ಬೆಂಗಳೂರು, ( www.thenewzmirror.com);
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಶಿವಮೊಗ್ಗ ವಿಭಾಗದಲ್ಲಿ ನಡೆದಿದೆ ಎನ್ನಲಾದ ಲಂಚಾವತಾರದ ವಿರುದ್ಧ ನಿಗಮ ಕ್ರಮ ಕೈಗೊಳ್ಳುವ ಲಕ್ಷಣಗಳೇ ಕಾಣುತ್ತಿಲ್ಲ. ಇತ್ತ ನಿಗಮದ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದ ಕೆಎಸ್ಸಾರ್ಟಿಸಿ ಎಂಡಿ ಮಾತ್ರ ಮೌಬಕ್ಕೆ ಶರಣಾಗಿರೋದು ಹಲವು ಅನುಮಾನ ಮೂಡುವಂತೆ ಮಾಡಿದೆ.
ಶಿವಮೊಗ್ಗ ವಿಭಾಗದ ಸಾಗರ ಘಟಕದಲ್ಲಿ ಡಿಪೋ ಮ್ಯಾನೇಜರ್ ಕಾರ್ಮಿಕ ಸಿಬ್ಬಂದಿಯಿಂದ ಲಂಚ ಪಡೆಯುತ್ತಿರುವ ಕುರಿತಂತೆ ನಿಮ್ಮ ನ್ಯೂಝ್ ಮಿರರ್ ಜನವರಿ 17 2024 ರಂದು ‘ KSRTC ಯಲ್ಲಿ ಮತ್ತೊಂದು ಲಂಚಾವತಾರ..!, ಸಾರಿಗೆ ಸಚಿವರೇ ಈ ಮೌನ ಯಾಕೆ.? ‘ ಹಾಗೂ ಜನವರಿ 20 2024 ರಂದು ‘ KSRTCಯಲ್ಲಿ ನಿಲ್ಲದ ಲಂಚಾವತಾರ.! K.M.P.L ಬರಲಿಲ್ಲ ಅಂದ್ರೂ ಕೊಡಬೇಕಂತೆ ಲಂಚ.!’ ಎನ್ನುವ ಶೀರ್ಷಿಕೆಯಡಿ ವೀಡಿಯೋ ಸಮೇತ ವರದಿ ಪ್ರಕಟಿಸಿತ್ತು.

ವರದಿ ಕುರಿತಂತೆ ಒಂದಷ್ಟು ಮಾಹಿತಿಯನ್ನ ನಿಗಮದ ಗಮನಕ್ಕೂ ತರುವ ಕೆಲಸವನ್ನ ನ್ಯೂಝ್ ಮಿರರ್ ಮಾಡಿತ್ತು. ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು ಅಂತಾನೂ ಮನವಿ ಮಾಡಿತ್ತು. ನಿಗಮದ ವತಿಯಿಂದ ಕ್ರಮ ಕೈಗೊಳ್ಳುವ ಭರವಸೆಯೂ ಸಿಕ್ಕಿತ್ತು. ವರದಿ ಪ್ರಸಾರ ಮಾಡಿ ಹತ್ರತ್ರ ಎರಡು ವಾರಗಳು ಕಳೆಯುತ್ತಾ ಬಂದಿದೆ. ಲಂಚ ಪಡೆದ ಅಧಿಕಾರಿಗಳ ವಿರುದ್ಧ ಏನಾದರೂ ಕ್ರಮ ಆಗಿದೆಯಾ ಎಂದು ತಿಳಿಯಲು ಹೋದಾಗ ಸಿಕ್ಕ ಉತ್ತರ ಇಲ್ಲ ಅನ್ನೋದು ಸ್ಪಷ್ಟವಾಗಿ ತಿಳಿದು ಬಂತು.
ಅಷ್ಟೇ ಅಲ್ಲದೆ ಲಂಚಾವತಾರಕ್ಕೆ ಕುರಿತಾದ ದಾಖಲೆಗಳನ್ನ ನಿಗಮದಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿರೋ ಅಧಿಕಾರಿಗಳು ಎಂಡಿ ಅವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ. ಜನವರಿ 24 ರಂದು ದಿ ನ್ಯೂಝ್ ಮಿರರ್ ನಲ್ಲಿ ಪ್ರಕಟವಾದ ವರದಿ ಹಾಗೂ ಲಂಚ ಪಡೆಯುತ್ತಿರುವ ಕುರಿತಂತೆ ಇದ್ದ ಎಲ್ಲ ದಾಖಲೆಗಳನ್ನ ಕೆಎಸ್ಸಾರ್ಟಿಸಿ ಎಂಡಿ ಅನ್ಬು ಕುಮಾರ್ ಗೆ ಮೇಲ್ ಮಾಡಿದ್ದಾರೆ.
