ನವದೆಹಲಿ, www.thenewzmirror.com) :
ಲೋಕಸಭೆ ಚುನಾವಣೆ ಹೊತ್ತಲ್ಲೇ ಕೇಂದ್ರ ಸರ್ಕಾರ ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟಿದೆ.
ಲೋಕಸಭೆ ವೇಳಾಪಟ್ಟಿ ಘೋಷಣೆಗೂ ಮುನ್ನವೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 2 ರೂ.ಗಳಷ್ಟು ಇಳಿಕೆ ಮಾಡಿದೆ. ನೂತನ ದರ ಇಂದಿನಿಂದಲೇ ಜಾರಿಗೆ ಬರಲಿದೆ.
ಮುಂಬರುವ ಲೋಕಸಭೆ ಚುನಾವಣೆಯ ದೃಷ್ಟಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಬಹುದು ಎಂಬ ಊಹಾಪೋಹಗಳು ವ್ಯಾಪಕವಾಗಿದ್ದವು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅಡುಗೆ ಅನಿಲದ ಬೆಲೆಯಲ್ಲಿ ಪ್ರತಿ ಸಿಲಿಂಡರ್‌ಗೆ 100 ರೂಪಾಯಿ ಕಡಿತಗೊಳಿಸುವುದಾಗಿ ಘೋಷಿಸಿದ್ದರು. ಈ ಬೆಲೆ ಇಳಿಕೆಯಿಂದ ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು (ಎಲ್‌ಪಿಜಿ) ಅಡುಗೆ ಇಂಧನವಾಗಿ ಬಳಸುವ ಸುಮಾರು 33 ಕೋಟಿ ಕುಟುಂಬಗಳಿಗೆ ಪ್ರಯೋಜನವಾಗಿದೆ.
ಲೋಕಸಭೆ ಚುನಾವಣೆ ಹಾಗೂ ವರ್ಷಾಂತ್ಯದಲ್ಲಿ ಹಲವು ರಾಜ್ಯಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಕಲ ರೀತಿಯಲ್ಲಿ ಸಜ್ಜಾಗುತ್ತಿದ್ದಾರೆ. ಇದರ ಭಾಗವಾಗಿಯೇ ಕೇಂದ್ರ ಸರ್ಕಾರವು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 200 ರೂ. ಇಳಿಸಿತ್ತು. ಆ ಮೂಲಕ ಬಡವರು ಹಾಗೂ ಮಧ್ಯಮ ವರ್ಗದವರ ಹೊರೆಯನ್ನು ಕಡಿಮೆ ಮಾಡಿದೆ. ಇಷ್ಟೇ ಅಲ್ಲ, ಪೆಟ್ರೋಲ್ (Petrol Price Cut) ಸೇರಿ ಹಲವು ಉತ್ಪನ್ನಗಳ ಬೆಲೆಯನ್ನು ಇಳಿಕೆ ಮಾಡುವುದು ಕೇಂದ್ರ ಸರ್ಕಾರದ ಗುರಿಯಾಗಿತ್ತು.
ದೇಶದಲ್ಲಿ ಎಲ್ಲಿಯೇ ಚುನಾವಣೆ ನಡೆದರೂ ಬೆಲೆಯೇರಿಕೆಯು ಪ್ರತಿಪಕ್ಷಗಳ ಅಸ್ತ್ರವಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿದ್ದು ಇದಕ್ಕೆ ಕಾರಣವಾಗಿದೆ. ಹಾಗಾಗಿ, ಪ್ರತಿಪಕ್ಷಗಳ ಅಸ್ತ್ರದಿಂದ ತಪ್ಪಿಸಿಕೊಳ್ಳುವುದು ಹಾಗೂ ಜನರ ಹೊರೆ ಕಡಿಮೆ ಮಾಡುವ ಮೂಲಕ ಅವರ ವಿಶ್ವಾಸ ಗಳಿಸುವುದು ಕೇಂದ್ರದ ಉದ್ದೇಶವಾಗಿದೆ. ಹಾಗಾಗಿ, ಈಗ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನೂ ಇಳಿಕೆ ಮಾಡಲಾಗಿದೆ.