ಬೆಂಗಳೂರು, ( www.thenewzmirror.com) ;
ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳಿಗೆ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರನ್ನ ನೇಮಕ ಮಾಡಿ AICC ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ. ಅದೇ ರೀತಿ ಕರ್ನಾಟಕ ಕಾಂಗ್ರೆಸ್ ನ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಮಾಜಿ ಶಾಸಕಿ ಹಾಗೂ ಸಾರಿಗೆ ಸಚಿವರ ಪುತ್ರಿ ಸೌಮ್ಯ ರೆಡ್ಡಿಯನ್ನ ನೇಮಕ ಮಾಡಲಾಗಿದೆ.
ಕರ್ನಾಟಕ ರೀತಿ ಅರುಣಾಚಲ ಪ್ರದೇಶ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷೆಯಾಗಿ ಚುಕು ನಾಚಿ, ಚತ್ತೀಘಡ್ ರಾಜ್ಯಕ್ಕೆ ನಂದೀತಾ ಹೂಡ ರನ್ನ ನೇಮಕ ಮಾಡಲಾಗಿದೆ.
ಸದ್ಯ ಸೌಮ್ಯ ರೆಡ್ಡಿ AIMC ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷವನ್ನ ಸಂಘಟಿಸೋ ಕೆಲ್ಸ ಮಾಡುತ್ತಿದ್ದರು. ಇವರ ನೇತೃತ್ವದಲ್ಲಿ ರಾಜ್ಯಾದ್ಯಂತ ದೊಡ್ಡ ಮಟ್ಟದ ಹೋರಾಟಗಳೂ ನಡೆದಿದ್ದವು.
ಎರಡು ವಾರಗಳ ಹಿಂದೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನಕ್ಕೆ ಸಂದರ್ಶನ ನಡೆಸಿದ್ದ ಕಾಂಗ್ರೆಸ್ ಹೈಕಮಾಂಡ್, ಅಂತಿಮವಾಗಿ ಸೌಮ್ಯರೆಡ್ಡಿಗೆ ಕೆಪಿಸಿಸಿ ಮಹಿಳಾ ಅಧ್ಯಕ್ಷೆಯಾಗಿ ಅವಕಾಶ ಮಾಡಿಕೊಟ್ಟಿದೆ. ಸೌಮ್ಯ ರೆಡ್ಡಿ ಒಮ್ಮೆ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿದ್ದರು. ಹಾಗೆನೇ 2024 ರ ಲೋಕಸಭಾ ಚುನಾವಣೆ ವೇಳೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಸಂಸದ ತೇಜಸ್ವಿಸೂರ್ಯರಿಗೆ ಪ್ರಬಲ ಪೈಪೋಟಿ ನೀಡಿದ್ದರು.
ತಂದೆಯಿಂದ ಅಭಿನಂದನೆ
ಮಗಳು ಸೌಮ್ಯರೆಡ್ಡಿ ಕರ್ನಾಟಕ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವುದಕ್ಕೆ ಸೌಮ್ಯರೆಡ್ಡಿ ತಂದೆ ಹಾಗೂ ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೆನೇ ರಾಜ್ಯದಲ್ಲಿ ಮಹಿಳಾ ಪರ ಧ್ವನಿ ಎತ್ತುವ ಕೆಲಸದ ಜತೆಗೆ ಪಕ್ಷವನ್ನ ಕಟ್ಟುವ ಕೆಲಸ ಇನ್ನಷ್ಟು ಆಗಲಿ ಅಂತಾನೂ ಹರಸಿದ್ದಾರೆ.
ಸೌಮ್ಯ ರೆಡ್ಡಿ ಹಿನ್ನಲೆ
ಸೌಮ್ಯ ರೆಡ್ಡಿ ಮಾರ್ಚ್ 18, 1983ರಲ್ಲಿ ಜನಿಸಿದ್ದು, ಅವರಿಗೀಗ 41 ವರ್ಷ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ. ಆರ್.ವಿ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಅಧ್ಯಯನ ಪೂರ್ಣಗೊಳಿಸಿ, ನ್ಯೂಯಾರ್ಕ್‌ನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಎಸ್ ಅಧ್ಯಯನ ಮಾಡಿದ್ದಾರೆ. ಪರಿಸರವಾದಿ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿಯೂ ಗುರ್ತಿಸಿಕೊಂಡಿದ್ದಾರೆ. ಸದ್ಯ ಕರ್ನಾಟಕ ರಾಜ್ಯದ ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿಯೂ ಹೌದು.