ವಿಭಾಗದ ಕೆಲ ಸಿಬ್ಬಂದಿ ವಾದವೇನು.?
ಶಿವಮೊಗ್ಗ ವಿಭಾಗದ ಸಾಗರ ಘಟಕದ ಡಿಪೋ ಮ್ಯಾನೇಜರ್ ಕಾರ್ಮಿಕ ಸಿಬ್ಬಂದಿಗಳಿಂದ ಲಂಚವನ್ನು ಪಡೆಯುತ್ತಿದ್ದಾರೆ ಎಂದು ಪತ್ರಿಕಾ ವರದಿಗಳು, ಯುಟ್ಯೂಬ್ ಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ, ದಿನಾಂಕ,19/01/2024 ರಂದು ವಿಡಿಯೋ ತುಣುಕುಗಳು ರಾಜ್ಯದಲ್ಲಿ ವೈರಲ್ ಆಗಿದೆ. ಈ ಕುರಿತಂತೆ ಎಂಡಿ ಅವರ ಗಮನಕ್ಕೂ ತರಲಾಗಿದೆ. ಹೀಗಿದ್ದರೂ ಸಾಗರ ಘಟಕದ ಡಿಪೋ ಮ್ಯಾನೇಜರ್ ವಿರುದ್ಧ ಕ್ರಮ ಜರುಗಿಸದೆ ಇರೋದನ್ನ ಗಮನಿಸಿದರೆ ಸಂಸ್ಥೆಯ ಆಡಳಿತ ವರ್ಗವೇ ಅಕ್ರಮದ ಹಿಂದೆ ನಿಂತಿದಿಯಾ ಎಂದು ನೌಕರರ ಸಂಘಟನೆಗಳ ಮುಖಂಡರು ಆರೋಪ ಮಾಡುತ್ತಿದ್ದಾರೆ.
ಸಂಸ್ಥೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಚಾಲನಾ ಸಿಬ್ಬಂದಿಗೆ, ನಿರ್ವಾಹಕರುಗಳಿಗೆ ತನಿಖಾಧಿಕಾರಿಗಳು ಕೇವಲ ಮೆಮೋ ಕೊಟ್ಟ ಕೂಡಲೇ ಅಮಾನತು ಪಡಿಸಿ ತನಿಖೆಗೆ ಆಗ್ರಹ ಮಾಡುತ್ತೀರಿ ಆದರೆ ಇಂಥ ಅಧಿಕಾರಿ ವಿರುದ್ಧ ಯಾಕೆ ಮೌನ ಎಂದು ಅಸಮಧಾನ ಹೊರಹಾಕುತ್ತಿದ್ದಾರೆ ಹೆಸರು ಹೇಳಲು ಇಚ್ಚಿಸದ ಕೆಲ ಸಿಬ್ಬಂದಿ ಬೇಸರ ವ್ಯಕ್ತ ಪಡಿಸ್ತಿದ್ದಾರೆ.
ಸಂಸ್ಥೆಯಲ್ಲಿ ಕಾರ್ಮಿಕ ಸಿಬ್ಬಂದಿಗಳಿಗೆ ಒಂದು ನ್ಯಾಯ ಅಧಿಕಾರಿಗಳಿಗೆ ಒಂದು ನ್ಯಾಯವೇ ಎಂಬಂತೆ ಬಿಂಬಿಸಲಾಗುತ್ತಿದೆ. ಇಲ್ಲಿ ಇಬ್ಬಗೆಯ ನೀತಿಯನ್ನು ಅನುಸರಿಸುತ್ತಿದ್ದಾರೆ. ಸದ್ಯಕ್ಕೆ ಎಂಡಿ ಅಂಗಳದಲ್ಲಿ ಲಂಚಾವತಾರದ ಚೆಂಡು ಬಿದ್ದಿದ್ದು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಯಾಗಿರುವ ಎಂಡಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡ್ಬೇಕು.