ಬೆಂಗಳೂರು, (www.thenewzmirror.com) ;
18ನೇ ಲೋಕಸಭೆಯ ನೂತನ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆಯಾಗಿದ್ದಾರೆ. ಮೂರನೇ ಭಾರಿಗೆ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರ್ಕಾರದ ಅಧಿಕಾರ ಹಿಡಿದ ಬೆನ್ನಲ್ಲೆ ಬಿಜೆಪಿ ಸಂಸದರಾಗಿರುವ ಬಿರ್ಲಾ ಆಯ್ಕೆಯಾಗಿದ್ದು, ಎನ್ ಡಿಎ ಮೈತ್ರಿ ಕೂಟಕ್ಕೆ ಮೊದಲ ಅಗ್ನಿ ಪರೀಕ್ಷೆಯಲ್ಲೇ ಜಯ ಸಿಕ್ಕಿದ್ದು, ಇಂಡಿ ಕೂಟದ ಮೊದಲ ಪ್ರಯತ್ನದಲ್ಲೇ ಹಿನ್ನಡೆಯಾಗಿದೆ.

ಓಂ ಬಿರ್ಲಾ ಈ ಹಿಂದೆ ಅಂದರೆ 2019 ರಿಂದ 2024 ರವರೆಗೆ ಲೋಕಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದು, ಇದೀಗ ಮುಂದಿನ 2029ರವರೆಗೆ ಮತ್ತೆ ಎರಡನೇ ಅವಧಿಗೆ ಸ್ಪೀಕರ್ ಆಗಿ ಆಯ್ಕೆಯಾದಂತಾಗಿದೆ. ಬಿರ್ಲಾ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾವನೆಯನ್ನು ಮಂಡಿಸಿದ್ದರು. ಇದಕ್ಕೆ ಬಿಜೆಪಿಯ ಹಿರಿಯ ನಾಯಕರು ಮತ್ತು ಅದರ ಮಿತ್ರಪಕ್ಷಗಳಾದ ಟಿಡಿಪಿ, ಜೆಡಿಯು, ಏಕನಾಥ್ ಶಿಂಧೆ ಅವರ ಶಿವಸೇನೆ ಮತ್ತು ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ ಯ ಸಂಸದರು ಅನುಮೋದಿಸಿದರು.
1976ರ ನಂತರ ಮೊದಲ ಲೋಕಸಭಾ ಸ್ಪೀಕರ್ ಚುನಾವಣೆಗೆ ಸಂಸತ್ ಭವನ ಸಾಕ್ಷಿಯಾಗಿತ್ತು. ಲೋಕಸಭೆಯ ಹೊಸ ಸ್ಪೀಕರ್ ಆದ ನಂತರ ಓಂ ಬಿರ್ಲಾ ಅವರು ತಮ್ಮ ಆಸನ ಸ್ವೀಕರಿಸಿದರು. ಈ ವೇಳೆ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಉಪಸ್ಥಿತರಿದ್ದರು.
ಲೋಕಸಭೆಯಲ್ಲಿ ಬಲರಾಮ್ ಜಾಖರ್ (1980-89) ನಂತರ ಎರಡು ಪೂರ್ಣ ಅವಧಿಯಲ್ಲಿ ಸ್ಪೀಕರ್ ಹುದ್ದೆಯನ್ನ ಅಲಂಕರಿಸಿದ ಎರಡನೇ ಸ್ಪೀಕರ್ ಆಗಿ ಓಂ ಬಿರ್ಲಾ ಆಗಿದ್ದಾರೆ. ಲೋಕಸಭೆಯ ಎರಡನೇ ಸ್ಪೀಕರ್ ಎಂಎ ಅಯ್ಯಂಗಾರ್ ಮತ್ತು ಗುರುಡಿಯಾಲ್ ಸಿಂಗ್ ಧಿಲ್ಲೋನ್ ಅವರು ಎರಡು ಬಾರಿ ಹುದ್ದೆಯನ್ನು ಅಲಂಕರಿಸಿದ್ದರು. ಆದರೆ ಇಬ್ಬರೂ ನಾಯಕರ ಎರಡನೇ ಅವಧಿಯು ಒಂದೂವರೆ ವರ್ಷಕ್ಕಿಂತ ಹೆಚ್ಚು ಕಾಲ ಉಳಿದಿರಲಿಲ್ಲ.