ಬೆಂಗಳೂರು, (www.thenewzmirror.com) :
ಕೆಪಿಎಸ್‌ಸಿ ಅಧ್ಯಕ್ಷ ಮತ್ತು ಕೆಲವು ಸದಸ್ಯರು ಹಾಗೂ ಕೆಪಿಎಸ್‌ಸಿ ಕಾರ್ಯದರ್ಶಿ ಕೆ.ಎಸ್. ಲತಾ ಕುಮಾರಿ ಅವರ ಕೆಲವು ದಿನಗಳಿಂದ ಜಟಾಪಟಿ ನಡೆಯುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಇದರ ಮಧ್ಯೆಯೇ, ಸರ್ಕಾರ ಪ್ರಮಾಣಿಕ ಅಧಿಕಾರಿ ಎನಿಸಿಕೊಂಡಿದ್ದ ಲತಾ ಕುಮಾರಿ ಅವರಿಗೆ 10 ದಿನ ಗಳಿಕೆ ರಜೆ ನೀಡಿ ಮನೆಗೆ ಕಳುಹಿಸಿದೆ.
ಕೆ.ಎಸ್.ಲತಾ ಕುಮಾರಿ ಅವರಿಗೆ ಫೆಬ್ರವರಿ 7ರಿಂದ 17ರವರೆಗೆ ಗಳಿಕೆ ರಜೆ ನೀಡಲಾಗಿದೆ. ಈ ಅವಧಿಗೆ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ರಾಕೇಶ್ ಕುಮಾರ್ ಕೆ ಅವರನ್ನು ಕೆಪಿಎಸ್‌ಸಿ ಪ್ರಭಾರಿ ಕಾರ್ಯದರ್ಶಿಯನ್ನಾಗಿ ನಿಯುಕ್ತಿಗೊಳಿಸಿ ಡಿಪಿಎಆರ್ ಇಲಾಖೆ ಆದೇಶ ಹೊರಡಿಸಿದೆ.
ಕೆಪಿಎಸ್‌ಸಿಯ ನೇಮಕಾತಿ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್, ಕೆಲ ಸದಸ್ಯರು ಮತ್ತು ಲತಾಕುಮಾರಿ ಅವರ ನಡುವೆ ಜಟಾಪಟಿ ನಡೆಯುತ್ತಿದ್ದು, ಈ ಮಧ್ಯೆಯೇ ಪ್ರಮಾಣಿಕ ಅಧಿಕಾರಿ ಎನಿಸಿಕೊಂಡಿದ್ದ ಲತಾ ಅವರಿಗೆ ರಜೆ ಮಂಜೂರು ಮಾಡಿ ಕಳುಹಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕೆಪಿಎಸ್‌ಸಿ ಮತ್ತು ಸರ್ಕಾರಕ್ಕೆ ಮುಜುಗರ ಉಂಟಾಗದ ರೀತಿಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸುವಂತೆ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರಿಗೆ ಅರಿವು ಮೂಡಿಸಬೇಕು. ವಿವಿಧ ಹುದ್ದೆಗಳಿಗೆ ನಿಯಮಾನುಸಾರ ಆಯ್ಕೆ ಪೂರ್ಣಗೊಳಿಸಲು ಸೂಚನೆ ನೀಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಮೂಲಕ ರಾಜ್ಯಪಾಲರಿಗೆ ಲತಾ ಕುಮಾರಿ ಪತ್ರ ಬರೆದು ಮನವಿ ಮಾಡಿಕೊಂಡಿದ್ದರು.
ಕಳೆದ ವಾರ ಕೆ.ಎಸ್ ಲತಾ ಕುಮಾರಿ ಅವರು ಆಯೋಗದ ಸಭೆ ನಡೆಸಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದ ವಿವಿಧ ಇಲಾಖೆಗಳ ಒಟ್ಟು 666 ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಗೆ ಅನುಮೋದನೆ ಪಡೆದುಕೊಂಡಿದ್ದಾರೆ. ಆಯೋಗದ ಹಿರಿಯ ಸದಸ್ಯ ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ನೇತೃತ್ವದಲ್ಲಿ 4 ಸದಸ್ಯರ ಗುಂಪು ಸಭೆ ನಡೆಸಿತ್ತು. ಇದು ಅಧ್ಯಕ್ಷರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರು, ನಾಲ್ವರು ಸದಸ್ಯರ ಗುಂಪು ಸಭೆ ನಡೆಸಿರುವುದು ಮತ್ತು ನೇಮಕಾತಿ ಪಟ್ಟಿಗೆ ಅನುಮೋದನೆ ನೀಡಿರುವುದು ಕಾನೂನು ಬಾಹಿರ ಎಂದು ಆರೋಪಿಸಿದ್ದಾರೆ.
ಆಯೋಗದ ಆಯ್ಕೆ ಸಮಿತಿ ಸೂಚಿಸಿದ್ದ ಅಭ್ಯರ್ಥಿಯನ್ನು ಕಾನೂನು ಕೋಶದ ಮುಖ್ಯಸ್ಥ ಹುದ್ದೆಗೆ ನೇಮಿಸಿ ತಕ್ಷಣ ಆದೇಶ ಹೊರಡಿಸಬೇಕು ಎಂದು ಅಧ್ಯಕ್ಷರಿಂದ ಒತ್ತಡ ಇತ್ತು ಎಂಬುದು ತಿಳಿದು ಬಂದಿದೆ. ಅದು ಸಾಧ್ಯವಾಗದೇ ಇದ್ದರೆ ರಜೆ ಮೇಲೆ ತೆರಳಬೇಕು’ ಎಂದು ಅಧ್ಯಕ್ಷರು ಮತ್ತು ಸದಸ್ಯರು ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಅವರ ರಜೆಯ ಹಿಂದೆ ಈ ಒತ್ತಡವೇ ಕೆಲಸ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.