ಬೆಂಗಳೂರು, (www.thenewzmirror.com) ;
ಇದು KSRTC ಇತಿಹಾಸದಲ್ಲಿಯೇ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ತಿಂಗಳು., ಹಿಂದೆಂದೂ ಮಾಡಿರದ ಸಾಧನೆಯನ್ನ KSRTC ಪ್ರಸ್ತುತ ವರ್ಷದ ನವೆಂಬರ್ ತಿಂಗಳಿನಲ್ಲಿ ದಾಖಲೆ ಪ್ರಮಾಣದಲ್ಲಿ ಆದಾಯ ನಿಗಮಕ್ಕೆ ಹರಿದು ಬಂದಿದೆ. ಶಕ್ತಿ ಯೋಜನೆ ಜಾರಿಯಾಗಿದ್ದೂ ದಾಖಲೆ ಪ್ರಮಾಣದಲ್ಲಿ ಆದಾಯ ಹರಿದು ಬರಲು ಪ್ರಮುಖ ಕಾರಣ ಅನ್ನೋ ಅಭಿಪ್ರಾಯವೂ ಕೇಳಿ ಬರುತ್ತಿದೆ.
ವಾರದ ಅಂತ್ಯಕ್ಕೆ ದೀಪಾವಳಿ ಹಬ್ಬ ಬಂದಿದ್ದರಿಂದ ನಿರೀಕ್ಷೆಗೂ ಮೀರಿ ಬೆಂಗಳೂರಿನಿಂದ ಬೇರೆ ಬೇರೆ ಊರುಗಳಿಗೆ ಹಬ್ಬ ಆಚರಿಸಲು ತೆರಳಿದ್ದರಿಂದ ಒಂದೇ ದಿನ ಅಂದರೆ ನವೆಂಬರ್ 3 ರಂದು ಒಂದೇ ದಿನ 85,462 ಸೀಟುಗಳನ್ನು ಆನ್‌ಲೈನ್‌ನಲ್ಲಿ ಬುಕಿಂಗ್ ಆಗಿದ್ದು, ₹ 5.59 ಕೋಟಿಆದಾಯ ಹರಿದು ಬಂದಿದೆ. ಇದಕ್ಕೂ ಮೊದಲು ಅಂದರೆ ಅಕ್ಟೋಬರ್ ಅಂತ್ಯದ ದಿನವೊಂದರಲ್ಲೇ 67,033 ಟಿಕೆಟ್ ಮಾರಾಟವಾಗಿದೆ. ಅದೂ ದೀಪಾವಳಿ ಹಬ್ಬದ ಮುನ್ನಾದಿನ ಅನ್ನೋದು ಮತ್ತೊಂದು ವಿಶೇಷ. KSRTC ಆನ್ ಲೈನ್ ನಲ್ಲಿ ಟಿಕೆಟ್ ಬುಕಿಂಗ್ (AWATAR) ನಲ್ಲಿ ಟಿಕೆಟ್ ಬುಕಿಂಗ್ ಗೆ ಅವಕಾಶ ಕಲ್ಪಿಸಲಾಗಿತ್ತು. 2006 ರಲ್ಲಿ ಆರಂಭವಾದ ಈ ಸೇವೆಯಲ್ಲಿ 2024ರ ದೀಪಾವಳಿ ಹಬ್ಬದ ಮುನ್ನಾದಿನ ಅತ್ಯಧಿಕ ದೈನಂದಿನ ಮಾರಾಟವಾಗಿದೆ. KSRTC ಮೂಲಗಳ ಪ್ರಕಾರ ಒಂದೇ ದಿನ 67,033 ಟಿಕೆಟ್ ಮಾರಾಟದಿಂದ ₹4.63 ಕೋಟಿ ಆದಾಯ ನಿಗಮಕ್ಕೆ ಹರಿದು ಬಂದಿತ್ತು. ನವೆಂಬರ್ 3 ರ ಆದಾಯ ಇದೀಗ ದಾಖಲೆ ಅಂತ ನಿಗಮ ಹೇಳುತ್ತಿದೆ.
KSRTC ಆದಾಯಕ್ಕೆ ಸಾಥ್ ಕೊಟ್ಟಿದ್ದ BMTC..!
KSRTCಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ದಾಖಲೆ ಪ್ರಮಾಣದಲ್ಲಿ ಆದಾಯ ಹರಿದು ಬಂದಿದೆ. ಇದಕ್ಕೆ KSRTC ಆದಾಯಕ್ಕೆ BMTC ನೂ ಸಾಥ್ ಕೊಟ್ಟಿದೆ. BMTC ಡಿಪೋ 2ರ ಬಸ್ ಗಳನ್ನೂ KSRTC ರೂಟ್ ಗೆ ಕಳುಹಿಸಲಾಗಿತ್ತು. ಇದರ ಪರಿಣಾಮವಾಗಿ ನಿಗಮದ ಆದಾಯ ಹೆಚ್ಚಾಗುವಲ್ಲಿ BMTC ಕಾಣಿಕೆನೂ ಇದೆ. ನವೆಂಬರ್ 4 ರಂದು ಒಂದೇ ದಿನ 39.38 ಲಕ್ಷ ಆದಾಯ ಗಳಿಸಿದೆ. KSRTCಯ ಡಿಪೋಗಳ ಆದಾಯಕ್ಕೆ ಸರಿಹೊಂದುವ ರೀತಿಯಲ್ಲಿ BMTCಯ ಡಿಪೋ 2 ಹಾಗೂ ಅಲ್ಲಿನ ಸಿಬ್ಬಂದಿ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ. ಆ ಮೂಲಕ ಆದಾಯ ಸಂಗ್ರಹಣೆಯಲ್ಲಿ ಹೊಸ ದಾಖಲೆ ನಿರ್ಮಿಸಿದ ಖ್ಯಾತಿಗೂ ಡಿಪೋ ಒಳಗಾಗಿದೆ.
2019 ರಲ್ಲಿ ದಾಖಲೆ ಆದಾಯ ಗಳಿಸಿದ್ದ KSRTC !
ಇದಕ್ಕೂ ಮೊದಲು ಅಂದರೆ 2019 ರಲ್ಲಿ KSRTC ದಾಖಲೆ ಪ್ರಮಾಣದ ಆದಾಯ ಗಳಿಸಿತ್ತು. ಬೆಂಗಳೂರಿನಿಂದ ದಾವಣಗೆರೆ, ಮೈಸೂರು, ಹುಬ್ಬಳ್ಳಿ, ತಿರುಪತಿ, ಶಿವಮೊಗ್ಗ ಮತ್ತು ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳಿಗೆದಸರಾ ಹಬ್ಬದ ಪ್ರಯುಕ್ತ ಅಂದು ಹೆಚ್ಚುವರಿ ಸೇವೆ ನೀಡಲಾಗಿತ್ತು. ಈ ವೇಳೆ 61,093 ಆನ್‌ಲೈನ್ ಬುಕಿಂಗ್ ಆಗಿದ್ದು ಇದೂವರೆಗಿನ ದಾಖಲೆಯಾಗಿತ್ತು. ಆದ್ರೆ ಈ ಬಾರಿ ಆ ಎಲ್ಲ ದಾಖಲೆಗಳೂ ಮೀರಿವೆ.
KSRTC ನೌಕರರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಿಂದ ಅಭಿನಂದನೆ ಸಲ್ಲಿಕೆ !
ದೀಪಾವಳಿ ಹಬ್ಬದ ಪ್ರಯುಕ್ತ ಅಕ್ಟೋಬರ್ 30 ರಿಂದ ನವೆಂಬರ್ 4 ರ ವರೆಗೆ ಅಂದರೆ 6 ದಿನಗಳ ಕಾಲ ಹಗಲು ರಾತ್ರಿ ಎನ್ನದೇ ಶ್ರಮಿಸಿದ ಸಿಬ್ಬಂದಿಗೆ ಇದೀಗ ಮೆಚ್ಚುಗೆಯ ಮಾತುಗಳು ವ್ಯಕ್ತವಾಗ್ತಿವೆ. ಆರು ದಿನಗಳ ಕಾಲ 24*7 ಸೇವೆ ಸಲ್ಲಿಸಿ ಪ್ರಯಾಣಿಕರನ್ನ ಸುರಕ್ಷತಾ ಸ್ಥಳಗಳಿಗೆ ತಲುಪಿಸಿದ ಚಾಲಕ ಹಾಗೂ ನಿರ್ವಾಹಕರಿಗೆ KSRTC ನೌಕರರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಭಿನಂದನೆ ಸಲ್ಲಿಸಿದೆ.
