HSRP Number Problem Case study | ಇನ್ನೂ ಬಗೆಹರಿಯದ ಹೆಚ್ ಆರ್ ಪಿ ನಂಬರ್ ಪ್ಲೇಟ್ ಗೊಂದಲ, ಆನ್ ಲೈನ್ ನಲ್ಲಿ ನೊಂದಣಿ ಮಾಡಿಸಿದ್ದರೂ ಮತ್ತೆ ಕೊಡಬೇಕು ಹಣ..! ಕಣ್ಮುಚ್ಚಿ ಕುಳಿತ RTO..!

ಬೆಂಗಳೂರು, (www.thenewzmirror.com) ;

ರಾಜ್ಯದಲ್ಲಿ ಅದ್ಯಾಕೋ ಏನೋ HSRP ನಂಬರ್ ಪ್ಲೇಟ್ ಗೊಂದಲ ಬಗೆಹರಿಯೋ ಲಕ್ಷಣ ಕಾಣುತ್ತಿಲ್ಲ. ಒಂದ್ಕಡೆ ಡೆಡ್ ಲೈನ್ ಮೇಲೆ ಡೆಡ್ ಲೈನ್ ನೀಡುತ್ತಿದ್ದರೂ ಸಾರಿಗೆ ಇಲಾಖೆ ತೋರುತ್ತಿರುವ ನಿರ್ಲಕ್ಷ್ಯದಿಂದಾಗಿ HSRP ನಂಬರ್ ಪ್ಲೇಟ್ ಅಳವಡಿಕೆಗೆ ವಾಹನ ಮಾಲೀಕರು ಮುಂದಾಗುತ್ತಿಲ್ಲ.

RELATED POSTS

ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಗಳನ್ನ ಅಳವಡಿಸಬೇಕು ಅಂತ ರಾಜ್ಯ ಸಾರಿಗೆ ಇಲಾಖೆ ಸೂಚನೆ ಕೊಟ್ಟಿದೆ. 2019 ರ ಏಪ್ರಿಲ್ ಗೂ ಮುನ್ನ ಖರೀದಿಯಾಗಿದ್ದ ವಾಹನಗಳು ಕಡ್ಡಾಯವಾಗಿ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಬೇಕೆಂದು 2023 ರ ಆಗಸ್ಟ್ 17 ರಂದು ಮೊದಲ ಸುತ್ತೋಲೆ ಹೊರಡಿಸಿತ್ತು. ಮೇ ತಿಂಗಳ ಅಂತ್ಯಕ್ಕೆ ರಾಜ್ಯದಲ್ಲಿ ಒಟ್ಟು 31936711ವಾಹನಗಳಿದ್ದು, ಇದರಲ್ಲಿ ಇದೂವರೆಗೂ ಕೇವಲ 36 ರಷ್ಟು ವಾಹನಗಳು ಮಾತ್ರ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಗಳನ್ನ ಅಳವಡಿಕೆ ಮಾಡಿಕೊಂಡಿವೆ. ಉಳಿದ ವಾಹನ ಮಾಲೀಕರು ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳೊಕೆ ಸೆಪ್ಟೆಂಬರ್ 15ರ ವರೆಗೂ ಅವಕಾಶ ನೀಡುವ ಮೂಲಕ ಬರೋಬ್ಬರಿ ನಾಲ್ಕು ಬಾರಿ ಡೆಡ್ ಲೈನ್ ಅನ್ನ ಸಾರಿಗೆ ಇಲಾಖೆ ನೀಡಿದೆ.

ಆದರೆ ಸಾರಿಗೆ ಇಲಾಖೆ ಪದೆ ಪದೇ ಡೆಡ್ ಲೈನ್ ನೀಡುತ್ತಿದ್ದರೂ ನಿರೀಕ್ಷತ ಪ್ರಮಾಣದಲ್ಲಿ HSRP ನಂಬರ್ ಪ್ಲೇಟ್ ಅಳವಡಿಕೆ ಆಗುತ್ತಿಲ್ಲ. ಮೇಲ್ನೋಟಕ್ಕೆ ಸಾರಿಗೆ ಇಲಾಖೆ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಅಂತ ಕೆಲ ವಾಹನ ಮಾಲೀಕರು ಆರೋಪ ಮಾಡುತ್ತಿದ್ದಾರೆ. HSRP ನಂಬರ್ ಪ್ಲೇಟ್ ಅಳವಡಿಕೆಗೆ ಹೋದ ವಾಹನ ಮಾಲೀಕರಿಂದ ಮನಸೋ ಇಚ್ಚೇ ಹಣ ವಸೂಲಿ ಮಾಡುತ್ತಿರೋದು ಕೂಡ ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗಿದೆ. ಸರ್ಕಾರ ನಿಗದಿ ಪಡಿಸಿದ್ದಷ್ಟು ಹಣ ಪಾವತಿ ಮಾಡಿದರೂ ನಂಬರ್ ಪ್ಲೇಟ್ ಅಳವಡಿಕೆ ಆದಬಳಿಕ ಪ್ರತಿ ವಾಹನ ಮಾಲೀಕರಿಂದ ಕನಿಷ್ಠ ನೂರು ರಿಂದ ಗರಿಷ್ಠ ಐದು ನೂರು ರೂವರೆಗೂ ಡಿಮ್ಯಾಂಡ್ ಮಾಡಲಾಗುತ್ತಿದೆಯಂತೆ. ಅದೂ ಕೂಡ ವಾಹನದ ದರಕ್ಕೆ ತಕ್ಕಂತೆ ಡಿಮ್ಯಾಂಡ್ ಮಾಡಲಾಗುತ್ತಿದೆಯಂತೆ.

