ಬೆಂಗಳೂರು, (www.thenewzmirror.com) ;
ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ(ಅಭಿವೃದ್ಧಿ) ಮತ್ತು ಅಧಿಕಾರ ಕೇಂದ್ರವು(IN-SPAce-ಇನ್-ಸ್ಪೇಸ್) ಅಡಿಲೇಡ್‌ನಲ್ಲಿ ಜುಲೈ 24 ಮತ್ತು 25ರಂದು ಆಯೋಜಿತವಾದ 17ನೇ ಆಸ್ಟ್ರೇಲಿಯಾ ಬಾಹ್ಯಾಕಾಶ ವೇದಿಕೆಗೆ ಭಾರತೀಯ ಬಾಹ್ಯಾಕಾಶ ವಲಯದ ನವೋದ್ಯಮ (ಸ್ಟಾರ್ಟಪ್)ಗಳ ನಿಯೋಗವನ್ನು ಮುನ್ನಡೆಸಿತು. 2 ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಇನ್-ಸ್ಪೇಸ್ ಸಾರಥ್ಯ(ನೇತೃತ್ವ)ದ ನಿಯೋಗವು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಬೆಳೆಯುತ್ತಿರುವ ಪರಾಕ್ರಮಗಳು ಮತ್ತು ಅಂತಾರಾಷ್ಟ್ರೀಯ ಸಹಭಾಗಿತ್ವ ಬಲಪಡಿಸುವುದನ್ನು ಎತ್ತಿ ತೋರಿಸಿದೆ.
ಇನ್-ಸ್ಪೇಸ್‌ನ ಉತ್ತೇಜನ(ಅಭಿವೃದ್ಧಿ) ವಿಭಾಗದ ನಿರ್ದೇಶಕ ಡಾ. ವಿನೋದ್ ಕುಮಾರ್, ಇನ್-ಸ್ಪೇಸ್ ಉಪನಿರ್ದೇಶಕ ಶಶಾಂಕ್ ಸಕ್ಸೇನಾ ನೇತೃತ್ವದ ನಿಯೋಗದಲ್ಲಿ ಭಾರತೀಯ ಕಂಪನಿಗಳಾದ ಅಗ್ನಿಕುಲ್ ಕಾಸ್ಮೋಸ್, ಟೇಕ್‌ಮೀ2ಸ್ಪೇಸ್, ಧ್ರುವ ಸ್ಪೇಸ್, ಬೆಲ್ಲಟ್ರಿಕ್ಸ್ ಏರೋಸ್ಪೇಸ್, ಎಕ್ಸ್‌ಡಿಎಲ್‌ಐಎನ್‌ಎಕ್ಸ್ ಸ್ಪೇಸ್, ಮಿಸ್ಟ್|ಇಒ ಆರ್ಬಿಟ್|ಏಡ್ ಏರೋಸ್ಪೇಸ್ ಮತ್ತು ಸ್ಕೈರೂಟ್ ಏರೋಸ್ಪೇಸ್ ಭಾಗವಹಿಸಿದ್ದವು.
ಅತ್ಯಾಧುನಿಕ ಬಾಹ್ಯಾಕಾಶ ಯೋಜನೆಗಳು, ಉತ್ಪನ್ನಗಳು ಮತ್ತು ಸೇವೆಗಳನ್ನು ಈ ವೇಳೆ ಪ್ರದರ್ಶಿಸಲಾಯ್ತು. ಜತೆಗೆ ಆಸ್ಟ್ರೇಲಿಯಾದ ಬಾಹ್ಯಾಕಾಶ ವಲಯದ ನವೋದ್ಯಮಗಳು, ಕಂಪನಿಗಳು ಮತ್ತು ವಿವಿಧ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಹಲವು ವ್ಯಾಪಾರ-ವ್ಯವಹಾರ ಸಭೆಗಳಲ್ಲಿ ಪಾಲ್ಗೊಂಡು, ಚರ್ಚೆ ಸಂವಾದಗಳನ್ನು ನಡೆಸಿದವು.
ಗಮನಾರ್ಹ ವಿಷಯವೆಂದರೆ, ಬಾಹ್ಯಾಕಾಶ ವೇದಿಕೆಯ ಕಾರ್ಯಕ್ರಮ ಸಮಯದಲ್ಲಿ 2 ಮಹತ್ವದ ತಿಳಿವಳಿಕೆ ಪತ್ರಗಳಿಗೆ(ಎಂಒಯು) ಸಹಿ ಹಾಕಲಾಯ್ತು. ಉಪಗ್ರಹಗಳ ಜೀವಿತಾವಧಿ ವಿಸ್ತರಣೆ ಪರಿಹಾರಗಳನ್ನು ಅಭಿವೃದ್ಧಿಪಡಿಸುವಲ್ಲಿ ಪರಿಣತಿ ಹೊಂದಿರುವ ಭಾರತೀಯ ಕಂಪನಿ “ಆರ್ಬಿಟ್ ಏಡ್” ಮತ್ತು ಆಸ್ಟ್ರೇಲಿಯಾದ ಉಪಗ್ರಹ ವೇದಿಕೆ ಹೊಂದಿರುವ ಕಂಪನಿ “ಹೆಕ್ಸ್20” ನಡುವೆ ಮೊದಲ ತಿಳಿವಳಿಕೆ ಒಪ್ಪಂದ ಏರ್ಪಟ್ಟಿದೆ. ಕಕ್ಷೆಯಲ್ಲಿ ಇಂಧನ ತುಂಬುವ ತಂತ್ರಜ್ಞಾನ ಪ್ರದರ್ಶನಕ್ಕೆ ಸಂಬಂಧಿಸಿದಂತೆ “ಆರ್ಬಿಟ್ ಏಡ್” ಮತ್ತು “ಹೆಕ್ಸ್20” ಸಹಭಾಗಿತ್ವದ ಸಹಕಾರ ಹೊಂದಿದವು.