BMTCಯಲ್ಲಿ ಕೆಲಸ ಮಾಡುತ್ತಿದ್ದರೂ ಪ್ರಯಾಣಿಕರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ KSRTCಯ ಸಾಧನೆಯಲ್ಲಿ ಕೈ ಜೋಡಿಸಿದ್ದಕ್ಕೆ ಸೊಸೈಟಿ ನಿರ್ದೇಶಕ ಯೊಗೇಶ್ ಗೌಡ ಅಭಿನಂದನೆ ಸಲ್ಲಿಸಿದ್ದಾರೆ. ದಿ ನ್ಯೂಝ್ ಮಿರರ್ ಜತೆ ಮಾತನಾಡಿ, ಚಾಲಕ ಹಾಗೂ ನಿರ್ವಾಹಕರು ತಮ್ಮ ಕುಟುಂಬದವರೊಂದಿಗೆ ದೀಪಾವಳಿ ಹಬ್ಬ ಆಚರಿಸದೇ, ಸಾರ್ವಜನಿಕ ಪ್ರಯಾಣಿಕರ ಸೇವೆಗೆ ನಿಂತಿರುವುದು ಇತರ ಇಲಾಖೆಗೆ ಮಾದರಿಯಂತಾಗಿದೆ. 6 ದಿನಗಳ ಕಾಲ ಸಾವಿರಾರು ಕಿ ಮೀ ವಾಹನ ಚಾಲನೆ ಮಾಡಿದರೂ ಒಂದು ಸಣ್ಣ ಅಪಘಾತವಾಗದಂತೆ ಎಚ್ಚರಿಕೆ ಹಾಗೂ ಜವಾಬ್ದಾರಿಯಿಂದ ವಾಹನ ಚಾಲನೆ ಮಾಡಿ, ಪ್ರಯಾಣಿಕರನ್ನ ಸುರಕ್ಷಿತವಾಗಿ ಅವರವರ ಮನೆಗಳಿಗೆ ತಲುಪಿಸಿದ ನನ್ನ ಪ್ರೀತಿಯ ಚಾಲಕರಿಗೆ ಧನ್ಯವಾದ ತಿಳಸಿದ್ದಾರೆ.
ಶಕ್ತಿ ಯೋಜನೆಯಿಂದಾಗಿ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಒತ್ತಡದ ನಡುವೆ ಯಾವುದೇ ದೂರುಗಳಿಗೆ ಅವಕಾಶ ನೀಡದೇ 39 ಲಕ್ಷಕ್ಕೂ ಹೆಚ್ಚು ಸಾರಿಗೆ ಆದಾಯ ಸಂಗ್ರಹಣೆ ಮಾಡಿದ ಪ್ರೀತಿಯ ನಿರ್ವಾಹಕರುಗಳಿಗೆ ಪ್ರಣಾಮ ಸಲ್ಲಿಸಿದ್ದಾರೆ. ಇದರ ಜತೆಗೆ ಈ ಸಾಧನೆಗೆ ಕಾರಣಕರ್ತರಾದ ಘಟಕದ ತಾಂತ್ರಿಕ ಸಿಬ್ಬಂದಿ, ಸೇರಿದಂತೆ ನಿಗಮದ ಎಲ್ಲ ಅಧಿಕಾರಿಗಳಿಗೂ ಧನ್ಯವಾದ ಹೇಳಿದ್ದಾರೆ.
ಸಚಿವರಿಂದ ಸಿಗುತ್ತಾ ಪ್ರಶಂಸೆ..!
ದೀಪಾವಳಿ ಹಬ್ಬದ ಸಮಯದಲ್ಲಿ ತಮ್ಮ ಸಂತಸವನ್ನ ಪಕ್ಕಕ್ಕಿಟ್ಟು ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಿದ KSRTC ಹಾಗೂ BMTC ಸಿಬ್ಬಂದಿಗೆ ಸಚಿವರಿಂದ ಪ್ರಶಂಸೆ ಸಿಗುತ್ತಾ ಎನ್ನುವ ಪ್ರಶ್ನೆ ಉದ್ಬವವಾಗಿದೆ. ಸದಾ ಸಿಬ್ಬಂದಿ ಹಿತ ಕಾಪಾಡುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇದೀಗ ಸಿಬ್ಬಂದಿಗೆ ಇನ್ನಷ್ಟು ಹುರುಪು ತುಂಬುವ ಕೆಲಸ ಮಾಡಬೇಕಾಗಿದೆ.