ಬೆಂಗಳೂರು, (www.thenewzmirror.com) ;
ರಾಜ್ಯದಲ್ಲಿ ಗಾಳಿಪಟ ದಾರ(ಮಾಂಝಾ ದಾರ) ಈಗಾಗಲೇ ಬ್ಯಾನ್ ಮಾಡಲಾಗಿದೆ. ಹೀಗಿದ್ರೂ ಅಲ್ಲಲ್ಲಿ ಕಣ್ತಪ್ಪಿಸಿ ಬಳಕೆ ಮಾಡಲಾಗ್ತಿದೆ. ಅದರಲ್ಲೂ ಪ್ರಾಣಿ ಪಕ್ಷಿಗಳು ಹೆಚ್ಚು ವಾಸಿಸೋ ಸ್ಥಳಗಳಲ್ಲಿ ಆಯೋಜನೆ ಮಾಡ್ತಿರೋದು ಪರಿಸರ ಹಾಗೂ ಪ್ರಾಣಿ ಪ್ರಿಯರ ಅಸಮಧಾನಕ್ಕೆ ಕಾರಣವಾಗಿದೆ.
ಹೌದು, ಜಿಕೆವಿಕೆ ಆವರಣದಲ್ಲಿ ಇದೇ ತಿಂಗಳ 27 ರಂದು 34 ನೇ ವರ್ಷದ ರಾಜ್ಯ ಮಟ್ಟದ ಗಾಳಿಪಟ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಈ ಗಾಳಿಪಟ ಉತ್ಸವ ಮತ್ತು ಸ್ಪರ್ಧೆ ಕೃಷಿ ವಿವಿ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಸಹಯೋಗದಲ್ಲಿ ನಡೆಯುತ್ತಿದ್ದು, ಅಂತರಾಷ್ಟ್ರೀಯ ಮಟ್ಟದ ಕಲಾವಿದರೂ ಭಾಗಿಯಾಗಲಿದ್ದಾರೆ.

ಮೊದಲ ಬಾರಿಗೆ ಆಯೋಜನೆ ಮಾಡಿರೋ ಸ್ಥಳ ವೈವಿಧ್ಯಮಯ ಪಕ್ಷಿ ಸಂಕುಲಗಳು ವಾಸಿಸೋ ಸ್ಥಳ. ನೂರಾರು ಎಕರೆ ವಿಸ್ತೀರ್ಣವಿರೋ ಜಿಕೆವಿಕೆ ಕ್ಯಾಂಪಸ್ ಗಾಳಿಪಟ ಸ್ಪರ್ಧೆ ಆಯೋಜಿಸಿರುವುದು ಸರಿಯಲ್ಲ ಅಂತ ಪ್ರಾಣಿಪ್ರಿಯರು ಅಭಿಪ್ರಾಯ ಪಡ್ತಿದ್ದಾರೆ. ಸ್ಪರ್ಧೆ ನಡೆಸಲು ಅವಕಾಶ ನೀಡಬಾರದು ಅಂತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಬೆಂಗಳೂರು ನಗರ ಅವರಿಗೆ ದೂರು ನೀಡಿದ್ದಾರೆ.
ಜಿಕೆವಿಕೆ ಕ್ಯಾಂಪಸ್ ನಲ್ಲಿ ಅಂದು ಬೆಳಗ್ಗೆಯಿಂದ ಸಂಜೆವರೆಗೂ ಆಯೋಜಿಸಲಾಗಿದ್ದು, ಇಪ್ಪತ್ತೂ ಹೆಚ್ಚು ತಂಡಗಳು ಭಾಗಿಯಾಗಲಿವೆ. ಹೀಗೆ ಸ್ಪರ್ಧೆ ಆಯೋಜಿಸಿರೋದ್ರಿಂದ ನೂರಾರು ಪಕ್ಷಿಗಳ ಜೀವಕ್ಕೆ ಇದು ಕಂಟಕವಾಗಲಿದೆ ಅನ್ನೋ ಆತಂಕದ ಹಿನ್ನಲೆಯಲ್ಲಿ ದೂರು ನೀಡಿದ್ದು, ಅಂತಿಮವಾಗಿ ಅರಣ್ಯ ಇಲಾಖೆ ಯಾವ ಕ್ರಮ ಕೈಗೊಳ್ಳುತ್ತೆ ಕಾದು ನೋಡ್ಬೇಕಿದೆ.