“ಹೆಕ್ಸ್20” ಮತ್ತು “ಟೇಕ್‌ಮೀ2ಸ್ಪೇಸ್” ಕಂಪನಿಗಳು 2ನೇ ತಿಳಿವಳಿಕೆ ಪತ್ರ ಅಥವಾ ಒಡಂಬಡಿಕೆಗೆ ಸಹಿ ಮಾಡಿವೆ. ಭಾರತದ “ಟೇಕ್‌ಮೀ2ಸ್ಪೇಸ್” ನವೋದ್ಯಮವು ‘ಕೃತಕ ಬುದ್ಧಿಮತ್ತೆ(ಎಐ)-ಫಸ್ಟ್ ಕಂಪ್ಯೂಟ್ ಮತ್ತು ಶೇಖರಣಾ ಉಪಗ್ರಹ ಮೂಲಸೌಕರ್ಯ ಅಭಿವೃದ್ಧಿ’ಯಲ್ಲಿ ತೊಡಗಿಸಿಕೊಂಡಿದೆ. “ಟೇಕ್‌ಮೀ2ಸ್ಪೇಸ್” ಮತ್ತು “ಹೆಕ್ಸ್20” ಕಂಪನಿಗಳು ಶಿಕ್ಷಣ, ಬಾಹ್ಯಾಕಾಶ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಸಹಭಾಗಿತ್ವ ಸಹಕಾರ ಹೊಂದಿವೆ. ಒಪ್ಪಂದದ ಭಾಗವಾಗಿ, “ಹೆಕ್ಸ್20” ಕಂಪನಿಯು ತನ್ನ ಫ್ಲಾಟ್‌ಸ್ಯಾಟ್‌ನಲ್ಲಿ “ಟೇಕ್‌ಮೀ2ಸ್ಪೇಸ್”ನ ಕೃತಕ ಬುದ್ಧಿಮತ್ತೆ(ಎಐ) ಮಾಡ್ಯೂಲ್‌ಗಳು ಮತ್ತು ಉಪವ್ಯವಸ್ಥೆಗಳನ್ನು ಬಳಸುತ್ತದೆ. “ಟೇಕ್‌ಮೀ2ಸ್ಪೇಸ್” ತನ್ನ ಆರ್ಬಿಟ್‌ಲ್ಯಾಬ್ ವೇದಿಕೆಗೆ ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ನೈಜ ಸಮಯದಲ್ಲಿ ತಮ್ಮ ನಿಜವಾದ ಉಪಗ್ರಹ ಮಾದರಿಗಳನ್ನು ಪರೀಕ್ಷಿಸಲು ಮತ್ತು ಚಲಾಯಿಸಲು ಪ್ರವೇಶ ನೀಡುತ್ತದೆ.
ಇನ್-ಸ್ಪೇಸ್ ಉತ್ತೇಜನಾ(ಅಭಿವೃದ್ಧಿ) ವಿಭಾಗದ ನಿರ್ದೇಶಕ ಡಾ. ವಿನೋದ್ ಕುಮಾರ್ ಮತ್ತು ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆಯ ಮುಖ್ಯಸ್ಥ ಎನ್ರಿಕೊ ಪಲೆರ್ಮೊ ಉಪಸ್ಥಿತಿಯಲ್ಲಿ ಎರಡೂ ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
“ಭಾರತೀಯ ಬಾಹ್ಯಾಕಾಶ ಸ್ಟಾರ್ಟಪ್‌ಗಳು ತಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಮತ್ತು ಆಸ್ಟ್ರೇಲಿಯಾದ ಪಾಲುದಾರರೊಂದಿಗೆ ಸಂಭಾವ್ಯ ಸಹಭಾಗಿತ್ವ ಅನ್ವೇಷಿಸಲು ಆಸ್ಟ್ರೇಲಿಯನ್ ಸ್ಪೇಸ್ ಫೋರಮ್ ಅಮೂಲ್ಯ ವೇದಿಕೆ ಒದಗಿಸಿದೆ. ಈ ತಿಳಿವಳಿಕೆ ಒಪ್ಪಂದಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ನಮ್ಮ 2 ರಾಷ್ಟ್ರಗಳ ನಡುವಿನ ಬಾಂಧವ್ಯ ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಇನ್-ಸ್ಪೇಸ್ ಉತ್ತೇಜನಾ ವಿಭಾಗದ ನಿರ್ದೇಶಕ ಡಾ. ವಿನೋದ್ ಕುಮಾರ್ ಹೇಳಿದ್ದಾರೆ.