತಿಯ ಬೆಂಬಲ ಸಹಕಾರ ನೀಡುತ್ತೇನೆಂದು ಭರವಸೆ ನೀಡಿದರು.
ಈ ಸಮಾರಂಭದಲ್ಲಿ ಕರ್ನಾಟಕ ರಾಜ್ಯಾದ್ಯಂತ ಸುಮಾರು 36 ರಫ್ತುದಾರರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ವೇಳೆ FKCCI ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಸೇರಿದಂತೆ ಇತರ ಗಣ್ಯರು ಭಾಗವಹಿಸಿದ್ರು.