ನವದೆಹಲಿ, (www.thenewzmirror.com) :
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರೂ ಆಗಿರುವ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಗುರುವಾರ ಭೇಟಿ ಮಾಡಿ ಸಮಾಲೋಚಿಸಿದರು.
ಶಾ ಅವರ ಆಹ್ವಾನದ ಮೇರೆಗೆ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದೇನೆ ಎಂದು ಜನಾರ್ದನ ರೆಡ್ಡಿ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡುವಂತೆ ಶಾ ಅವರು ಗಾಲಿ ಅವರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ರೆಡ್ಡಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಲೋಕಸಭಾ ಹಾಗೂ ರಾಜ್ಯಸಭಾ ಚುನಾವಣೆಗಳಲ್ಲಿ ಪಕ್ಷಕ್ಕೆ ಬೆಂಬಲ ನೀಡುವಂತೆ ಜನಾರ್ದನ ರೆಡ್ಡಿ ಅವರಿಗೆ ಬಿಜೆಪಿ ನಾಯಕರು ಮನವಿ ಮಾಡಿದ್ದರು. ಆದರೆ, ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಗಾಲಿ ಮತ ಚಲಾಯಿಸಿದ್ದರು.
ಬಳ್ಳಾರಿಯಿಂದ ಜನಾರ್ಧನರೆಡ್ಡಿ ಪಕ್ಷದ ಅಭ್ಯರ್ಥಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳೂ ಕೇಳಿ ಬಂದಿದ್ದವು. ಬಿಜೆಪಿಯಿಂದ ಈಗಾಗಲೇ ಶ್ರೀರಾಮುಲು ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಇಂಥ ಸಂಧರ್ಭದಲ್ಲಿ ಜನಾರ್ಧನ ರೆಡ್ಡಿ ದೆಹಲಿ ಭೇಟಿ ತೀಬ್ರ ಕುತೂಹಲ ಮೂಡಿಸಿದೆ. ಲೋಕ ಸಮರದ ಹೊತ್ತಲ್ಲೇ ತಮ್ಮ ಪಕ್ಷವನ್ನ ಬಿಜೆಪಿ ಜತೆ ವಿಲೀನಗೊಳಿಸುವ ನಿಟ್ಟಿನಲ್ಲಿ ತೀರ್ಮಾನ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆಮೂಲಕ ತನ್ನ ಕುಚಿಕು ಗೆಳೆಯ ಶ್ರೀರಾಮುಲು ಅವರ ಗೆಲುವಿಗೆ ರೆಡ್ಡಿಗಾರು ಸಹಕರಿಸಿದ್ರಾ ಎಂಬ ಮಾತುಗಳೂ ಕೇಳಿ ಬರುತ್ತಿದೆ.