ಹಣ ಇದ್ದವರೇನೋ ನೂರು ಇನ್ನೂರು ರೂಗೆ ಮುಲಾಜು ಮಾಡದೆ ಕೇಳಿದಷ್ಟು ಹಣ ಕೊಟ್ಟು HSRP ನಂಬರ್ ಪ್ಲೇಟ್ ಹಾಕಿಸಿಕೊಳ್ತಾರೆ. ಆದ್ರೆ ಸಾಲ ಸೋಲ ಮಾಡಿ ವಾಹನ ಖರೀದಿ ಮಾಡಿದ್ದರು ಸರ್ಕಾರ ನಿಗದಿ ಪಡಿಸಿದ ಹಣ ಕಟ್ಟಿದ ಮೇಲೂ ಮತ್ತೆ ಹೆಚ್ಚುವರಿ ಕೊಡೋಕೆ ಸಾಧ್ಯವಾಗುತ್ತಾ..? ಖಂಡಿತಾ ಇಲ್ಲ.

ಯಾವ ವಾಹನಗಳಿಗೆ ಎಷ್ಟು ದರ?

ಆಟೋ ಅಥವಾ ಮೂರು ಚಕ್ರದ ವಾಹನಗಳಿಗೆ 450 ರೂ.ಗಳಿಂದ 550 ರೂ. ಕಾರು ಅಥವಾ 4 ಚಕ್ರದ ವಾಹನಗಳಿಗೆ 650 ರೂ.ಗಳಿಂದ 85೦ ರೂ.ಗಳ ವರೆಗೆ ಸರ್ಕಾರ ದರ ನಿಗದಿ ಮಾಡಿದೆ. ಲಾರಿ, ಬಸ್ಸು ಮತ್ತು 10 ಚಕ್ರದ ವಾಹನಗಳಿಗೆ 650 ರೂ.ಗಳಿಂದ 800 ರೂಪಾಯಿವರೆಗೆ ಸರ್ಕಾರ ನಿಗದಿ ಮಾಡಿದೆ.

ಆನ್ ಲೈನ್ ನಲ್ಲಿ ಅಂಥವಾ ಡೀಲರ್ ಬಳಿ ಹೋಗಿ ಸರ್ಕಾರ ತಿಳಿಸಿದ ದರವನ್ನ ಕಟ್ಟಿ ನಂಬರ್ ಪ್ಲೇಟ್ ಆರ್ಡರ್ ಮಾಡಲಾಗುತ್ತೆ. ಇಂಥ ದಿನ ಅಂತ ಸ್ಲಾಟ್ ಕೂಡ ಬುಕ್ ಆಗುತ್ತೆ. ನಿಗದಿತ ದಿನಾಂಕದಂದು ತೆರಳಿ ನಂಬರ್ ಪ್ಲೇಟ್ ಹಾಕಿಸಿದ ಬಳಿಕ ಅಲ್ಲಿನ ಸಿಬ್ಬಂದಿ ನಂಬರ್ ಪ್ಲೇಟ್ ಅಳವಡಿಸಿದಕ್ಕೆ ಇಂತಿಷ್ಟು ಹಣ ನೀಡ್ಬೇಕು. ಇದು ಸರ್ಕಾರದ ಆದೇಶ ಅಂತ ಹೇಳಿ ವಾಹನ ಮಾಲೀಕರನ್ನ ದಿಕ್ಕು ತಪ್ಪಿಸಿ ಹಣ ಪೀಕುತ್ತಿದ್ದಾರೆ. ಇನ್ನು ದ್ವಿಚಕ್ರ ವಾಹನ ಮಾಲೀಕರಿಗಂತೂ ನಂಬರ್ ಪ್ಲೇಟ್ ಹಾಕಿಸಿದ ಮೇಲೆ ಅದರ ಪ್ರೊಟೆಕ್ಟರ್ ಕವರ್ ಹಾಕಿಸಬೇಕು ಅದಕ್ಕೆ ಇನ್ನೂರು ರೂ ಕೊಡಲೇ ಬೇಕು ಅಂತ ಬಲವಂತವಾಗಿ ಹಣ ಪಡೆಯುತ್ತಿದ್ದಾರೆ.

ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ..!

ನಂಬರ್ ಪ್ಲೇಟ್ ಅಳವಡಿಕೆ ವಿಚಾರದಲ್ಲಿ ಹೆಚ್ಚುವರಿ ಹಣ ಪಡೆಯುತ್ತಿರುವ ಕುರಿತಂತೆ ಸಾರಿಗೆ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜವನವಾಗಿಲ್ಲ ಅಂತ ವಾಹನ ಮಾಲೀಕರು ಆರೋಪ ಮಾಡ್ತಿದ್ದಾರೆ. ಇದರ ಜತೆಗೆ ನಂಬರ್ ಪ್ಲೇಟ್ ಅಳವಡಿಕೆ ಮಾಡುವಾಗ ಆಗುತ್ತಿರೋ ಸಮಸ್ಯೆ ಕುರಿತಂತೆಯೂ ಇಲಾಖೆ ಗಮನಕ್ಕೆ ತಂದರೂ ಬಗೆಹರಿಸುವ ಕೆಲಸ ಮಾಡುತ್ತಿಲ್ಲ ಅಂತ ಆರೋಪ ಮಾಡ್ತಿದ್ದಾರೆ.

ಎರಡೇ ದಿನಕ್ಕೆ HSRP ನಂಬರ್ ಪ್ಲೇಟ್ ಬಿದ್ದು ಹೋಯ್ತು…!

HSRP ನಂಬರ್ ಪ್ಲೇಟ್ ಅಳವಡಿಕೆ ಮಾಡುವ ಡೀಲರ್ ಗಳಿಗೆ ಒಂದು ದಿನಕ್ಕೆ ಇಂತಿಷ್ಟು ವಾಹನಗಳಿಗೆ ಅಳವಡಿಕೆ ಮಾಡ್ಬೇಕು ಅಂತ ಸ್ಲಾಟ್ ನೀಡಲಾಗುತ್ತೆ. ಹೀಗಾಗಿ ಆಯಾ ಸ್ಲಾಟ್ ಗೆ ತಕ್ಕಂತೆ ಡೀಲರ್ ಬಳಿ ತೆರಳಿದಾಗ ಅಲ್ಲಿನ ಸಿಬ್ಬಂದಿ ತರಾತುರಿಯಲ್ಲಿ ನಂಬರ್ ಪ್ಲೇಟ್ ಅಳವಡಿಕೆ ಮಾಡುತ್ತಿದ್ದಾರೆ. ಇದೇ ರೀತಿ ದ್ವಿಚಕ್ರ ವಾಹನ ಮಾಲೀಕರೊಬ್ಬರು ಸಾರಿಗೆ ಇಲಾಖೆ ನಿಗದಿ ಪಡಿಸಿದ ಡೀಲರ್ ಬಳಿಕ ತೆರಳಿ ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ಅಳವಡಿಕೆ ಮಾಡಿದ್ದಾರೆ. ಸರಿಯಾಗಿ ಅದನ್ನ ಫಿಟ್ ಮಾಡದೆ ನಂಬರ್ ಪ್ಲೇಟ್ ಅಳವಡಿಕೆ ಮಾಡಿದ್ದರಿಂದ ಎರಡೇ ದಿನಕ್ಕೆ ನಂಬರ್ ಪ್ಲೇಟ್ ನ ಒಂದು ರಿವಿಟ್ ಕಿತ್ತುಬಂತು ಅಂತ ಸಮಸ್ಯೆಯನ್ನ ತೋಡಿಕೊಳ್ತಿದ್ದಾರೆ.

ನಿಮ್ಮ ನ್ಯೂಝ್ ಮಿರರ್ HSRP ನಂಬರ್ ಪ್ಲೇಟ್ ಅಳವಡಿಕೆಯಲ್ಲಿ ಆಗುತ್ತಿರುವ ಕೆಲವು ಸಮಸ್ಯೆಗಳನ್ನ ಸಾರಿಗೆ ಇಲಾಖೆ ಗಮನಕ್ಕೆ ತರುವ ಪ್ರಯತ್ನವನ್ನ ಮಾಡಿದೆ. ಇದೇ ರೀತಿ ಇನ್ನೂ ಹಲವು ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತಂದರೆ ಅದನ್ನ ಸಾರಿಗೆ ಇಲಾಖೆ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist