ಬೆಳಗಾವಿ/ಬೆಂಗಳೂರು,(www.thenewzmirror.com);
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಹೋರಾಟ ಮಾಡಲು ನಿರ್ಧಾರ ಮಾಡಿದ್ದ ಹೋರಾಟಗಾರರಿಗೆ ರಾಜ್ಯ ಸರ್ಕಾರ ಸದ್ದಿಲ್ಲದೇ ಶಾಕ್ ಕೊಟ್ಟಿದೆ. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಹಿನ್ನಲೆಯಲ್ಲಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಡಿಸೆಂಬರ್ 12 ಅಂದರೆ ನಾಳೆ ತೀರ್ಮಾನ ಮಾಡಲಾಗಿತ್ತು. ಆದ್ರೆ ಆ ಹೋರಾಟವನ್ನ ರಾಜ್ಯ ಸರ್ಕಾರ ಹತ್ತಿಕ್ಕುವ ಪ್ರಯತ್ನ ಮಾಡಿದೆ.
ಬಸವ ಜಯಮೃತ್ಯುಂಜಯಶ್ರೀಗಳ ನೇತೃತ್ವದಲ್ಲಿ 2ಎ ಮೀಸಲಾತಿಗಾಗಿ ಆಗ್ರಹಿಸಿ ಡಿಸೆಂಬರ್ 10 ರಂದು ಸುವರ್ಣಸೌಧಕ್ಕೆ ಟ್ರ್ಯಾಕ್ಟರ್ ಮೂಲಕ ಮುತ್ತಿಗೆ ಹಾಕಲು ತೀರ್ಮಾನ ಮಾಡಲಾಗಿತ್ತು. ಆದರೆ ಇದೀಗ ಡಿಸೆಂಬರ್ 9, 10ರಂದು ಹೋರಾಟದ ವಾಹನ ಬೆಳಗಾವಿ ಪ್ರವೇಶಕ್ಕೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಹಾಗೆನೇ ಹೋರಾಟಕ್ಕೆ ಬರುವ ಟ್ರ್ಯಾಕ್ಟರ್, ಕ್ರೂಸರ್ ವಾಹನಗಳಿಗೆ ನಿರ್ಬಂಧ ಹೇರಿ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಈ ಕುರಿತು ಮಾತನಾಡಿ ಅಸಮಾಧಾನ ವ್ಯಕ್ತಪಡಿಸಿರುವ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹೋರಾಟವನ್ನು ಹತ್ತಿಕ್ಕುವ ದುಸ್ಸಾಹಸಕ್ಕೆ ಸರ್ಕಾರ ಕೈ ಹಾಕಬಾರದು. ಪಂಚಮಸಾಲಿ 2A ಮೀಸಲಾತಿಗಾಗಿ ಆಗ್ರಹಿಸಿ ನಾಳೆ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ಆದರೆ ಹೋರಾಟದಲ್ಲಿ ಟ್ರ್ಯಾಕ್ಟರ್, ಕ್ರೂಸರ್ ವಾಹನ ನಿಷೇಧ ಹೇರಿ ಬೆಳಗಾವಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ನಮ್ಮ ಹೋರಾಟ ಹತ್ತಿಕ್ಕುವ ಯತ್ನ ಮಾಡಬಾರದು ಎಂದು ಕಿಡಿಕಾರಿದರು. ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ನಾನು ಯಾವತ್ತಿದ್ದರೂ ಹೋರಾಟದ ಪರ ನಿಲ್ಲುತ್ತೇನೆ. ಹೋರಾಟಗಳಿಗೆ ನಿರ್ಬಂಧ ವಿಧಿಸಿದ್ದು, ಸರಿಯಲ್ಲ, ಈ ಹೋರಾಟದಲ್ಲಿ ನಾನು ಮುಂಚೂಣಿಯಲ್ಲಿ ನಿಲ್ಲುತ್ತೇನೆ ಅಂತ ತಿಳಿಸಿದ್ದಾರೆ.