ಬೆಂಗಳೂರು, (www.thenewzmirror.com) ;
ಕಳೆದ ಎರಡು ಬಾರಿ ಲೋಕಸಭೆಯಲ್ಲಿ ಪ್ರತಿಪಕ್ಷ ಸ್ಥಾನ ಕಳೆದುಕೊಂಡಿದ್ದ ಕಾಂಗ್ರೆಸ್ ಇಂಡಿ ಮೈತ್ರಿ ಕೂಟ ರಚನೆ ಮಾಡಿ ಈ ಬಾರಿ 99 ಸ್ಥಾನಗಳನ್ನ ಗೆದ್ದು ಪ್ರತಿಪಕ್ಷದ ಸ್ಥಾನ ಪಡೆದುಕೊಂಡು ರಾಹುಲ್ ಗಾಂಧಿ ಅವರನ್ನ ಲೋಕಸಭೆ ವಿಪಕ್ಷ ನಾಯಕ ಅಂತ ಘೋಷಣೆ ಮಾಡಿಯಾಗಿದೆ. ಆದರೆ ಅದು ಹೆಚ್ಚುನ ದಿನ ಉಳಿಯೋ ಲಕ್ಷಣ ಕಾಣಿಸುತ್ತಿಲ್ಲ. ಇದಕ್ಕೆ ಕಾರಣ ಚುನಾವಣೆ ಸಂಧರ್ಭದಲ್ಲಿ ಕಾಂಗ್ರೆಸ್ ಕೊಟ್ಟ ಪ್ರನಾಳಿಕೆ..!
ಹೌದು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಘರ್ ಘರ್ ಗ್ಯಾರೆಂಟಿ ಭರವಸೆಗಳು ಕಾನೂನಿನ ಪ್ರಕಾರ ಲಂಚದ ಆಮಿಷವಾಗಿದ್ದು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವ 99 ಸಂಸದರನ್ನು ಅನರ್ಹಗೊಳಿಸಬೇಕೆಂದು ಅಲಹಾಬಾದ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿದೆ.
![](https://thenewzmirror.com/wp-content/uploads/2024/08/1001318509-1024x574.jpg)
ಪಿಐಎಲ್‌ನಲ್ಲಿ ಚುನಾವಣಾ ಆಯೋಗದ ವಿರುದ್ಧವೂ ನಿರ್ದೇಶನಕ್ಕೆ ಮನವಿ ಮಾಡಲಾಗಿದ್ದು, ಕಾಂಗ್ರೆಸ್‌ನ ಗ್ಯಾರೆಂಟಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಯೋಗದ ವಿರುದ್ಧ ಆರೋಪಿಸಲಾಗಿದೆ.
ಈ ವರ್ಷ ಮೇ. 02 ರಂದು ಆಯೋಗ, ಈ ರೀತಿಯ ಭರವಸೆಗಳನ್ನು ನೀಡುವುದರ ವಿರುದ್ಧ ಎಲ್ಲಾ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿತ್ತಾದರೂ, ಕಾಂಗ್ರೆಸ್ ಪಕ್ಷ ನಿಯಮಗಳನ್ನು ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ನ್ಯಾಯಸಮ್ಮತತೆಯನ್ನು ರಾಜಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಗ್ಯಾರೆಂಟಿ ಕಾರ್ಡ್‌ಗಳ ವಿತರಣೆಯಲ್ಲಿ ತೊಡಗಿತ್ತು ಎಂದು ಪಿಐಎಲ್ ನಲ್ಲಿ ಆರೋಪಿಸಿದೆ.
ಪಿಐಎಲ್ ಪ್ರಕಾರ, ‘ಘರ್ ಘರ್ ಖಾತರಿ ಯೋಜನೆ’ಯು ಮತಗಳಿಗಾಗಿ ವಿವಿಧ ಆರ್ಥಿಕ ಮತ್ತು ವಸ್ತು ಪ್ರಯೋಜನಗಳನ್ನು ಭರವಸೆ ನೀಡುವ ಗ್ಯಾರಂಟಿ ಕಾರ್ಡ್‌ಗಳ ವಿತರಣೆಯನ್ನು ಒಳಗೊಂಡಿತ್ತು. ಈ ರೀತಿಯ ಭರವಸೆ 1951 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 123 (1) (ಎ) ಅಡಿಯಲ್ಲಿ ಲಂಚಕ್ಕೆ ಸಮಾನವಾಗಿದೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 171ಬಿ ಮತ್ತು 171ಇ ಅಡಿಯಲ್ಲಿ ಶಿಕ್ಷಾರ್ಹವಾಗಿದೆ ಎಂದು ಪಿಐಎಲ್ ಸಲ್ಲಿಸಿರುವವರು ವಾದಿಸಿದ್ದಾರೆ.
ಹಾಗಾಗಿ ಈ ವರ್ಷದ ಚುನಾವಣೆಯಲ್ಲಿ ಚುನಾಯಿತರಾದ ಎಲ್ಲಾ 99 ಕಾಂಗ್ರೆಸ್ ಸಂಸದರನ್ನು ಅಸ್ತಿತ್ವದಲ್ಲಿರುವ ಕಾನೂನಿನ ಪ್ರಕಾರ ಅನರ್ಹರೆಂದು ಘೋಷಿಸಬೇಕು ಎಂದು ಪಿಐಎಲ್ ಮನವಿ ಮಾಡಿದೆ.