ಬೆಂಗಳೂರು, (www.thenewzmirror.com) ;
ವಿಜಯದಶಮಿ-ಆಯುಧ ಪೂಜೆ ಹಿನ್ನೆಲೆಯಲ್ಲಿ ಯಂತ್ರಗಳನ್ನ ವಾಹನಗಳನ್ನ ಪೂಜೆ ಮಾಡುವುದು ವಾಡಿಕೆ. ಈಗಿನ ದುಬಾರಿ ದುನಿಯಾದಲ್ಲಿ ಎಷ್ಟು ದುಡ್ಡಿದ್ದರೂ ಸಾಕಾಗೋದಿಲ್ಲ. ಅಂದುಕೊಂಡ ಮಟ್ಟಿಗೆ ಅಲಂಕಾರ ಮಾಡೋಕೆ ಆಗೋದೇ ಇಲ್ಲ. ಹೀಗಿರುವಾಗ KSRTC ಡಿಪೋಗಳಲ್ಲಿ ವಾಹನಗಳು ಹಾಗೂ ಯಂತ್ರೋಪರಕಣಗಳ ಪೂಜೆಗೆ ಅನುಮತಿ ನೀಡಲಾಗಿದೆ. ಈ ದುಬಾರಿ ದುನಿಯಾದಲ್ಲಿ ಪ್ರತಿ ಬಸ್‌ಗೆ ಪೂಜೆಗಾಗಿ ಕೇವಲ 100 ರೂ. ಬಿಡುಗಡೆ ಮಾಡಿದ್ದು, ಸಿಬ್ಬಂದಿ ಅಸಮಧಾನಕ್ಕೆ ಕಾರಣವಾಗಿದೆ.
ಈಗಾಗಲೇ ಶಕ್ತಿ ಯೋಜನೆಯಿಂದ ರಾಜ್ಯದ ನಾಲ್ಕೂ ನಿಗಮಗಳಿಗೆ ಹೆಚ್ಚಿನ ಆದಾಯ ಬರುತ್ತಿದೆ. ವರ್ಷಕ್ಕೊಮ್ಮೆ ಬರುವ ಆಯುಧ ಪೂಜೆಗೆ ಕೇವಲ ನೂರು ರೂಪಾಯಿ ಕೊಟ್ಟಿರುವುದು ಎಷ್ಟು ಸರಿ ಅಂತ ಸಿಬ್ಬಂದಿ ಪ್ರಶ್ನೆ ಮಾಡ್ತಿದ್ದಾರೆ.
KSRTC ಹೊರಡಿಸಿರುವ ಸುತ್ತೋಲೆ ಪ್ರಕಾರ ನಿಗಮದ ಎಲ್ಲ ವಾಹನಗಳು ಹಾಗೂ ಯಂತ್ರೋಪಕರಣಗಳಿಗೆ ಆಯುಧ ಪೂಜೆ ಮಾಡುವ ಸಂಬಂಧ ಅನುಮತಿ ನೀಡಲಾಗಿದ್ದು, ಪ್ರತಿ ಪ್ರಯಾಣಿಕ ಹಾಗೂ ಇಲಾಖಾ ವಾಹನಕ್ಕೆ 100 ರೂಪಾಯಿ, ಪ್ರತಿ ವಿಭಾಗೀಯ ಕಾರ್ಯಾಗಾರಕ್ಕೆ 1000 ರೂಪಾಯಿ, ಪ್ರತಿ ಪ್ರಾದೇಶಿಕ ಕಾರ್ಯಾಗಾರಕ್ಕೆ 5000 ರೂಪಾಯಿ ಬಿಡುಗಡೆ ಮಾಡಲಾಗಿದೆ.
ಮುಂಗಡ ಹಣ ಪಡೆದು ವಾಹನ ಹಾಗೂ ಯಂತ್ರೋಪಕರಣಗಳನ್ನ ಸ್ವಚ್ಚಗೊಳಿಸಿ ಪೂಜಾ ಕೈಂಕರ್ಯ ನೆರವೇರಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ.
ಹಬ್ಬದ ಸಮಯದಲ್ಲಿ ಹೂವುಗಳ ಬೆಲೆಯೇ 100 ರೂಪಾಯಿ ದಾಟಿರುತ್ತೆ. ಅಂತಹದರಲ್ಲಿ ಪೂಜೆಗೆ 100ರೂ. ಯಾರಿಗೆ ಸಾಲುತ್ತೆ ಎಂಬ ಪ್ರಶ್ನೆ ಕಾಡ ತೊಡಗಿದೆ. ಅವರು ಕೊಡುವ ನೂರು ರೂಪಾಯಿಯಿಂದ ಎರಡು ಬಾಳೆಕಂದು ಕೂಡಾ ಬರುವುದಿಲ್ಲ ಎಂದು ಕೆಲ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.