ಬೆಂಗಳೂರು, (www.thenewzmirror.com) ;
ಬಿಬಿಎಂಪಿ ಇತಿಹಾಸದಲ್ಲೇ ಇಂಥದೊಂದು ಗಂಭೀರ ಆರೋಪ ಬಿಬಿಎಂಪಿ ಕಂದಾಯ ನಿರೀಕ್ಷಕ ಅಧಿಕಾರಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಅಧಿಕಾರಿ ನಡೆ ವಿರುದ್ಧ ಬಿಬಿಎಂಪಿ ಮುಖ್ಯ ಆಯುಕ್ತರ ಕಚೇರಿ ಮುಂಭಾಗ RTI ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸಿದರು.
ಉತ್ತರಹಳ್ಳಿ ಬಳಿ ಅಕ್ರಮ ಖಾತೆ ಮಾಡಿ ನಿರ್ಮಿಸಿಲಾಗುತ್ತಿರುವ ಲೇಔಟ್ ಕುರಿತು RTI ಅರ್ಜಿದಾರರೊಬ್ಬರು ಅರ್ಜಿ ಸಲ್ಲಿಸಿದ್ದರು. ಆದರೆ ಮಾಹಿತಿ ನೀಡಬೇಕಿದ್ದ RI ( ಕಂದಾಯ ನಿರೀಕ್ಣಕ) ಅರ್ಜಿ ಹಾಕಿದ ಹೋರಾಟಗಾರರಿಗೆ ಜೀವ ಬೆದರಿಕೆ ಹಾಕಿದ್ದಾರಂತೆ. ಇದನ್ನ ವಿರೋಧಿಸಿ ಪ್ರಜಾ ನ್ಯಾಯ ವೇದಿಕೆ ಹೋರಾಟಗಾರರು ಬಿಬಿಎಂಪಿ ಮುಖ್ಯ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸಿದರು.
ಉತ್ತರಹಳ್ಳಿ ಹೋಬಳಿಯ ವಸಂತಪುರ ಗ್ರಾಮದ ಸರ್ವೇ ನಂ 15/2, 15/3, 16ರಲ್ಲಿ 5 ಎಕರೆ 22 ಗುಂಟೆ ಜಮೀನಿನಲ್ಲಿ ಕರ್ನಾಟಕ ಕಂಟ್ರಿ ಅಂಡ್ ಟೌನ್ ಪ್ಲಾನಿಂಗ್ ಆಕ್ಟ್ 1961ರ ಅನ್ವಯ ಅನುಮತಿ ಪಡೆಯದೇ ಲೇಔಟ್ ನಿರ್ಮಿಸುತ್ತಿದ್ದಾರೆ. ಅಕ್ರಮ ಎಂದು ತಿಳಿದಿದ್ದರೂ ಉತ್ತರಹಳ್ಳಿ ಉಪ ವಿಭಾಗದ ಕಂದಾಯ ನಿರೀಕ್ಷಕ ಅಧಿಕಾರಿ ಲಂಚ ಪಡೆದು 93 ನಿವೇಶನಗಳಿಗೆ ಎ ಖಾತೆ ನೀಡಿದ್ದಾರಂತೆ. ಈ ಕುರಿತು ಆರ್‌ಟಿಐ ಕಾರ್ಯಕರ್ತ ಬಿ.ಎಚ್ ವಿರೇಶ್ ಮಾಹಿತಿ ಒದಗಿಸುವಂತೆ ಕಳೆದ ಏಪ್ರಿಲ್‌ನಲ್ಲಿ ಅರ್ಜಿ ಸಹ ಸಲ್ಲಿಸಿದ್ದರು.
ಬಿಬಿಎಂಪಿಯ ವಸಂತನಗರ ಗ್ರಾಮದ ಸರ್ವೆ ನಂ. 15/2, 15/3 ಮತ್ತು 16ರಲ್ಲಿನ 5 ಎಕರೆ 22 ಗುಂಟೆ (22459 ಚದರ ಮೀಟರ್) ವಿಸ್ತೀರ್ಣದ ಪ್ರದೇಶಕ್ಕೆ ಶ್ರೀ. ರಮೇಶ್ ಬಿ.ಕೆ. ಶ್ರೀಮತಿ ಮಮತ ರವಿಕುಮಾರ್ ಮತ್ತು ಶ್ರೀಮತಿ ರೇಷ್ಮಾ ಸುಪ್ರೀತ್ ರವರ ಪರವಾಗಿ ಜಿಪಿಎ ದಾರರಾದ ಮೆ. ಎಂ.ಆರ್. ಇನ್ ಪ್ರಾ ರವರು ರಚಿಸಿರುವ ಅನಧಿಕೃತ ವಸತಿ ಬಡಾವಣೆಯಲ್ಲಿ 93 ವಸತಿನಿವೇಶನಗಳನ್ನು ಪ್ರತಿ ಚ.ಮೀ. ರೂ. 250 ರಂತೆ ಸುಧಾರಣಾ ವೆಚ್ಚವನ್ನು ಪಾವತಿಸಿಕೊಂಡು “ಎ” ಖಾತಾಗಳನ್ನು ಅನಧಿಕೃತವಾಗಿ ತೆರೆಯಲಾಗಿದೆ.
