ಬೆಂಗಳೂರು, (www.thenewzmirror.com) :
ಬೆಂಗಳೂರು ನಗರ ಈ ವರ್ಷ ಮಳೆ ಇಲ್ಲದೆ ತತ್ತರಿಸುತ್ತಿದೆ. ಬೆಂಗಳೂರಿನಲ್ಲಿ 6,900 ಕೊಳವೆ ಬಾವಿಗಳು ಬತ್ತಿದ್ದು, ಉಳಿದ 7 ಸಾವಿರ ಕೊಳವೆ ಬಾವಿಗಳು ಜೀವಂತವಾಗಿವೆ. ಹೀಗಾಗಿ ನೀರಿನ ಸಮರ್ಪಕ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಹೊಸ ಕೊಳವೆ ಬಾವಿ ಕೊರೆಯಲು ಅನುಮತಿ ನೀಡಬೇಕು. ಆ ಕೊಳವೆ ಬಾವಿಗಳ ನೀರನ್ನು ಸರಿಯಾಗಿ ನಿಯಂತ್ರಿಸಿ ಸದ್ಬಳಕೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿವರಿಸಿದರು.
ಬರ ಪರಿಸ್ಥಿತಿಯಲ್ಲಿ ನಾವೆಲ್ಲರೂ ನೀರನ್ನು ಬಹಳ ಜವಾಬ್ದಾರಿಯಿಂದ ಸಮರ್ಪಕವಾಗಿ ಬಳಸಬೇಕು. ಈ ವಿಚಾರವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅಗತ್ಯವಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ವಿಧಾನಸೌಧದ ಆವರಣದಲ್ಲಿ “ನೀರು ಉಳಿಸಿ ಬೆಂಗಳೂರು ಬೆಳಸಿ” ಅಭಿಯಾನಕ್ಕೆ ಚಾಲನೆ ಹಾಗೂ ಅಂತರ್ಜಲ, ಜಲಸಂರಕ್ಷಕ, ಜಲಮಿತ್ರ, ಜಲಸ್ನೇಹಿ ಆಪ್ ಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಬೆಂಗಳೂರಿನಲ್ಲಿವಕೊಳವೆ ಬಾವಿ ಕೊರೆಯಬೇಕಂದ್ರೆ ಅನುಮತಿ ಕಡ್ಡಾಯ ಇದಕ್ಕಾಗಿ ಜಲಮಂಡಳಿ ವತಿಯಿಂದ ನಾಲ್ಕು ಆಪ್ ಗಳನ್ನು ಪರಿಚಯಿಸುತ್ತಿದ್ದು, ಯಾರೇ ಹೊಸ ಕೊಳವೆಬಾವಿ ಕೊರೆಯುವಾಗ ಬಿಡಬ್ಲ್ಯೂಎಸ್ಎಸ್ ಬಿಯಿಂದ ಅನುಮತಿ ಪಡೆಯಬೇಕಾಗಿದೆ. ಇದರಲ್ಲಿ ಹೆಚ್ಚುವರಿ ನೀರನ್ನು ಸರ್ಕಾರ ಯಾರಿಗೆ ಹಂಚಿಕೆ ಮಾಡಬೇಕು ಎಂದು ತೀರ್ಮಾನಿಸಲು ಹಾಗೂ ನೀರಿನ ಸಮರ್ಪಕ ಬಳಕೆಗೆ ಈ ಆಪ್ ತರಲಾಗಿದೆ.
ಕಳೆದ ಹತ್ತು ವರ್ಷಗಳಿಂದ ನೀರಿನ ದರವನ್ನ ಏರಿಕೆ ಮಾಡಿಲ್ಲ. ನಾನು ಈ ಇಲಾಖೆ ಜವಾಬ್ದಾರಿ ವಹಿಸಿಕೊಂಡ ದಿನದಿಂದಲೇ ಬಿಡಬ್ಲ್ಯೂಎಸ್ಎಸ್ ಬಿಗೆ ಶಕ್ತಿ ತುಂಬಲು ತೀರ್ಮಾನಿಸಿದ್ದೇನೆ ಎಂದು ಡಿಸಿಎಂ ಹೇಳಿದರು.