ಬೆಂಗಳೂರು, (www.thenewzmirror.com) :
ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಶಾಲೆಗಳ ಪ್ರವೇಶದ್ವಾರದಲ್ಲಿರುವ ಘೋಷವಾಕ್ಯ ಬದಲಾವಣೆ ವಿಚಾರ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಮೊದಲು ಶಾಲೆಗಳ ಪ್ರವೇಶದ್ವಾರದಲ್ಲಿದ್ದ ‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ” ಘೋಷವಾಕ್ಯವನ್ನು ಬದಲಾಯಿಸಲಾಗಿದೆ, ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು’ ಎಂದು ಬದಲಾವಣೆ ಮಾಡಲಾಗಿದೆ. ಯಾವಾಗ ವಿವಾದ ಕಿಡಿ ಜೋರಾಗಿ ಹೊತ್ತಿಕೊಳ್ಳೋಕೆ ಶುರುವಾಯ್ತೋ ತಕ್ಷಣವೇ ಹಿಂದಿನ ನಾಮಫಲಕವನ್ನ ಅಳವಡಿಸಲಾಗಿದೆ.
ವಿಜಯಪುರ ಜಿಲ್ಲೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ಬರಹವನ್ನು ಬದಲಿಸಿ ಹಾಕಿ ವಿವಾದಕ್ಕೆ ನಾಂದಿ ಹಾಡಲಾಗಿದೆ. ಕುವೆಂಪು ಅವರ ‘ಜ್ಞಾನ ದೇಗುಲವಿದು ಕೈಮುಗಿದು ಬಳಗೆ ಬಾ’ ಎಂಬ ಸಾಲುಗಳ ಬದಲಾಗಿ ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಾಯಿಸಿ ಶಾಲೆಯ ಪ್ರವೇಶ ದ್ವಾರದಲ್ಲಿ ಬರೆಯಲಾಗಿದೆ.
ಮೊರಾರ್ಜಿ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪೋಷಕರು ಧೈರ್ಯವಾಗಿ ಪ್ರಶ್ನೆ ಮಾಡಲಿ ಎಂದ ಉದ್ದೇಶದಿಂದ ಬರೆಯಲಾಗಿದೆ ಎನ್ನಲಾಗಿದೆ. ಘೋಷವಾಕ್ಯ ಬದಲಾವಣೆಗೆ ಸರ್ಕಾರದಿಂದ ಯಾವುದೇ ಅಧಿಕೃತ ಆದೇಶವಿಲ್ಲ. ಆದೇಶ ನೀಡಿದರೆ ಮತ್ತೊಂದು ವಿವಾದಕ್ಕೆ ಕಾರಣವಾಗುತ್ತದೆಂದುದ ಆದೇಶವಿಲ್ಲದೆ ಕೇವಲ ಮೌಖಿಕವಾಗಿ ಸೂಚನೆ ನೀಡಿರುವ ಹಿನ್ನೆಲೆ ಘೋಷವಾಕ್ಯ ಬದಲಾವಣೆ ಮಾಡಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕ್ಯಾ.ಮಣಿವಣ್ಣನ್ ಸೂಚನೆ ಮೇರೆಗೆ ಘೋಷವಾಕ್ಯ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ. ಮಕ್ಕಳ ಶಿಕ್ಷಣ ವಸತಿ ಊಟ ಸೇರಿದಂತೆ ವಸತಿ ಶಾಲೆಯ ಎಲ್ಲಾ ವಿಚಾರಗಳ ಕುರಿತು ಪ್ರಶ್ನೆ ಮಾಡಲಿ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗಲಿ ಪೋಷಕರು ಧೈರ್ಯವಾಗಿ ಮಾತನಾಡಲಿ ಎನ್ನುವ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಘೊಷವಾಕ್ಯ ಬದಲಾವಣೆ ಒಂದು ತಿಂಗಳ ಹಿಂದೆಯೇ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆದೇಶ ಮಾಡಿದರೆ ವಿವಾದಕ್ಕೆ ಕಾರಣವಾಗುತ್ತದೆ ಎಂಬ ಕಾರಣಕ್ಕೆ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿ ಎಲ್ಲ ಶಾಲೆಗಳಿಗೆ ಮೌಖಿಕ ಸಂದೇಶ ನೀಡಲಾಗಿದೆ. ಈ ವಿಚಾರ ಸಚಿವರ ಗಮನಕ್ಕೆ ಇತ್ತಾ ಇಲ್ವಾ ಎಂಬುದೇ ಪ್ರಶ್ನೆಯಾಗಿದೆ. ಸಚಿವ ಮಹದೇವಪ್ಪ ಅವರ ಗಮನಕ್ಕೆ ಇಂದು ಅಧಿಕಾರಿಗಳು ತಂದಿದ್ದಾರೆ ಎಂಬ ಮಾಹಿತಿ ಇದೆ.
ಈಗಾಗಲೇ ಬಹುತೇಕ ಶಾಲೆಗಳು ಘೊಷವಾಕ್ಯ ಬದಲು ಮಾಡಿವೆ. ಶಿವಮೊಗ್ಗ ಸೇರಿ ಕೆಲವಡೆ ಯಾವುದೇ ಆದೇಶ ಹೊರಡಿಸದ ಕಾರಣ ಘೋಷವಾಕ್ಯ ಬದಲಾವಣೆ ಮಾಡಲು ಮುಂದಾಗಿಲ್ಲ. ಇನ್ನು ಈ ಬದಲಾವಣೆ ವಿಚಾರಕ್ಕೆ ವಿರೋಧಪಕ್ಷಗಳು ಭಾರೀ ಆಕ್ಷೇಪ ವ್ಯಕ್ತಪಡಿಸಿವೆ