ಈ ಜಮೀನು ಭೂ ಪರಿವರ್ತನೆಗೊಂಡಿದ್ದರು ಕರ್ನಾಟಕ ಕಂಟ್ರಿ ಮತ್ತು ಟೌನ್ ಪ್ಲಾನಿಂಗ್ ಆಕ್ಟ 1961 ರಂತೆ ಬಿ.ಡಿ.ಎ.ನಿಂದ ನಕ್ಷೆ ಮಂಜೂರಾತಿ ಪಡೆಯುವುದು, ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಅಥಾರಿಟಿಯಲ್ಲಿ ನೊಂದಾಯಿಸುವುದೂ ಕೂಡ ಕಡ್ಡಾಯವಾಗಿರುತ್ತದೆ. ಇವೆರಡು ಕಾನೂನನ್ನ ಪಾಲಿಸದೆ ನಿವೇಶನಗಳನ್ನು ರಚಿಸುವುದು ಮತ್ತು ಖಾತಾ ವಿಂಗಡಣೆ ಮಾಡುವಂತಿಲ್ಲ. ಹೀಗಿದ್ದರೂ ಬಿಬಿಎಂಪಿ ಬೊಮನಹಳ್ಳಿ ವಲಯದ ಉಪ ಆಯುಕ್ತೆ ಶಶಿಕಲಾ, ಉಪ ಕಂದಾಯ ಅಧಿಕಾರಿ ನಾಗವೇಣಿ, ಉತ್ತರಹಳ್ಳಿ ಉಪವಿಭಾಗದ ಕಂದಾಯ ಅಧಿಕಾರಿ ವೆಂಕಟೇಶ್ ಸೇರಿಕೊಂಡು ಅನಧಿಕೃತವಾಗಿ 93 ನಿವೇಶನಗಳಿಗೆ ಎ ಖಾತಾ ನೀಡಿದ್ದಾರಂತೆ.ಇದರ ಜತೆಗೆ ಸಿ.ಎ.ನಿವೇಶನ, ಉದ್ಯಾನವನ, ಮತ್ತು ರಸ್ತೆಗಳಿಗಾಗಿ ಸುಮಾರು ಹತ್ತುಸಾವಿರ ಚದರಮೀಟರ್ ಗಳಷ್ಟು ಜಾಗವನ್ನು ಬಿಬಿಎಂಪಿ ಗೆ ಪರಿತ್ಯಾಜನಾ ಪತ್ರದ ಮೂಲಕ ಹಸ್ತಾಂತರಿಸದೆ ಇರುವುದರಿಂದ ಸರ್ಕಾರಕ್ಕೆ ಸುಮಾರು ನೂರು ಕೋಟಿ ಆದಾಯ ಖೋತಾ ಆದಂತಾಗಿದೆ ಎನ್ನುವುದು ಸಾಮಾಜಿಕ ಕಾರ್ಯಕರ್ತರ ಆರೋಪ.
ಈ ಅನಧಿಕೃತ ಬಡಾವಣೆಯ ಪಾಲುದಾರರು ಉತ್ತರಹಳ್ಳಿ ಶಾಸಕ ಎಂ. ಕೃಷ್ಣಪ್ಪ ಅವರ ಮಗಳು ಮತ್ತು ಅಳಿಯ ಎಂದು ತಿಳಿದುಬಂದಿದೆ ಅನ್ನುವುದು ಮಾಹಿತಿ ಹಕ್ಕು ಹೋರಾಟಗಾರರ ಮತ್ತೊಂದು ಗಂಭೀರ ಆರೋಪ.
ಯಾವಾಗ RTI ಕಾರ್ಯಕರ್ತರು ಅರ್ಜಿ ಸಲ್ಲಿಸಿದ ವಿಚಾರ ತಿಳಿಯಿತೋ ಆಗ ಕಂದಾಯ ನಿರೀಕ್ಷಕ ವೆಂಕಟೇಶ್, ಜೀವ ಬೆದರಿಕೆ ಹಾಕಿದ್ದಾರಂತೆ. ಹೀಗಂತ ಆರೋಪಿಸಿ RTI ಆಕ್ಟಿವಿಸ್ಟ್ ಗಳು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾನೂನುಬಾಹಿರವಾಗಿ ಎ ಖಾತೆ ಮಾಡಿಕೊಡಲು ವೆಂಕಟೇಶ್ ಲಂಚ ಪಡೆದಿದ್ದಾರೆ ಹೀಗಾಗಿ ನ್ಯಾಯಸಮ್ಮತವಾದ ತನಿಖೆ ನಡೆಸಬೇಕೆಂದು, ಹಾಗೆನೇ ತಪ್ಪಿತಸ್ಥ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಇದರ ಜತೆಗೆ ಅನಧಿಕೃತ ಲೇಔಟ್ ನಿರ್ಮಾಣಕ್ಕೆ ಅವಕಾಶ ನೀಡಬಾರದೆಂದು ಆಗ್ರಹಿಸಿ ಪ್ರಜಾನ್ಯಾಯ ವೇದಿಕೆಯ ಹೋರಾಟಗಾರರು ಬಿಬಿಎಂಪಿ ಮುಖ್ಯ ಆಯುಕ್ತರ ಕಚೇರಿ ಮುಂದೆ ಹೋರಾಟ ನಡೆಸಿದ್ರು. ಸತತ ನಾಲ್ಕೈದು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ರೂ ಸ್ಥಳಕ್ಕೆ ಆಗಮಿಸದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವಿರುದ್ಧವೂ ಹೋರಾಟಗಾರರು ಅಸಮಧಾನ ಹೊರಹಾಕಿದ್ರು.
ಅಕ್ರಮದ ಗೂಡಾಗಿರುವ ಬಿಬಿಎಂಪಿಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರವನ್ನ ಪ್ರಶ್ನೆ ಮಾಡೋದೇ ತಪ್ಪು ಎನ್ನುವಂತಾಗಿದೆ. ಇಂಥ ಅಧಿಕಾರಿಗಳ ವಿರುದ್ಧ ತ್ವರಿತ ಕ್ರಮ ತೆಗೆದುಕೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರರು ಒತ್ತಾಯಿಸಿದ್ದಾರೆ.